ನುಡಿನಮನ | ಗೆಳತಿ ಕಮಲಾ ದನಿ ಅವರ ಪತ್ರಗಳಲ್ಲಿ ಕೇಳಿಸುತ್ತಿದೆ…

Date:

ಕಮಲಾ ಆಕಾಶವಾಣಿ ದೂರದರ್ಶನಗಳಲ್ಲಿ ಅಧಿಕಾರಿಯಾಗಿ ದುಡಿದು ಯಾವುದೋ ಒಂದು ಪ್ರಕರಣದಲ್ಲಿ
ಕೆಲಸದಿಂದ ಅಮಾನತ್ತಾಗಿ ಕೋರ್ಟ್ ಕಚೇರಿ ಅಲೆಯುತ್ತಾ ಅನೇಕ ವರ್ಷಗಳು ಕಳೆಯಬೇಕಾಗಿ ಬಂತು. ಆದರೆ ಈ ಅವಧಿಯುದ್ದಕ್ಕೂ ಅವರು ನಿರಂತರವಾಗಿ ಸಾಹಿತ್ಯ ರಚನೆ, ಸಂಶೋಧನೆಯ ಕೆಲಸಗಳನ್ನು ಮಾಡುತ್ತಾ, ವೈವಿಧ್ಯಪೂರ್ಣವಾದ ಅನೇಕ ಕೃತಿಗಳನ್ನು ಪ್ರಕಟಿಸಿದ್ದು ಅವರ ಪ್ರತಿಭೆ, ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ

ಕಮಲಾ ಹೆಮ್ಮಿಗೆ, ಎಸ್. ಮಾಲತಿ ಮತ್ತು ನನ್ನ ಗೆಳೆತನ 50 ವರ್ಷಗಳಷ್ಟು ಪ್ರಾಚೀನ. ಅದು ಎಂದೂ ಹಳತಾಗದಂತೆ, ಮರೆತು ಹೋಗದಂತೆ ತನ್ನ ನಿರಂತರ ಪತ್ರಗಳ ಮೂಲಕ ಈ ಗೆಳೆತನದ ನೆನಪುಗಳನ್ನು ಹಸಿರಾಗಿಟ್ಟವರು ಕಮಲಾ ಹೆಮ್ಮಿಗೆ. ಮೈಸೂರು ವಿಶ್ವವಿದ್ಯಾಲಯದ ಶಾಖೆಯಾಗಿ ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾದಾಗ, ಕನ್ನಡವನ್ನು ದ್ವಿತೀಯ ಭಾಷೆಯಾಗಿ ಓದಿದ್ದ ನಮ್ಮಂಥವರಿಗೂ ಅಲ್ಲಿ ಕನ್ನಡ ಎಂ.ಎ. ಮಾಡುವ ಅವಕಾಶ ಸಿಕ್ಕಿತ್ತು. ಮಹಿಳೆಯರ ಬಂಟ್ಸ್ ಹಾಸ್ಟೆಲಿನಲ್ಲಿದ್ದುಕೊಂಡು ಮೊದಲ ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಾಗ ಕಮಲಾ ನಮ್ಮ ಜೂನಿಯರ್ ಆಗಿ ಮಂಗಳೂರಿಗೆ ಬಂದರು. ಮೈಸೂರಿನ ಪ್ರತಿಭೆ, ಜೊತೆಗೆ ಇವರ ಸೋದರತ್ತೆ ಪುತಿನ ಅವರ ಪತ್ನಿ ಎಂಬ ಪ್ರಭಾವಳಿ, ಆಗಲೇ ಕವಿತೆ, ಕಥೆ, ನವ್ಯಸಾಹಿತ್ಯದ ಆಳವಾದ ತಿಳಿವಳಿಕೆಯಿಂದ ಕಮಲಾ ಅವರು ಕೂಡಲೇ ಎಲ್ಲರ ಗಮನ ಸೆಳೆದಿದ್ದರು.

