ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಪತಿ ಮೇಲೆ ಸೇಡು ತೀರಿಸಿಕೊಳ್ಳಲು ಪತ್ನಿಯೊಬ್ಬರು ಪೊಲೀಸರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಸದ್ಯ ಈಕೆಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ವಿದ್ಯಾರಾಣಿ (36) ಬಂಧಿತ ಮಹಿಳೆ. ಇವರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವರು. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬನ್ನಿಹಟ್ಟಿಯ ಕಿರಣ್ ಎಂಬುವವರನ್ನು ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಬೆಂಗಳೂರಿನ ನೇಕಾರ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕಿರಣ್ ಕಳೆದ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ, ದಂಪತಿ ಬೆಂಗಳೂರಿನ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ವಾಸವಾಗಿತ್ತು.
ಏನಿದು ಪ್ರಕರಣ?
ಕಳೆದ 6 ತಿಂಗಳ ಹಿಂದೆ ಉದ್ಯೋಗ ಹುಡುಕುವ ‘ಅಪ್ನಾ’ ಆ್ಯಪ್ ಮೂಲಕ ವಿದ್ಯಾರಾಣಿ ಅವರಿಗೆ ಬಿಹಾರ ಮೂಲದ ರಾಮ್ ಪ್ರಸಾದ್ (38) ಎಂಬುವರ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಇವರಿಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಕ್ರಮೇಣ ಇವರ ಸಂಪರ್ಕ ಪ್ರೀತಿಗೆ ತಿರುಗಿದೆ.
ಈ ಬಗ್ಗೆ ವಿದ್ಯಾರಾಣಿ ಪತಿ ಕಿರಣ್‌ಗೆ ತಿಳಿದು ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಒಂದು ದಿನ ಕೋಪಗೊಂಡ ಪತಿ ವಿದ್ಯಾರಾಣಿ ಮೊಬೈಲ್ ಒಡೆದುಹಾಕಿದ್ದಾರೆ.
ಇದರಿಂದ ಪತಿ ಮೇಲೆ ಸೇಡು ತೀರಿಸಿಕೊಳ್ಳಲು ವಿದ್ಯಾರಾಣಿ, ಮತ್ತೊಂದು ಮೊಬೈಲ್ ಫೋನ್ ಖರೀದಿಸಿ ಸ್ನೇಹಿತ ರಾಮಪ್ರಸಾದ್ ಅವರೊಂದಿಗೆ ಸಂಪರ್ಕ ಬೆಳೆಸಿದ್ದರು.
ಕಿರಣ್‌ನನ್ನು ಪೊಲೀಸ್ ಪ್ರಕರಣದಲ್ಲಿ ಸಿಲುಕಿಸಲು ರಾಮಪ್ರಸಾದ್ ಸಂಚು ರೂಪಿಸಿ, ಹಲವೆಡೆ ಆರ್‌ಡಿಎಕ್ಸ್ ಬಾಂಬ್ ಹಾಕಲಾಗಿದೆ ಎಂಬ ಬೆದರಿಕೆ ಸಂದೇಶವನ್ನು ವಿದ್ಯಾರಾಣಿಗೆ ಕಳುಹಿಸಿದ್ದನು. ವಿದ್ಯಾರಾಣಿ ತನ್ನ ಪತಿ ಮೊಬೈಲ್‌ನಿಂದ ಪೊಲೀಸರಿಗೆ ಮತ್ತು ಕೇಂದ್ರ ತನಿಖಾ ತಂಡಕ್ಕೆ ಬಾಂಬ್ ಹಾಕುವ ಸಂದೇಶ ರವಾನಿಸಿದ್ದಳು.
ಈ ಸುದ್ದಿ ಓದಿದ್ದೀರಾ? ಸೈಟ್ ಕೊಡಿಸುವುದಾಗಿ ಎನ್ಆರ್ಐಗೆ ₹30 ಲಕ್ಷ ವಂಚನೆ: ಟ್ವೀಟ್ ಮೂಲಕ ನಗರ ಪೊಲೀಸ್ ಕಮೀಷನರ್ಗೆ ದೂರು
ಈ ಘಟನೆ ನಡೆದ ದಿನ, ಡಿಸೆಂಬರ್ 1ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಹೀಗಾಗಿ, ಈ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದ, ಪೊಲೀಸರು ನಂಬರ್ ಮತ್ತು ಐಪಿ ಆಡ್ರಸ್ ಆಧರಿಸಿ ಆನೇಕಲ್‌ನ ಮನೆಗೆ ಬಂದು ದಂಪತಿಯನ್ನು ವಶಕ್ಕೆ ಪಡೆದು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ, ವಿದ್ಯಾರಾಣಿ ತನ್ನ ಪತಿಯ ಮೊಬೈಲ್‌ನಿಂದ ತನಿಖಾ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವುದು ಬಯಲಾಗಿದೆ. ಸದ್ಯ ಆರೋಪಿ ವಿದ್ಯಾರಾಣಿಯನ್ನು ಬಂಧಿಸಿರುವ ಪೊಲೀಸರು, ಬಿಹಾರ ಮೂಲದ ರಾಮಪ್ರಸಾದ್ ಬಂಧನಕ್ಕೆ ಬಲೆ ಬೀಸಿದ್ದಾರೆ.