ರಾಜ್ಯ ರಾಜಧಾನಿ ಬೆಂಗಳೂರಿಗೆ ಹಲವಾರು ಜನ ಕೆಲಸ ಅರಸಿ ಬಂದು ನಗರದಲ್ಲಿರುವ ಐಟಿ-ಬಿಟಿ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಮೂಲ ಬೆಂಗಳೂರಿಗರು ಸಿಗುವುದಕ್ಕಿಂತ ವಲಸೆ ಬಂದ ಕಾರ್ಮಿಕರೇ ದುಪ್ಪಟ್ಟಾಗಿದ್ದಾರೆ. ಇನ್ನು ಗುರುವಾರದಿಂದ ಸೋಮವಾರದವರೆಗೆ ಸಾಲು ಸಾಲು ರಜೆ ಇರುವ ಹಿನ್ನೆಲೆ, ಬಹುತೇಕ ಜನರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಬುಧವಾರ ಊರಿಗೆ ತೆರಳಲು ಒಮ್ಮೆಲೆ ನೂರಾರು ಜನ ರಸ್ತೆಗೆ ಇಳಿದ ಕಾರಣ ನಗರದ ಬಹುತೇಕ ಭಾಗಗಳಲ್ಲಿ 2 ಗಂಟೆಗಳಿಗೂ ಹೆಚ್ಚು ಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.
ಸೆ.28 ರಂದು ಈದ್ ಮಿಲಾದ್ ಹಬ್ಬ, ಸೆ.29 ರಂದು ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೋರಾಟಗಾರ ವಾಟಾಳ್ ನಾಜರಾಜ್ ನೇತೃತ್ವದಲ್ಲಿ ನಾನಾ ಸಂಘಟನೆಗಳು ‘ಕರ್ನಾಟಕ ಬಂದ್’ಗೆ ಕರೆ ನೀಡಿವೆ. ಶನಿವಾರ ಮತ್ತು ಭಾನುವಾರ ಹಲವಾರು ಖಾಸಗಿ ಕಂಪನಿಗಳಿಗೆ ರಜೆ ಇದೆ. ಇನ್ನು ಅ.2 ರಂದು ಗಾಂಧಿ ಜಯಂತಿ ಹಿನ್ನೆಲೆ ರಜೆ ಇದೆ. ಹೀಗೆ ಸಾಲು ಸಾಲು ರಜೆಗಳು ಇರುವುದರಿಂದ ಜನರು ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಬುಧವಾರ ಬೆಂಗಳೂರು ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸವಾರರು ಪರದಾಡುವಂತಾಯಿತು. ನೂರಾರು ಜನ ರಸ್ತೆಗೆ ಬಂದಿದ್ದರಿಂದ ಕಾರ್ಪೊರೇಷನ್ ವೃತ್ತದಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ಸಂಪೂರ್ಣ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದ ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಸಂಚಾರ ಮಂದಗತಿಯಲ್ಲಿ ಸಾಗಿತು.
ಬುಧವಾರ ಬೆಂಗಳೂರು ಭಾರೀ ಸಂಚಾರ ದಟ್ಟಣೆಗೆ ಸಾಕ್ಷಿಯಾಯಿತು. ಕೀಲೋ ಮೀಟರ್ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದ ಪರಿಣಾಮ ಗಂಟೆಗಟ್ಟಲೇ ರಸ್ತೆಯಲ್ಲಿ ಕಾದ ವಾಹನ ಸವಾರರು, ಶಾಲಾ ಮಕ್ಕಳು ಹೈರಾಣಾದರು.
ಮಹದೇವಪುರ ವಲಯದಲ್ಲಿ ಬುಧವಾರ ಸಂಜೆ ಸಾಧಾರಣ ಮಳೆ ಸುರಿಯಿತು. ಇದರಿಂದ ಹೊರ ವರ್ತುಲ ರಸ್ತೆ ಮತ್ತು ಆರ್ಟಿರಿಯಲ್ ರಿಂಗ್ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಗಣೇಶ ವಿಸರ್ಜನೆ ಮತ್ತು ಜನ ಸಂಚಾರ ಹೆಚ್ಚಾಗಿ ಇರುವುದು ವಾಹನ ದಟ್ಟಣೆಗೆ ಮತ್ತಷ್ಟು ಕಾರಣವಾಗಿದೆ. ಸಾಯಂಕಾಲ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಾರೀ ದಟ್ಟಣೆ ಉಂಟಾಗಿತ್ತು.