ಇನ್ನೊಂದು ಕಡೆ ಸಂಗೀತ, ನಾಟಕ, ಸಿನೆಮಾ ಉಡುಗೆ ತೊಡುಗೆಗಳ ಬಗ್ಗೆ ಸಮಾನ ಅಭಿರುಚಿಯಿಂದಾಗಿ ನಮ್ಮ ಮೂವರ ಗೆಳೆತನ ಹೆಚ್ಚು ಗಾಢವಾಯಿತು. ನಾವು ಎಂ.ಎ. ಮುಗಿಸಿ ಮೈಸೂರಿಗೆ ಬಂದು ಸಂಶೋಧನಾ ವಿದ್ಯಾರ್ಥಿಗಳಾಗಿ ಸೇರಿಕೊಂಡಾಗ ಅದೇನೊ ಕಾರಣಕ್ಕೇ ಕಮಲಾ ಸಹ ತಮ್ಮ ಎರಡನೆ ವರ್ಷದ ಎಂಎ.ಗೆ ಮೈಸೂರಿಗೇ ಬಂದು ಸೇರಿದ್ದರು. ಯಾದವಗಿರಿಯಲ್ಲಿದ್ದ ಅವರ ಮನೆಗೆ ನಾನೂ ಮಾಲತಿ ಆಗಾಗ ಹೋಗುತ್ತಿದ್ದೆವು. ರುಚಿಯಾದ ಅಯ್ಯಂಗಾರ್‍ರ ಊಟವಿರುತ್ತಿತ್ತು. ಕಮಲಾ ಅವರ ತಾಯಿ ಶಾರದಾ ಅತ್ಯಂತ ಸೌಮ್ಯ ಸ್ವಭಾವದವರು. ಅವರ ದನಿಯನ್ನು ಒಂದು ದಿನವೂ ನಾವು ಕೇಳಲೇ ಇಲ್ಲ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ ಅವರ ತಂದೆಯೂ ತಮ್ಮಷ್ಟಕ್ಕೆ ತಾವಿರುತ್ತಿದ್ದರು. ಒಟ್ಟಿನಲ್ಲಿ ಅವರ ಮನೆಯದು ತುಂಬಾ ವಿಭಿನ್ನವಾದ ವಾತಾವರಣ. ಅಲ್ಲಿ ಯಾರೂ ಔಪಚಾರಿಕವಾದ ಮಾತು-ಕಥೆ ಆಡುತ್ತಿರಲಿಲ್ಲ. ಬಹುಶಃ ಕಮಲಾ ಅವರಲ್ಲಿಯೂ ಇದೇ ನಡವಳಿಕೆ ಬಂದಿರಬಹುದು. ಅವರು ಸಾಹಿತ್ಯಿಕ ವಲಯಗಳಲ್ಲಿ ತುಂಬಾ ಸಹಜವಾಗಿ ಎಲ್ಲರೊಡನೆ ಬೆರೆಯುತ್ತಿದ್ದರಾದರೂ ಗಂಡ, ಮಕ್ಕಳು, ಮನೆ, ಸಂಸಾರ, ಮೊದಲಾದವುಗಳಿಗೆ ಅವರು ಒಗ್ಗಿಕೊಳ್ಳಲಾರರು ಎಂದೇ ಅನಿಸುತ್ತಿತ್ತು. ವಿದ್ಯಾರ್ಥಿ ದೆಸೆಯಿಂದಲೂ ತಮ್ಮಷ್ಟಕ್ಕೆ ಸಾಹಿತ್ಯಿಕ ಚಿಂತನೆಗಳಲ್ಲಿ ತೊಡಗಿ, ಯಾವುದೋ ಹಾಡನ್ನು ಗುನುಗುನಿಸುತ್ತಾ ಇದ್ದ ಚಿತ್ರವೇ ಈಗಲೂ ಕಣ್ಣಮುಂದೆ ನಿಲ್ಲುತ್ತದೆ.

ಕಮಲಾ ಆಕಾಶವಾಣಿ ದೂರದರ್ಶನಗಳಲ್ಲಿ ಅಧಿಕಾರಿಯಾಗಿ ದುಡಿದು ಯಾವುದೋ ಒಂದು ಪ್ರಕರಣದಲ್ಲಿ ಕೆಲಸದಿಂದ ಅಮಾನತ್ತಾಗಿ ಕೋರ್ಟ್ ಕಚೇರಿ ಅಲೆಯುತ್ತಾ ಅನೇಕ ವರ್ಷಗಳು ಕಳೆಯಬೇಕಾಗಿ ಬಂತು. ಆದರೆ ಈ ಅವಧಿಯುದ್ದಕ್ಕೂ ಅವರು ನಿರಂತರವಾಗಿ ಸಾಹಿತ್ಯ ರಚನೆ, ಸಂಶೋಧನೆಯ ಕೆಲಸಗಳನ್ನು ಮಾಡುತ್ತಾ, ವೈವಿಧ್ಯ ಪೂರ್ಣವಾದ ಅನೇಕ ಕೃತಿಗಳನ್ನು ಪ್ರಕಟಿಸಿದ್ದು ಅವರ ಪ್ರತಿಭೆ, ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ. ಧಾರವಾಡದಲ್ಲಿ ನೆಲೆಸಿ ಧಾರವಾಡದವರೇ ಆಗಿ ಅಲ್ಲಿನ ಸಾಹಿತ್ಯಿಕ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಕಮಲಾ ಅಲ್ಲಿನ ಎಲ್ಲ ಅಗ್ರಗಣ್ಯ ಸಾಹಿತಿಗಳ ಸಂಪರ್ಕಕ್ಕೆ ಬಂದು ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಮಾನತ್ತಿನ ಅವಧಿ ಮುಗಿದ ನಂತರ ಅವರು ಕೇರಳದ ತಿರುವನಂತಪುರದಲ್ಲಿ ಅಧಿಕಾರಿಯಾಗಿ ವಯೋ ನಿವೃತ್ತಿ ಪಡೆದರು. ಆಮೇಲೆ ಅಲ್ಲಿಯೇ ಹಲವಾರು ವರ್ಷ ನೆಲೆಸಿ ಮಲಯಾಳಂ ಸಾಹಿತ್ಯಿಕ ವಲಯದಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದರು. ಮಲಯಾಳದಿಂದ ಕನ್ನಡಕ್ಕೆ ಕನ್ನಡದಿಂದ ಮಲಯಾಳಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದರು. ಎಲ್ಲವೂ ಸ್ಥಗಿತಗೊಂಡಂತಹ ಕರೋನಾ ಕಾಲ ಮುಗಿದ ನಂತರ ಕೊರೋನಾ ಕುರಿತಂತೆ ಬಂದ ಕಥೆಗಳು, ಸಾಹಿತ್ಯವನ್ನು ಎಲ್ಲೆಡೆಯಿಂದ ಸಂಗ್ರಹಿಸಿ ಪ್ರಳಯದ ನೆರಳು ಎಂಬ ಹೆಸರಿನಲ್ಲಿ ಪ್ರಕಟಿಸಿದ್ದು ಒಂದು ಅಪೂರ್ವ ದಾಖಲೆ.

