ಹೊಸ ವರ್ಷಾಚರಣೆಗೆ ಮಾದಕ ವಸ್ತುವನ್ನು ಬೆಂಗಳೂರಿಗೆ ರೈಲಿನ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬೈಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಮತ್ತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಒಡಿಸ್ಸಾದ ಸಿಮುಲಿಯಾ ಬಲೇಶ್ವರ ವಾಸಿ ನಿತ್ಯಾನಾದ್ ದಾಸ್(37), ತ್ರಿಪುರದ ನಾರ್ಥ್ ಭಾಗನ್ನ ರಾಜೇಶ್ ದಾಸ್(25), ಬಿಹಾರದ ಕುಮ್ರಾವಿಷ್ಣುಪುರದ ಅಮರ್ಜಿತ್ (23), ಒಡಿಸ್ಸಾದ ಬಾಲಾಂಗಿರ್ ಜಿಲ್ಲೆಯ ನಿಕೇಶ್ ರಾಣಾ (23), ಒಡಿಸ್ಸಾದ ಕೊಂದಮಾಲ್ನ ಜಲಂಧರ್ ಕನ್ಹರ್(20), ಬೈಕುಂಟಾ ಕನ್ಹರ್ ಹಾಗೂ ಸಾಗರ್ ಕನ್ಹರ್ ಎಂಬುವರನ್ನು ಬಂಧಿತ ಆರೋಪಿಗಳು.
ಹೊಸ ವರ್ಷ ಹಿನ್ನೆಲೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ತಡೆಗೆ ರೈಲ್ವೆ ಪೊಲೀಸರು ಡಿ.22 ರಿಂದ ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರಿಗೆ ಆಗಮಿಸುತ್ತಿದ್ದ ರೈಲುಗಳನ್ನು ಶೋಧ ಮಾಡುತ್ತಿದ್ದಾರೆ. ರೈಲ್ವೆ ಪೊಲೀಸ್ ಘಟಕದ ವಿಶೇಷ ತಂಡ ₹60 ಲಕ್ಷ ಮೌಲ್ಯದ 60.965 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಪ್ರಶಾಂತಿ ಎಕ್ಸ್‌ಪ್ರೆಸ್, ಶೇಷಾದ್ರಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ವಾಸ್ಕೋ-ಡ-ಗಾಮಾ ಅಮರಾವತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಆರೋಪಿಗಳು ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಆರೋಪಿ ನಿತ್ಯಾನಂದ ದಾಸ್ ಮತ್ತು ರಾಜೇಶ್ ಫುಡ್ ಡೆಲೆವರಿ ಬಾಯ್ ಏಜೆಂಟ್ಗಳಂತೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ನೌಕರರ ಮೇಲಿದ್ದ 6,969 ಪ್ರಕರಣ ಖುಲಾಸೆ
ಈ ಸಂಬಂಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆ, ಬೈಯ್ಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಹುಬ್ಬಳ್ಳಿಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. 7 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.