ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಿಂದ 56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಕದ್ದಿದ್ದ 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಸೈಬರ್ ಕ್ರೈಂ ಘಟಕ ಬಂಧಿಸಿದೆ. ಆರೋಪಿಯನ್ನು ಮಂಗಳವಾರ ಬಂಧಿಸಿರುವುದಾಗಿ ಸಿಐಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಆರೋಪಿಯನ್ನು ಹರಿಯಾಣ ಮೂಲದ ಶುಭಾಂಗ್ ಜೈನ್ ಎಂದು ಗುರುತಿಸಲಾಗಿದೆ. ಆರೋಪಿಯು ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ. ಎಲ್ಲ ಕಂಪನಿಗಳ ವ್ಯಾಲೆಟ್ ಪ್ರವೇಶ ಮತ್ತು ನಿಯಂತ್ರಣವನ್ನು ಹೊಂದಿದ್ದ ಆರೋಪಿ, ಆ ಕಂಪನಿಗಳ ಕ್ರಿಪ್ಟೋಕರೆನ್ಸಿಗಳನ್ನು ತನ್ನ ಖಾಸಗಿ ವ್ಯಾಲೆಟ್‌ಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
“ಆರೋಪಿ ಜೈನ್ 2021ರ ಮೇ ಮತ್ತು 2022ರ ಏಪ್ರಿಲ್ ನಡುವೆ ಸೈಫರ್ ಟೆಕ್ನಾಲಜೀಸ್‌ನಲ್ಲಿ ಕೆಲಸ ಮಾಡಿದರು. ಮಾರುಕಟ್ಟೆ ವಿಶ್ಲೇಷಣೆ ಮತ್ತು ಹಣಕಾಸು ವ್ಯವಹಾರ ವಿಭಾಗದಲ್ಲಿ ಆತ ವ್ಯವಹರಿಸಿದ್ದರು. ಆತನಿಗೆ ಕಂಪನಿಯ ವ್ಯಾಪಾರ ನಿರ್ವಹಣೆ ಲಾಗ್‌ಇನ್ ಮಾಹಿತಿಯನ್ನು ನೀಡಿತ್ತು. ಬಳಿಕ, ಕಂಪನಿಯ ಕ್ರಿಪ್ಟೋಕರೆನ್ಸಿಗಳು ಕಾಣೆಯಾಗಿರುವುದನ್ನು ಸಂಸ್ಥೆಯ ಮಾಲೀಕರು ಗಮನಿಸಿತ್ತು. ಕಂಪನಿಯ ಸಿಇಒ ಅಖಿಲ್ ಗುಪ್ತಾ ಅವರು 2022ರ ಏಪ್ರಿಲ್ 28ರಂದು ಸುಬ್ರಹ್ಮಣ್ಯನಗರ ಪೊಲೀಸರಿಗೆ ದೂರು ಸಲ್ಲಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣವನ್ನು ಸಿಐಡಿಯ ಸೈಬರ್ ಕ್ರೈಂ ಘಟಕಕ್ಕೆ ವರ್ಗಾಯಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ಸೈಬರ್ ಘಟಕದ ತಂಡವು ಆರೋಪಿಯನ್ನು ಬಂಧಿಸಿದೆ. “ಆರೋಪಿ ಜೈನ್ ಅವರು ಕ್ರಿಪ್ಟೋಕರೆನ್ಸಿಗಳನ್ನು ತಮ್ಮ ಸಂಬಂಧಿಕರ ವ್ಯಾಲೆಟ್‌ಗಳಿಗೆ ವರ್ಗಾಯಿಸಿದ್ದರು. ನಂತರ ಹಣವನ್ನು ವಿತ್‌ಡ್ರಾ ಮಾಡಿಕೊಂಡಿದ್ದರು. ಅವರು ಐಷಾರಾಮಿ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು. ಆತ ಸ್ಥಳದಿಂದ ಸ್ಥಳಕ್ಕೆ ತನ್ನ ವಾಸವನ್ನು ಬದಲಿಸುತ್ತಿದ್ದರು. ಹೀಗಾಗಿ, ಆತನ ಚಲನವಲನಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ತೊಡಕಾಗುತ್ತಿತ್ತು” ಎಂದು ತನಿಖಾ ತಂಡದ ಭಾಗವಾಗಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಟ್ರಸ್ಟ್ ಆಸ್ಪತ್ರೆಗಾಗಿ ಭೂಮಿ ಸ್ವಾಧೀನ: ವಿಜಯೇಂದ್ರ ವಿರುದ್ಧ ಆಯನೂರು ಆರೋಪ
2024ರ ಜುಲೈ 29ರಂದು ಪೊಲೀಸರು ಆತನ ಫೋನ್ ನಂಬರ್ ಪತ್ತೆ ಹಚ್ಚಿ, ಫೋನ್ ಕರೆಗಳ ಮಾಹಿತಿಯನ್ನು ಪರಿಶೀಲಿಸಿದಾಗ, ಆತನ ಹೆಚ್ಚಾಗಿ ಮನೆ ಬ್ರೋಕರ್‌ಗಳಿಗೆ ಕರೆ ಮಾಡಿರುವುದು ಕಂಡುಬಂದಿತ್ತು. ಆತನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ,ಆತ ಫೋನ್ ಸ್ವಿಚ್ ಆನ್ ಮಾಡಲು ಪೊಲೀಸರು ಕಾಯುತ್ತಿದ್ದರು. ಆತ ಮತ್ತೆ ಫೋನ್ ಸ್ವಿಚ್ ಆನ್ ಮಾಡಲು ಒಂದು ತಿಂಗಳು ಸಮಯ ಹಿಡಿಯಿತು. ಇತ್ತೀಚೆಗೆ ಆತ ಫೋನ್ ಆನ್ ಮಾಡಿದ್ದು, ಮೊಬೈಲ್ ನೆಟ್‌ವರ್ಕ್ ಸಹಾಯದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.