ಕಮಲಾ ಸುಮಾರು ಮೂವತ್ತು ನಲವತ್ತು ವರ್ಷಗಳಿಂದ ನನ್ನೊಡನೆ ನಿರಂತರ ಪತ್ರ ವ್ಯವಹಾರ ನಡೆಸುತ್ತಿದ್ದರು. ಈ ಮಧ್ಯೆ ಅವರನ್ನು ಮೂರು-ನಾಲ್ಕು ಸಲ ಮಾತ್ರ ಮುಖತಃ ನೋಡುವ ಅವಕಾಶ ಸಿಕ್ಕಿತ್ತು. ಸಿಂದಗಿಯ ಜಾನಪದ ಸಮ್ಮೇಳನ, ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಹಾಗೂ ಅವರು ಸಾಹಿತ್ಯ ಶ್ರೀ ಪ್ರಶಸ್ತಿಯ ಸ್ವೀಕಾರಕ್ಕಾಗಿ ರವೀಂದ್ರ ಕಲಾ ಕ್ಷೇತ್ರಕ್ಕೆ 2019ರಲ್ಲಿ ಆಗಮಿಸಿದಾಗ ಹೀಗೆ…. ಕಮಲಾ ಬರೆದ ಪತ್ರಗಳು ಅವರ ಅಂದಂದಿನ ಸ್ಥಿತಿಗತಿಗಳ ಪ್ರತಿಬಿಂಬದಂತಿವೆ. ಆ ಪತ್ರಗಳಿಂದ ಆಯ್ದ ಸಾಲುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಅಮ್ಮನ ಬಗ್ಗೆ…
ಆಕೆಗೆ ಆರು ಬ್ಲಾಕೇಜ್ ಹೃದಯದಲ್ಲಿ. ಮುಂದಿನ ಕ್ಷಣ ಅನಿಶ್ಚಿತ ಎಂದು ವೈದ್ಯರು ಹೇಳಿ ಹತ್ತು ವರ್ಷಗಳಾಗಿದ್ದವು! ಬರೀ ಇಚ್ಛಾಶಕ್ತಿಯಿಂದ ಉಸಿರಾಟ. ನನ್ನ ಕುಮ್ಮಕ್ಕಿನಿಂದ ಆತ್ಮ ಚರಿತ್ರೆ ಬರೆದು ಒಂದು ಅವಾರ್ಡ್ ಕೂಡ ಬಂತು. ಆಮೇಲೂ 10 ಕೃತಿಗಳು. (ಎಲ್ಲವೂ ಮಕ್ಕಳಿಗಾಗಿ ಬರೆದವು). ಹೇಳಬಾಕಾದ್ದೆಲ್ಲ ಹೇಳಿದ್ದಳು. ಕಾಮೆಂಟ್ರಿ ನೋಡಿ ಭಾರತ ಸೋತರೆ ಎದೆಶೂಲೆ ತರಿಸಿಕೊಳ್ಳುತ್ತಿದ್ದಳು. ಲಂಕೇಶ್ ಅಭಿಮಾನಿಯಾಗಿದ್ದಳು. ಯೌವನದಲ್ಲಿ ಪರಚಿಕೊಳ್ಳುತ್ತಿದ್ದ ನಾವಿಬ್ಬರೂ ನನ್ನ ಮಧ್ಯ ವಯಸ್ಸಿನಲ್ಲಿ ಆಪ್ತ ಗೆಳತಿಯರಾಗಿದ್ದು ಒಂದು ಚೋದ್ಯ. ಅದು ಸವಿನೆನಪುಗಳ ಜೇನುಹುತ್ತ. ಗುಟ್ಟಾಗಿ ಬೋರೆಹಣ್ಣು ತಿನ್ನುತ್ತಾ ಹೇಗೆ ದೀರ್ಘವಾಗಿ ಸಂಭಾಷಿಸುತ್ತಿದ್ದೆವು ಗೊತ್ತೆ? ಎಲ್ಲ ಸ್ಟಿಲ್ ಚಿತ್ರ ಈಗ. ಆದರೂ ಲೇಖಕಿಯರಾದ ನಮ್ಮ ಅಮ್ಮಂದಿರು ಬದುಕಿರುತ್ತಾರೆ ಅಲ್ಲವೆ! ಅಮ್ಮನ ಬೈಗುಳಗಳನ್ನು ಅತ್ಯಂತಶ್ರದ್ಧೆಯಿಂದ ನೆನೆಯುತ್ತೇನೆ.