ಈ ಸಂಚಾರ ದಟ್ಟಣೆ ಬಗ್ಗೆ ಹಲವು ಜನ ಟ್ವೀಟ್(ಎಕ್ಸ್) ಮಾಡಿದ್ದು, “ಕೇವಲ 8 ಕಿ.ಮೀ ಕ್ರಮಿಸಲು ಕಳೆದ 2.5 ಗಂಟೆಗಳಿಂದ ಓಆರ್‌ಆರ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೆ. ಇನ್ನೂ ಮನೆಗೆ ತಲುಪಿಲ್ಲ. ಇಂದಿನ ಟ್ರಾಫಿಕ್ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ” ಎಂದು ತ್ರಿಲೋಚನ ದೇಕಾ ಎಂಬ ಟ್ವೀಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
It's midnight now & #Bengaluru Massive traffic jam on the ORR stretch continues
— Karnataka Weather (@Bnglrweatherman) September 27, 2023
Unforgettable experience for the citizens#BengaluruTraffic #ORRTraffic #BengaluruTrafficJam #ORRTrafficJam #Bangalore #BangaloreTraffic #BangaloreTrafficJam
(Credits to the original owners) https://t.co/xznWBOPOSD pic.twitter.com/1fEswylBEm
“ಓಆರ್‌ಆರ್, ಸರ್ಜಾಪುರ, ವರ್ತೂರು ರಸ್ತೆ ಸಂಚಾರ ದಟ್ಟಣೆಗೆ ಕುಖ್ಯಾತಿಗೆ ಪಡೆದಿವೆ. ಇತರ ಎಲ್ಲ ಪ್ರಮುಖ ರಸ್ತೆಗಳು, ಸರ್ವೀಸ್ ರಸ್ತೆಗಳಲ್ಲಿ ಹಿಂದೆಂದೂ ಇಲ್ಲದ ಟ್ರಾಫಿಕ್ ಜಾಮ್ ಬುಧವಾರ ಉಂಟಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೆಕ್ ಕಾರಿಡಾರ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗಬೇಕು. ಈ ಸಂಚಾರ ದಟ್ಟಣೆಯೂ ಸರ್ಕಾರದ ಸಂಪೂರ್ಣ ವೈಫಲ್ಯ ತೋರುತ್ತದೆ” ಎಂದು ನಮ್ಮ ಬಳಗೆರೆ ಎಂಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.
“ಮಹದೇವಪುರ ಮತ್ತು ಓಆರ್‌ಆರ್‌ನಲ್ಲಿ ಲಕ್ಷಾಂತರ ಜನರು ಟ್ರಾಫಿಕ್‌ನಲ್ಲಿ ಸಿಲುಕಿ ಬಿದ್ದಿದ್ದಾರೆ. ಕಳೆದ 2 ಗಂಟೆಗಳಲ್ಲಿ 3-4 ಕಿಮೀ ಚಲಿಸಲಾಗಿದೆ. ಸಂಪೂರ್ಣ ಪ್ರದೇಶ ವಾಹನ ಸಂಚಾರ ದಟ್ಟಣೆಯಿಂದ ಬಂದ್ ಆಗಿದೆ. ದಟ್ಟಣೆಯನ್ನು ಕಡಿಮೆ ಮಾಡಿ ಮತ್ತು ಟ್ರಾಫಿಕ್ ನಿರ್ವಹಣೆಯ ಬಗ್ಗೆ ಗಂಭೀರವಾಗಿ ಯೋಚಿಸಿ” ಎಂದು ಬೆಳ್ಳಂದೂರು ಉಳಿಸಿ ಟ್ವೀಟ್ ಮಾಡಿದ್ದಾರೆ.
ವಾಹನ ಸಂಚಾರ ದಟ್ಟಣೆ ಉಂಟಾಗಲು ಮತ್ತೊಂದು ಕಾರಣವೆಂದರೆ, ಬೆಂಗಳೂರಿನಲ್ಲಿ ಬುಧವಾರದಂದು ಭಾರತ ಪ್ರವಾಸದಲ್ಲಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ನಗರದ ಹೊರ ವರ್ತುಲ ರಸ್ತೆಯಲ್ಲಿ ನಡೆಸಬೇಕಿದ್ದ ಪ್ರದರ್ಶನ ರದ್ದುಗೊಳಿಸಿದ್ದರು. ಅವರು ಸಹ ಸುಮಾರು 30 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಳೆ ದ್ವೇಷಕ್ಕೆ ಸಂಗಡಿಗನ ಹತ್ಯೆ; ನಾಲ್ವರ ಬಂಧನ
ಹಾಸ್ಯನಟರ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದ ಹಲವಾರು ಬೆಂಗಳೂರು ನಿವಾಸಿಗಳು ಹಾಜರಾಗಲು ತಮ್ಮ ಕಚೇರಿಯಿಂದ ಬೇಗ ಹೊರಟಿದ್ದರು. ಇದು ಅವರ ಪ್ರದರ್ಶನಕ್ಕೆ ಹೋಗುವ ಓಆರ್‌ಆರ್‌ನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿತ್ತು.
ಆಡಳಿತ ನಿರ್ಲಕ್ಷ್ಯಯಿಂದ ಸಂಚಾರ ದಟ್ಟಣೆ ಉಂಟಾಗಿದೆ. ಕಚೇರಿಗೆ, ಮನೆಗೆ ತೆರಳಲು ಸಮಸ್ಯೆಯಾಗಿದೆ. ಸುಮಾರು 5 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿಯೇ ದಿನ ಕಳೆಯಬೇಕಾಗಿದೆ ಎಂದು ಸಾರ್ವಜನಿಕರು, ಪ್ರಯಾಣಿಕರು ಆಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಐಬಿಐ ಸಂಚಾರ ವರದಿಯ ಪ್ರಕಾರ, ಸಂಜೆ 7.30ರಿಂದ ರಾತ್ರಿವರೆಗೆ ಸುಮಾರು 1.5 ಲಕ್ಷದಿಂದ 2 ಲಕ್ಷ ವರೆಗೆ ಓಡಾಡಬೇಕಿದ್ದ ವಾಹನಗಳ ಸಂಖ್ಯೆ ಬುಧವಾರ ರಾತ್ರಿ 3.59 ಲಕ್ಷ ವಾಹನಗಳಿಗೆ ಏರಿಕೆ ಆಗಿತ್ತು.