- ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೇ. 4.1ರಷ್ಟು ಹೆಚ್ಚಿನ ಬಾಡಿಗೆ ಇದೆ
- ಮಾರತಹಳ್ಳಿಯಲ್ಲಿ ₹22,500 ರಿಂದ ₹28,000ರವರೆಗೆ 2ಬಿಹೆಚ್‌ಕೆ ಬಾಡಿಗೆ ದರ ಇದೆ
ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ದರ ಗಗನಕ್ಕೇರಿದೆ. ಅದರಲ್ಲಿಯೂ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ 1000 ಚದರ ಅಡಿಯ 2 ಬಿಹೆಚ್‌ಕೆ ಮನೆಗಳಿಗೆ ಸರಾಸರಿ ಮಾಸಿಕ ಬಾಡಿಗೆ ದರ ಶೇ.24ರಷ್ಟು ಏರಿಕೆಯಾಗಿದೆ. ನಗರದಲ್ಲಿ ಬಾಡಿಗೆ ಮನೆ ಹುಡುಕಲು ಜನರು ಪರದಾಟ ನಡೆಸಿದ್ದಾರೆ.
ಪ್ರಾಪರ್ಟಿ ಕನ್ಸಲ್ಟೆಂಟ್ ಅನರಾಕ್ ಗುರುವಾರ ಈ ಬಗ್ಗೆ ವರದಿ ಪ್ರಕಟಿಸಿದೆ. ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆ, ಮಾನ್ಯತಾ ಟೆಕ್ ಪಾರ್ಕ್ ಬಳಿ ಹಾಗೂ ಮಾರತ್ತಹಳ್ಳಿ-ಹೊರ ವರ್ತುಲ ರಸ್ತೆ ಟೆಕ್ ಕಾರಿಡಾರ್‌ನಲ್ಲಿ ವಸತಿ ಬಾಡಿಗೆ ದರಗಳು ಕಳೆದ ಒಂದು ವರ್ಷದಲ್ಲಿ 24% ಏರಿಕೆ ಕಂಡಿವೆ.
ಬೆಂಗಳೂರಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಬಾಡಿಗೆ ಬೇಡಿಕೆ ಹೆಚ್ಚಿದೆ. ಇನ್ನುಳಿದ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೇ. 4.1ರಷ್ಟು ಹೆಚ್ಚಿನ ಬಾಡಿಗೆ ಇದೆ. ಮುಂಬೈನಲ್ಲಿ ಶೇ.3.9 ರಷ್ಟಿದೆ.
ಥಣಿಸಂದ್ರ ಮುಖ್ಯ ರಸ್ತೆಯಲ್ಲಿ 2022ರಲ್ಲಿ ಸುಮಾರು ₹21,000 ಇದ್ದ ಬಾಡಿಗೆಗಳ ದರ 2023ರಲ್ಲಿ ₹26,000ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಮಾರತಹಳ್ಳಿಯಲ್ಲಿ ಹೆಚ್ಚಾಗಿ ಐಟಿ-ಬಿಟಿ ಕಂಪನಿಗಳಿವೆ. ಕಳೆದ ವರ್ಷ ಕೋವಿಡ್ ಹಿನ್ನೆಲೆ, ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೆಲಸ ನೀಡಿತ್ತು. ಈಗ ಸಾಂಕ್ರಾಮಿಕ ತಗ್ಗಿದ ನಂತರ ಕಂಪನಿಗಳು ಉದ್ಯೋಗಿಗಳಿಗೆ ಆಫೀಸ್‌ಗೆ ಬರುವಂತೆ ಸೂಚನೆ ನೀಡಿವೆ. ಹಾಗಾಗಿ, ಇಷ್ಟು ತಿಂಗಳು ತೆರವಾಗಿದ್ದ ಮನೆಗಳ ಬಾಡಿಗೆ ದರ ಹೆಚ್ಚಳವಾಗಿವೆ. ಮಾರತಹಳ್ಳಿಯಲ್ಲಿ ₹22,500 ರಿಂದ ₹28,000ರವೆಗೆ 2ಬಿಹೆಚ್‌ಕೆ ಬಾಡಿಗೆ ದರ ಇದೆ.
ವೈಟ್‌ಫೀಲ್ಡ್ ಪ್ರದೇಶದಲ್ಲಿ ಈ ವರ್ಷ ಸರಾಸರಿ ₹26,500ವರೆಗೆ ಬಾಡಿಗೆದರ ಏರಿಕೆಯಾಗಿದೆ. 21% ರಷ್ಟು ದರ ಹೆಚ್ಚಳವನ್ನು ಕಂಡಿದೆ. ಸರ್ಜಾಪುರ ರಸ್ತೆ (ಸರ್ಜಾಪುರ ಗ್ರಾಮವನ್ನು ಹೊರತುಪಡಿಸಿ) 20% ರಷ್ಟು ಏರಿಕೆ ಕಂಡಿದ್ದು, 1000 ಚದರ ಅಡಿ 2 ಬಿಎಚ್‌ಕೆ ಮಾಸಿಕ ಬಾಡಿಗೆ ದರ ಸರಾಸರಿ ₹27,000ಕ್ಕೆ ತಲುಪಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹30 ಲಕ್ಷ ಮೌಲ್ಯದ ಗಾಂಜಾ ವಶ ; ಓರ್ವನ ಬಂಧನ
ಅನರಾಕ್ ಗ್ರೂಪ್‌ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಪ್ರಶಾಂತ್ ಠಾಕೂರ್ ಪ್ರಕಾರ, ಬಾಡಿಗೆ ಬೇಡಿಕೆ ಮತ್ತು ಏರಿಕೆ ಗಮನಿಸಿದಾಗ ಬೆಂಗಳೂರು ಪ್ರಸ್ತುತ ಟಾಪ್ 7 ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಬಾಡಿಗೆ ದರ ಹೆಚ್ಚಳವಾಗಿದೆ.
ಪುಣೆಯ ಹಿಂಜೇವಾಡಿ ಮತ್ತು ವಾಘೋಲಿಯಲ್ಲಿ ಕ್ರಮವಾಗಿ ಶೇ. 19 ಮತ್ತು ಶೇ. 13 ಬಾಡಿಗೆ ಏರಿಕೆ ಆಗಿದೆ. ಚೆನ್ನೈನಲ್ಲಿ ಪಲ್ಲವರಂ, ಪೆರಂಬೂರ್ ಮತ್ತು ಒರಗಡಂನಲ್ಲಿ ಕ್ರಮವಾಗಿ ಶೇ.16, ಶೇ.10 ಹಾಗೂ ಶೇ. 11 ರಷ್ಟು ಬಾಡಿಗೆ ದರಗಳು ಏರಿಕೆ ಆಗಿವೆ. ದೆಹಲಿಯ ದ್ವಾರಕಾದಲ್ಲಿ ಶೇ. 10ರಷ್ಟು ಏರಿಕೆ ಆಗಿದೆ.