ಇವತ್ತೇ ಧಾರವಾಡಕ್ಕೆ ಬಂದೆ. ಒಂಟಿ ಇರಲಾರದೆ ಕೀಲಿ ಹಾಕಿ ಬೇಂದ್ರೆ ಮನೆಗೆ ಹೋಗುತ್ತಿದ್ದೇನೆ. ಅಮ್ಮನ ಬಗ್ಗೆ
ʼಶಾರದಾಭಿನಂದನ; ಅನ್ನುವ ಸಂಸ್ಮರಣ ಗ್ರಂಥ ತರುತ್ತೇನೆ. ನೀವು 10-15 ಪುಟಗಳ ಸ್ಮೃತಿ ಚಿತ್ರ ಅಥವಾ ಒಂದು ಪದ್ಯ ಕಳಿಸುತ್ತೀರಾ? ನಿಮ್ಮ Warm ಆದ ಪತ್ರ ನನಗಿತ್ತ ಸಾಂತ್ವನ ಅಪಾರ. ಧಾರವಾಡದ ದಿನಗಳು ವಿದ್ಯಾವರ್ಧಕ ಸಂಘ, ರಂಗ ತೋರಣ, ಮುಂತಾದ ಸಾಹಿತ್ಯಿಕ ಸಂಸ್ಥೆಗಳು ಸದಾ ನನ್ನನ್ನು ಕರೆಯುತ್ತಿರುತ್ತವೆ. ಸತ್ತರೆ ಕೆಟ್ಟರೆ ಮೊದಲು ಹೋಗಿ ನಿಂತಿರುತ್ತೇನೆ. ಮಾನವೀಯತೆ ಮೆರೆಯಲು! ಇಲ್ಲದಿದ್ದರೆ ಬಾಗಿಲು, ಕಿಟಕಿ ಮುಚ್ಚಿ ಮುಸುಕು ಹೊದ್ದು ಮಲಗಿ ಬಿಡುವುದು. ಅಪರೂಪಕ್ಕೆ ನೀವು ಇಲ್ಲಿಗೆ ಬಂದರೆ ನಾನು ಊರು ಬಿಟ್ಟು ರಾಜಧಾನಿಗೆ ತೆರಳಿದ್ದೆ. ನಾನು ಬಂದ ದಿನವೇ ಮಾತೆಮಹಾದೇವಿ ಅಂಕಿತ ಬದಲಿಸಿದ್ದಕ್ಕೆ ಬೃಹತ್ ಸಮಾವೇಶ. ನಾವೆಲ್ಲ ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನೈತಿಕ ಹೊಣೆಗಾರಿಕೆ ಕುರಿತು ಭಾಷಣ ಬಿಗಿದೇ ಬಿಗಿದೆವು. ಬೆವರಿದೆವು…. ಧಾರವಾಡ ಉರಿಯುತ್ತಿದೆ. ಬೆವರುತ್ತಾ, ನಿದ್ರಿಸುತ್ತಾ, ವಾಕ್ ಮಾಡುತ್ತಾ, ಭಾಷಣ ಮಾಡುತ್ತಾ, ದೇವರ ಪೂಜೆ ಮಾಡುತ್ತಾ, ಸ್ನೇಹಿತರೊಂದಿಗೆ ನಗುತ್ತಾ ಕಾಲಯಾಪನೆ….

ತುಂಬಾ ದಿನಗಳ ಮೇಲೆ ಬರೆಯಲು ಕುಳಿತಿದ್ದೇನೆ. ಇಲ್ಲಿ ಬಿಡುವಿರುವುದರಿಂದ ಭಾಷಣ-ಗೀಷಣ ಸಂಸ್ಮರಣೆ ಕಾರ್ಯಕ್ರಮ ಗಳಿಗೆ ಹೋಗುತ್ತಿರುತ್ತೇನೆ (ವೀಣಾರ ಅತಿಥಿಯ ನಾಯಕಿಯಂತೆ). ಸಂಭಾವನಾ ಗ್ರಂಥಗಳಿಗೆ ಒಂದು ಹೊರೆ ಲೇಖನಗಳನ್ನು ಬರೆದದ್ದಾಗಿದೆ. ಈ ಮಧ್ಯೆ ವಟವೃಕ್ಷದಂತಿದ್ದ ನೆಲೆಮನೆ ದೇವೇಗೌಡರ ನಿಧನ ಕೊಂಚ ಆಘಾತ ಉಂಟುಮಾಡಿತ್ತು.

ಬೆಂಗಳೂರು…
ಬೆಂಗಳೂರಿನತ್ತ ತಲೆ ಹಾಕಿಯೂ ಮಲಗಿಲ್ಲ. ಅಕ್ಕತಂಗಿಯರೊಂದಿಗೆ ಸಲ್ಲಾಪ ಅಷ್ಟೇ. ಯಾಕೋ ನನಗೆ ಆ ಊರು ಆಗಿ ಬಂದಿಲ್ಲ. ಅಕ್ಕನ ಮಗಳ ಮದುವೆಗೆ ಅಂತ ಒಂದೇ ದಿನ ಬೆಂಗಳೂರಿಗೆ ಬಂದಿದ್ದೆ. “ನಿಮ್ಮನ್ನು ನೋಡಿದ್ರೆ ಏನೂ ಆಗಿಲ್ಲದೋರ ಥರಾ ಇದ್ದೀರಿ” ಅಂತ ನಿರಾಸೆಯಿಂದ ಯಾರೋ ಕಿರಿಯ ಬಂಧು ಅಂದ. That is part of the game ಅಂತ ನಕ್ಕೆ. ಆದರೂ ಸಂಧ್ಯಾ ಮಾವಿನ ವಾಟೆಯೊಳಗಿನ ದುಂಬಿಯಂತೆ ಆತ್ಮ ಚಡಪಡಿಸುತ್ತಿದೆ.

