- ಆಗಸ್ಟ್ ತಿಂಗಳ ಕೊನೆಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭ ಸಾಧ್ಯತೆ
- ಸಂಚಾರ ಆರಂಭವಾದರೆ ವೈಟ್‌ಫೀಲ್ಡ್‌ನಿಂದ ಕೆಂಗೇರಿಗೆ ಒಂದೇ ರೈಲಿನಲ್ಲಿ ಪ್ರಯಾಣ
ನಮ್ಮ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವೆ ಮೊದಲ ಮೆಟ್ರೋ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದೆ.
ಆಗಸ್ಟ್ ತಿಂಗಳ ಕೊನೆಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ. ಸುರಕ್ಷಾ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.
“ಬುಧವಾರ ಮೊದಲನೇ ರೈಲು ಪ್ರಾಯೋಗಿಕ ಸಂಚಾರವು ಕೆ.ಆರ್.ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ಸಂಜೆ 6.04 ಗಂಟೆಗೆ ಪ್ರಾರಂಭವಾಗಿ ಮತ್ತೆ ಮರಳಿ ಕೆ.ಆರ್.ಪುರ ನಿಲ್ದಾಣಕ್ಕೆ ತಲುಪಿತು” ಎಂದು ನಮ್ಮ ಮೆಟ್ರೋ ಟ್ವೀಟ್ ಮಾಡಿದೆ.
ವೈಟ್ ಫೀಲ್ಡ್‌ನಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಜನ ಕೆ.ಆರ್.ಪುರದಲ್ಲಿ ಇಳಿದು ನಂತರ ಬೇರೆ ಸಾರಿಗೆ ಅವಲಂಬಿಸಬೇಕಿತ್ತು. ಆದರೆ, ಈಗ ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ವೈಟ್‌ಫೀಲ್ಡ್‌ನಿಂದ ಕೆಂಗೇರಿಗೆ ಒಂದೇ ರೈಲಿನಲ್ಲಿ ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ಪ್ರಯಾಣ ಬೆಳೆಸಬಹುದು.
ಈ ಸುದ್ದಿ ಓದಿದ್ದೀರಾ? ಇಬ್ಬರು ಕಳ್ಳರಿಂದ 18 ಮೊಬೈಲ್, 11 ದ್ವಿಚಕ್ರ ವಾಹನ ವಶಪಡಿಸಿಕೊಂಡ ಪೊಲೀಸರು
ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ 2.1 ಕಿ.ಮೀ ಹಾಗೂ ಕೆಂಗೇರಿ-ಚಲ್ಲಘಟ್ಟ ನಡುವೆ 1.9 ಕಿ.ಮೀ ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡ ಬಳಿಕ ಚಲ್ಲಘಟ್ಟ-ವೈಟ್‌ಫೀಲ್ಡ್‌ವರೆಗಿನ 43.5 ಕಿ.ಮೀ ನೇರಳೆ ಮಾರ್ಗ ಪೂರ್ಣವಾದಂತಾಗಲಿದೆ.