- ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕು
- ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ, ಜನ ವಿರೋಧಿ ಸರ್ಕಾರ
“ಬಡವರು, ಭೂಮಿ ಮತ್ತು ಹಕ್ಕು ವಂಚಿತರು. ತಮ್ಮ ಹಕ್ಕುಗಳಿಗಾಗಿ ಕಳೆದ 40-50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಯಾವ ಸರ್ಕಾರಗಳು ಅವರ ಹಕ್ಕುಗಳನ್ನು ಒದಗಿಸಲು ಮುಂದಾಗಿಲ್ಲ. ಇದು ನಿರ್ಣಾಯಕ ಹೋರಾಟವಾಗಿದೆ. ರಾಜ್ಯದ ಎಲ್ಲ ಬಡವರಿಗೆ ಭೂಮಿ, ವಸತಿ ದೊರೆಯದೆ ಹೋರಾಟ ನಿಲ್ಲುವುದಿಲ್ಲ. ಹಕ್ಕುಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಬೇಕು” ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನದ ಮುಂಚೆ ಬೆಂಗಳೂರಿನಲ್ಲಿ ಹೋರಾಟ ಸಮಿತಿ ನಡೆಸುತ್ತಿರುವ ಬಡವರ ‘ಬರಿಹೊಟ್ಟೆ ಸತ್ಯಾಗ್ರಹ’ದಲ್ಲಿ ಅವರು ಮಾತನಾಡಿದರು. “ಭೂವಂಚಿತರ ಹಕ್ಕುಗಳಿಗಾಗಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 18 ದಿನಗಳ ಕಾಲ ಹೋರಾಟ ನಡೆಸಿದ್ದೇವೆ. ಬೆಳಗಾವಿ ಅಧಿವೇಶನದ ವೇಳೆಯೂ ಸತ್ಯಾಗ್ರಹ ನಡೆಸಿದ್ದೇವೆ. ಆದರೆ, ಸರ್ಕಾರಗಳು ಆಶ್ವಾಸನೆಗಳನ್ನಷ್ಟೇ ನೀಡಿ, ಜವಾಬ್ದಾರಿಯಿಂದ ನುಣುಚಿಕೊಂಡಿವೆ” ಎಂದು ಕಿಡಿಕಾರಿದರು.
“40-50 ವರ್ಷಗಳಿಂದ ಭೂಮಿ, ವಸತಿ ವಂಚಿತರಿ ಹೋರಾಟ ನಡೆಸುತ್ತಿದ್ದಾರೆ. ಅಂದಿನಿಂದಲೂ ಜನರು ಹಕ್ಕಿಗಾಗಿ ಕಾಯುತ್ತಿದ್ದಾರೆ. ಅದರೂ, ಯಾವ ಸರ್ಕಾರಗಳೂ ಅವರಿಗೆ ಭೂಮಿ ಹಕ್ಕು ಕೊಟ್ಟಿಲ್ಲ. ನಾವು ನಿರ್ಣಾಯಕ ಹೋರಾಟ ಮಾಡಬೇಕು. ಇಂದು ನಮ್ಮ ಬೇಡಿಕೆ ಈಡೇರದಿದ್ದರೆ, ನಾಳೆ (ಆಗಸ್ಟ್ 15 – ಸ್ವಾತಂತ್ರ್ಯ ದಿನ) ಎಲ್ಲರೂ ಉಪವಾಸ ಸತ್ಯಾಗ್ರಹ ಮಾಡಬೇಕು. ಭೂಮಿ ಇಲ್ಲದೆ, ವಸತಿ ಇಲ್ಲದೆ ಹೇಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಿಸಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಕರಾಳ ಶನಿವಾರ | ರಾಜ್ಯದಲ್ಲಿ ಅಪಘಾತಗಳಿಂದ 37 ಸಾವು ; ಎಡಿಜಿಪಿ ಟ್ವೀಟ್
“ಹಿಂದಿನ ಸರ್ಕಾರ ಭ್ರಷ್ಟ ಸರ್ಕಾರ, ಜನ ವಿರೋಧಿ ಸರ್ಕಾರವೆಂದು ಸೋಲಿಸಿದ್ದೇವೆ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ಜನಪರವಾಗಿ ಕೆಲಸ ಮಾಡಬೇಕು. ಭೂಮಿ, ವಸತಿ ವಂಚಿತರಿಗೆ ಭೂಮಿ, ವಸತಿ ನೀಡಬೇಕು. ಅದಕ್ಕಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ಕರೆಯಬೇಕು” ಎಂದು ಒತ್ತಾಯಿಸಿದರು.
“ಉನ್ನತ ಮಟ್ಟದ ಸಭೆಗೆ ಕಂದಾಯ ಸಚಿವರು, ಅರಣ್ಯ ಇಲಾಖೆ ಸಚಿವರು, ವಸತಿ ಸಚಿವರು ಹಾಗೂ ಈ ಎಲ್ಲ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಇರಬೇಕು” ಎಂದು ಆಗ್ರಹಿಸಿದರು.