ಕೋರ್ಟು ಕಚೇರಿ…
ಈ ಹಿಂದಿನ ಪತ್ರಗಳಿಗೆ ಉತ್ತರಿಸಬೇಕಿತ್ತಲ್ಲವೇ! ಒಂದೆರಡು ಭಾಷಣಗಳಿಗೆ ರೆಡಿಯಾಗುತ್ತಿರುವಂತೆ ಪತ್ರಿಕೆಗಳಲ್ಲಿ ಕೋರ್ಟ್ ಶಿಕ್ಷೆಯ ಹಳೇ ಸುದ್ದಿ ಅಚಾನಕ್ಕಾಗಿ (ದಪ್ಪ ಅಕ್ಷರದಲ್ಲಿ) ಪ್ರಕಟವಾಗಿ ಮತ್ತೊಮ್ಮೆ ಕಲ್ಲೋಲವಾಯಿತು. ಸಾಹಿತ್ಯ ಸಮ್ಮೇಳನಕ್ಕೆ ಹೋಗದಂತೆ ಮಾಡಲು ನಮ್ಮವರು ಮಾಡಿದ ಕುಚೇಷ್ಟೆ ಅದು. ನಿತ್ಯದ ಸಾವಿದು ನನ್ನ ಪಾಲಿಗೆ. ಒಂದು ದಿನ ಒಂದೆ ತಿರುಗಿ ಹೋದೆ.

ನಿಮ್ಮ ಪತ್ರಕ್ಕೆ ಉತ್ತರಿಸಬೇಕೆಂದಿರುವಾಗಲೇ ಕೋರ್ಟ್ ಮೆಟ್ಟಿಲು ಕರೆದವು. ಮುಂದಿನ ಲೇಖಲೋಕಕ್ಕೆ ಪ್ರವೇಶಿಸಲು ನನಗೆ ಅವಕಾಶ ಕೊಡಿ (ಮೂರು ನಾಲ್ಕು ತಿಂಗಳಲ್ಲಿ ಏನಾದರೂ ತಿಳಿಯಬಹುದು ಕೋರ್ಟಿನಿಂದ).

ಬರಹದ ಚಿಂತನೆ ….
ಕವಿತೆಯಲ್ಲಿ ಮೌನ ಪಡೆವ ಪಾತ್ರ ಮಹತ್ವದ್ದು. ಮೌನವೇ ನಮ್ಮನ್ನು ಪಾಕ ಗೊಳಿಸುವುದಲ್ಲವೆ?ನೆನಪು ಘಮಘಮಿಸುವುದು, ಏಟುತಿಂದ ಮಗುವಿನಂತೆ ನೆನಪು, ಸ್ವಂತದ ಅಭಿವ್ಯಕ್ತಿಗೆ ಅವಕಾಶವೇ ಇಲ್ಲದ ಲಕ್ಷ್ಮಣ… ಇವೆಲ್ಲ ಇಷ್ಟವಾದವು. ಕವಿ, ಕಥೆ ಬರೆದರೂ ಪದ್ಯವೇ ಆಗಿರುತ್ತೆ ಅಲ್ಲವೇ? ನಾನು ಅಮ್ಮ ಕಡೆ ಕಡೆಗೆ ಗೆಳತಿಯರಾಗಿದ್ದವು. (ಹರಯದಲ್ಲಿ ಆಕೆ ನನ್ನ ಶತ್ರುವಿನಂತೆ ಎನಿಸಿತ್ತು!) ಈಗ ನನ್ನ ತಳಮಳಕ್ಕೆ ಹೊರದಾರಿ ಬರಹ ಒಂದೇ. ಇನ್ನೂ ಬರೆಯೋಣ ಕೆಲಸ ಮಾಡೋಣ ಸಂಧ್ಯಾ. ಅಡುಗೆ ಊಟ ಮುನಿಸು ಇದೆಲ್ಲಇರುವುದೇ, ಕಡೆಗುಳಿಯುವುದು ನಮ್ಮ ಹೆಸರು.

ನಿಮ್ಮಿಂದ ಸ್ಫೂರ್ತಿಗೊಂಡು ಸವದತ್ತಿ ಎಲ್ಲಮ್ಮ ಕಾವ್ಯ ಎಡಿಟ್ ಮಾಡಲು ತೊಡಗಿದ್ದೇನೆ. ಫ್ರೀಲ್ಡ್‍ಗೆ ಹತ್ತಿರವಿದ್ದೇನೆ ಬೇರೆ. ಈ ಮಧ್ಯೆ ಕವನ ಸಂಕಲನವೊಂದು ರೆಡಿಯಾಗುತ್ತಿದೆ. ಇಂಥದ್ದನ್ನೆಲ್ಲಾ ಕೇಳಿ ಪ್ರಕಟಿಸಲು ನೆ.ದೇ. ಉತ್ಸುಕತೆ ತೋರುತ್ತಿದ್ದರು. ಏನು ಮಾಡುವುದು. ನಮ್ಮ ದಾರಿ ನಾವೇ ಕಂಡು ಕೊಳ್ಳಬೇಕೀಗ. (ನಿಮ್ಮ ಶೈಲಿ! ಕಲೆವಲದ್ದು ಅಷ್ಟು ಪ್ರಭಾವ ಬೀರಿದೆ!).

ಬದುಕು…
ನಿಮ್ಮ ದಿನಚರಿಯಂತೇ ನನ್ನದೂ. ವಿರಾಮವೋ ವಿರಾಮ. ಮಧ್ಯಾಹ್ನ ನಿದ್ದೆ, ಸಂಜೆಯ ವಾಕಿಂಗ್, ಇಷ್ಟವಾದ ಬರಹ, ಓದು. ಚಿಂತೆ, ನನಗೆ ಸೈಡರ್ ಇದ್ದಂತೆ ಅಥವಾ ಲೆಮನ್ ಕಾರ್ಡಿಯಲ್‍ನಂತೆ ಅನ್ನಿ. ಇಲ್ಲದಿದ್ದರೆ ರುಚಿ ಇಲ್ಲ.ಎರಡು ತಿಂಗಳ ಸಂಬಳ (ಅಶನವಸನ) ಬಂದಿರಲಿಲ್ಲ. ತುಂಬಾ ತಲ್ಲಣದಲ್ಲಿದ್ದೆ. ಯುದ್ಧದ ಗದ್ದಲ. ನಮ್ಮ ತಲೆಯ ಮೇಲೂ ಕಪ್ಪು ಮೋಡಗಳು. ನಿಮ್ಮ ಮನೆಯ ವಿಳಾಸ ಹುಡುಕಲಾರದಷ್ಟು ವ್ಯಸ್ತಳಾಗಿದ್ದೆ. ಅದಕ್ಕೆ ಸಂಘದ ವಿಳಾಸಕ್ಕೆ ಬರೆದೆ.

ನನಗೂ ಪದ್ಯ ಬರೆಯುವ ವ್ಯವಧಾನ, ಮನಸ್ಥಿತಿ ಇಲ್ಲ. ಅತಂತ್ರತೆ, ಅಭದ್ರತೆಗಳೇ ನನ್ನ ಆತ್ಮೀಯರು, ಎಡಬಲಗಳು. ವಿಚಿತ್ರ ಅಲ್ಲವಾ? ರೂಂಮೇಟ್‍ಗಳಾಗಿದ್ದ ನಾವೆಲ್ಲ ಭಾನು, ಮಾಲತಿ, ನೀವು, ನಾನು ಒಂದಲ್ಲ ಒಂದು ರೀತಿ ಸೃಜನಶೀಲರಾಗಿದ್ದೇವೆ. ಅದೇ ಮಹತ್ವದ್ದು. ಮತ್ತೇನು? ನನ್ನದು ಕೊಂಚ ಮುಳ್ಳು ಕಂಟಿಯ ಹಾದಿ, ಇರಲಿ.

ಒಟ್ಟು ಬದುಕು ಖಾಲಿಯಲ್ಲ. ಕ್ರೂರವೂ ಅಲ್ಲ. ಐನು ಹೊತ್ತಲ್ಲಿ (ಇಲ್ಲಿನ ದೇಸಿ!) ಯಾರೋ ಬಂದು ಕೈ ನೀಡುತ್ತಾರೆ. ಈಚೆಗೆ ಎರಡು ಆಕ್ಸಿಡೆಂಟ್‍ಗಳಿಂದ ಪಾರಾದೆ. ಒಂದು ಕಾರು, ಒಂದು ರಿಕ್ಷಾ… ಹೀಗೇ. ಬೀದಿಯ ಅಪರಿಚಿತರು ರಿವರ್ಸ್‍ಗೇರ್‌ನಲ್ಲಿ ಓಡುತ್ತಿದ್ದ ಗಾಡಿಗಳನ್ನು ಓಡಿಬಂದು ನಿಲ್ಲಿಸಿದರು. ಇಷ್ಟಾದರೂ ಬದುಕಲ್ಲಿ ಆಸೆ ಕಳೆದುಕೊಂಡಿಲ್ಲ ನಾನು. ಏನಕ್ಕೋ ಕಾಯ್ತೀನಿ, ಸ್ನೇಹಿತರು ಅಂದರೆ ತುಂಬಾ ಹಚ್ಕೋತೀನಿ, ಅವರಿಗೆ ನೋವಾದರೆ ಚೇತರಿಸಿಕೊಳ್ಳುವುದೇ ಕಷ್ಟ. ನಮ್ಮಿಬ್ಬರದೂ ಒಂದೇ ಲಯದ ಜೀವನ, ನೋವೂ ಹಾಗೇ – ಆದರೂ Sutle humour ಉಳಿಸಿದೆ ನಮ್ಮನ್ನು ಅಲ್ಲವೆ? ನೆ.ದೇ. ತುಂಬಾ ಮೆದು ಮನುಷ್ಯ. ಯಾವುದಕ್ಕೂ ಆತುರ, ಸ್ವಾರ್ಥ ಇರುತ್ತಿರಲಿಲ್ಲ. ಅವರ ಮಗಳ ಪತ್ರ ಬಂದಿತ್ತು. ಮತ್ತೊಮ್ಮೆ ಓದಿದರೆ ಅಳು ಬಂದುಬಿಡಬಹುದೇನೋ ಎನಿಸಿ ದೂರ ಎತ್ತಿಟ್ಟಿದ್ದೇನೆ. ಅವರಿಗೆ ಮಾನವೀಯತೆಯ ನೆಲೆಯ ಆಸಕ್ತಿಗಳಿದ್ದುವೇ ಹೊರತು ಪ್ರತಿಫಲವೆಂದು ನಮಗಿಂತ ದೊಡ್ಡ ಸಾಹಿತಿಗಳು (ವೃದ್ಧರು!) ಇಟ್ಟುಕೊಂಡ ಚಪಲಗಳಲ್ಲ!

ಕೊನೆಯ ಪತ್ರ
(ಮೂವತ್ತು ನಲವತ್ತು ವರ್ಷಗಳಿಂದ ನಾನು ಕಾಪಿಟ್ಟುಕೊಂಡು ಬಂದಿದ್ದ ಆಯ್ದ ಪತ್ರಗಳನ್ನು ಕೂಡಿಸಿ ನಾನು ಪತ್ರಲೇಖ ಎಂಬ ಕೃತಿ ಪ್ರಕಟಿಸಿದೆ. ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದೆ. ಅದರಲ್ಲಿ ಕಮಲಾ ಬರೆದ ಪತ್ರಗಳೂ ಇವೆ. ಪತ್ರ ಬರೆದವರ ಹೆಸರನ್ನು ನಾನು ಹಾಕಿಲ್ಲದಿದ್ದರೂ ಈ ಪತ್ರಗಳಲ್ಲಿ ವೈಯಕ್ತಿಕ ಸಂಗತಿಗಳೂ ಇರುವುದರಿಂದ ಕೆಲವು ಪರಿಚಿತರಿಗೆ ಅದರ ಪತ್ತೆ ಸಿಗಬಹುದು, ಅದರಿಂದ ಸಂಬಂಧಪಟ್ಟವರಿಗೆ ನೋವಾಗಬಹುದು ಎಂದೆನ್ನಿಸಿ ನಾನು ಕಮಲಾಗೆ ಫೋನ್‍ ಮಾಡಿ ತಿಳಿಸಿದೆ.

ಕಮಲಾ ಕೂಡಲೇ ಅಯ್ಯೋ ನನ್ನ ಹೆಸರು ಹಾಕಿದರೂ ಪರವಾಗಿಲ್ಲ ಎಂದು ನಗುತ್ತಾ ಹೇಳಿದರು. ಪುಸ್ತಕ ಕಳಿಸಲು ವಿಳಾಸ ಕೇಳಿದಾಗ ಅವರು ಪುನಃ ಧಾರವಾಡಕ್ಕೆ ಬಂದು ನೆಲೆಸಿದ್ದಾರೆಎಂದು ತಿಳಿದು ಒಂದು ರೀತಿ ಅಚ್ಚರಿಯಾಯಿತು. ಪುಸ್ತಕ ಕಳಿಸಿದ ಕೂಡಲೇ ಅದರ ಪ್ರತಿಕ್ರಿಯೆಯಾಗಿ ಅವರಿಂದ ಪತ್ರ ಬಂತು (ಜುಲೈ ಅದೇ ಕೊನೆಯ ಪತ್ರ. ಅದರ ಕೆಲವು ಸಾಲುಗಳು…

ಎಲೈ ಕುಂಕುಮ ಸುಂದರಿ, ಜಯಂತನ ಪರವಶನಾದೆನು ಪರಿಚಯವಿಲ್ಲದೆ ಎಂಬ ಹಾಡಿನ ಅನುಭವ ನಿಮ್ಮ ಕೃತಿಯಿಂದ ಆಯಿತು. ಬಿಸಿಯುಸಿರು ಬಿಡುತ್ತಾ ನನ್ನನ್ನು ತಟ್ಟಿತು. ಇಲ್ಲಿ ಎಷ್ಟೆಲ್ಲಾ ಮನಸುಗಳ ಆಸೆ, ನಿಜಪ್ರೀತಿ, ನಾಟಕೀಯತೆ ಕೂಡಿಕೊಂಡಿದೆ. ನಮ್ಮ ಪತ್ರಗಳಲ್ಲಿ ಎಷ್ಟೊಂದು ಸ್ವ ವಿಮರ್ಶೆ, flash back ಗಳು.

ಆಹಾ! ಹದಿಹರಯದಿಂದ ಮಧ್ಯ ವಯಸ್ಸಿನವರೆಗೆ ಪುಟ್ಟತೊರೆ ಹರಿದಂತೆ ಅನ್ನಿಸಿತು. (ಈಗಿನಂತೆ ಆಗ ಮನಸ್ಸು ಬಗ್ಗಡವಾಗಿರಲಿಲ್ಲ) ಸಿ.ಪಿ.ಕೆ, ರಾಮಾನುಜನ್… ಮೊದಲಾದ ಹಿರಿಯರ ಪತ್ರಗಳನ್ನು ಬಳಸಿ ಪುಸ್ತಕಕ್ಕೆ ಘನತೆ ತಂದಿದ್ದೀರಿ. ವಿಷಾದ, ಹಾಸ್ಯ, ವಿಮರ್ಶೆ, ಸಮಕಾಲೀನ ಸಾಹಿತ್ಯ ಎಲ್ಲವನ್ನೂ ಈ ಪತ್ರಗಳು ಬಿಂಬಿಸಿವೆ. ನಿಜವಾಗಿಯೂ ಇದು ಸಂಸ್ಕೃತಿ. ನಾನೂ ಪತ್ರಗಳನ್ನು ಇಟ್ಟುಕೊಳ್ಳಬೇಕಿತ್ತು ಎಂದು ಕೈಕೈ ಹಿಸುಕಿಕೊಂಡೆ.

ನನ್ನ ಅಪ್ತ ಗೆಳತಿಯರಲ್ಲಿ ಈಗ ಮಾಲತಿ, ಕಮಲಾ ಇಬ್ಬರೂ ಇಲ್ಲವಾಗಿದ್ದಾರೆ. ಕಮಲಾ ದನಿ ಅವರ ಪತ್ರಗಳಲ್ಲಿ ಕೇಳಿಸುತ್ತಿದೆ. ಮಾಲತಿ ಪತ್ರ ಬರೆದದ್ದಿಲ್ಲ. ಆದರೆ ಅವರ ದನಿ ಅವರ ಪದ್ಯಗಳಲ್ಲಿದೆ.

ಡಾ ಕೆ ಆರ್‌ ಸಂಧ್ಯಾ ರೆಡ್ಡಿ
+ posts

ಹಿರಿಯ ಲೇಖಕಿ, ಅನುವಾದಕಿ

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಆರ್‌ ಸಂಧ್ಯಾ ರೆಡ್ಡಿ
ಡಾ ಕೆ ಆರ್‌ ಸಂಧ್ಯಾ ರೆಡ್ಡಿ
ಹಿರಿಯ ಲೇಖಕಿ, ಅನುವಾದಕಿ

4 COMMENTS

  1. ತುಂಬಾ ಆಪ್ತ ಬರಹ. ನಮ್ಮೆಲ್ಲರಿಗೂ ಪರಿಚಿತರಾಗಿದ್ದ, ಲೇಖಕಿಯರ ಬರಹಗಳನ್ನು ಮೆಚ್ಚಿ ಪ್ರತಿಕ್ರಯಿಸುತ್ತಿದ್ದ ಕಮಲಾಹೆಮ್ಮಿಗೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
    ಶಾಂತಾನಾಗರಾಜ್

  2. ನಮಸ್ಕಾರಗಳು,
    ನಿಮ್ಮ ಕಮಲಾ ಹೆಮ್ಮಿಗೆ ಅವರ ಸಖ್ಯತನವನ್ನು ಪತ್ರದ ಮುಖಾಂತರ ಪ್ರತಿಕ್ರಿಯಿಸಿದ್ದು ಓದಿ ಬಹಳ ಸಂತೋಷವಾಯಿತು.ತಾವು ಪ್ರಕಟಿಸಿದ ಪತ್ರ ಗುಚ್ಛ ಪುಸ್ತಕ ಸಾಧ್ಯವಾದರೆ ಕಳಿಸಿರಿ. ಕಮಲಾ ಹೆಮ್ಮಿಗೆ ಅವರು ಧಾರವಾಡ ಆಕಾಶವಾಣಿಯಲ್ಲಿ ಇದ್ದಾಗಿಂದ ಪರಿಚಯವಿತ್ತು.ಅವರು ಸಾಲಿ ರಾಮಚಂದ್ರರಾಯರ ಮನೆಯಲ್ಲಿ ಬಾಡಿಗೆಗೆ ಇದ್ದಾಗ ಅವರ ಮನೆಗು ಹೋಗಿ ಬರುವ ಒಡನಾಟವಿತ್ತು.ಮಾತೃ ಹೃದಯದ ಹೆಣ್ಣು ಮಗಳು ಅವರು. ಯಾವಾಗಲೂ ಫೋನಿನಲ್ಲಿ ಸಿಗುತ್ತಿದ್ದರು.ಅವರ ನೆನಪುಸದಾ.

  3. ತುಂಬಾ ಹತ್ತಿರದಿಂದ ಕಮಲಾ ಅವರ ಭಾವನೆಗಳನ್ನು ಪತ್ರಗಳ ಮೂಲಕ ಚೆಂದವಾಗಿ ಹಿಡಿದಿಟ್ಟಿದ್ದೀರಿ ಸಂಧ್ಯಾ ಅಭಿನಂದನೆಗಳು

  4. ಹೃದಯ ಮಿಡಿಯುವ ಬರವಣಿಗೆ ಕಮಲ ರವರನ್ನು ಅತ್ಯಂತ ಹತ್ತಿರದಿಂದ ಬಲ್ಲವರಾದ ನೀವು ಅವರ ಮನಸ್ಸಿನ ಒಳಹೊಕ್ಕು ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ ಧನ್ಯವಾದಗಳು ಮೇಡಂ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಬು ಜಗಜೀವನ್ ರಾಮ್ ಅವರನ್ನು ಪ್ರಧಾನಿ ಮಾಡಬೇಕೆಂದು ಆರೆಸ್ಸೆಸ್‌ ಪ್ರಯತ್ನಿಸಿತ್ತೇ?

ಇಂದು ಜಗಜೀವನ್ ರಾಮ್ ಅವರ ಹುಟ್ಟಿದ ದಿನ.ಸಂಘಿಗಳು ಚುನಾವಣಾ ದೃಷ್ಟಿಯಿಂದ ಅಂಬೇಡ್ಕರ್...

ಲೋಹಿಯಾ ಅವರ ಚಿಂತನೆಯ ಬೆಳಕಿನಲ್ಲಿ ನಮ್ಮ ಕರ್ತವ್ಯದ ಅವಲೋಕನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಂದು ಅತ್ಯಂತ ಭೀಕರವಾದ ವಾಸ್ತವವನ್ನು ಎದುರಿಸುತ್ತಿದ್ದೇವೆ. ಅದು...

ಹೊಸ ಓದು | ಎಸ್. ಗಂಗಾಧರಯ್ಯರ ‘ಗಂಗಪಾಣಿ’ : ಅಜ್ಜಿಯ ಹಾಳು ಮಂಟಪವೂ ಗದ್ದಿಗಪ್ಪನ ತತ್ವ ಮಂಟಪವೂ

ಊರವರ ಬಾಯಲ್ಲಿ 'ಹಾಳು ಮಂಟಪ'ವಾಗಿತ್ತು. ಆದರೆ ಗದ್ದಿಗಪ್ಪನಿಗೆ ಅದು 'ತತ್ವ ಮಂಟಪ'ವಾಗಿತ್ತು....

‘ಸಿಎಎ ಅಸಂವಿಧಾನಿಕ’ ಎಂದ ನ್ಯಾಯಮೂರ್ತಿ ಚಂದ್ರಚೂಡ್‌ರ ಪುತ್ರ; ವೀಡಿಯೋ ವೈರಲ್

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಜಾರಿಗೆ ತೀವ್ರ ವಿರೋಧ...