ರಾಜ್ಯ ರಾಜಧಾನಿ ಬೆಂಗಳೂರಿನ ನಾಗರಿಕರು ಇದೀಗ ತಮ್ಮ ಕುಂದುಕೊರತೆ ದಾಖಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಂತ್ರಣ ಕೊಠಡಿಯನ್ನು ಅವಲಂಬಿಸಬೇಕಿಲ್ಲ. ಏಕೆಂದರೆ, ನಗರದ ರಸ್ತೆಯ ನಾಮಫಲಕದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು. ಸಮಸ್ಯೆ ಇದ್ದರೆ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಸದ್ಯ ಬಿಬಿಎಂಪಿಯ ಈ ಕಾರ್ಯ ಹಲವು ಜನರ ಪ್ರಶಂಸೆಗೆ ಕಾರಣವಾಗಿದೆ.
ಸದ್ಯ ಬಿಬಿಎಂಪಿ ದಕ್ಷಿಣ ವಲಯದಲ್ಲಿರುವ ನಗರದ ಬೀದಿಗಳ ಹೆಸರಿನ ಬೋರ್ಡ್ಗಳಲ್ಲಿ ಕ್ಯೂಆರ್ ಕೋಡ್ ಹಾಕಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿನೂತನ ಪ್ರಯೋಗ ವೈರಲ್ ಆಗಿ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಬಿಬಿಎಂಪಿ ಪಾರದರ್ಶಕತೆಯನ್ನು ಹೆಚ್ಚಿಸಲು ಬೀದಿ ಹೆಸರಿನ ಬೋರ್ಡ್ಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಹಾಕಲಾಗಿದೆ.
ನಾಗರಿಕರು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಲಭ್ಯವಾಗುವ ಲಿಂಕ್ ಮೂಲಕ ರಸ್ತೆ, ಚರಂಡಿ, ಬೀದಿ ದೀಪದ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿಯನ್ನು ಹೆಸರು, ಸಂಪರ್ಕ ಸಂಖ್ಯೆಗಳ ಸಹಿತ ಮಾಹಿತಿ ದೊರೆಯಲಿದೆ.
ಈ ಹಿಂದೆ ಬೆಂಗಳೂರಿನ ನಾಗರಿಕರು ತಮ್ಮ ಸುತ್ತಮುತ್ತಲಿನ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರು ನೀಡಬೇಕಾಗಿತ್ತು. ನಿಯಂತ್ರಣ ಕೊಠಡಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿತ್ತು. ಬಳಿಕ ಅವರು ಬಂದು ಕಾರ್ಯ ಮಾಡುತ್ತಿದ್ದರು. ಈ ವಿನೂತನ ಪ್ರಯೋಗ ಈ ಸಮಸ್ಯೆಗೆ ನಾಂದಿ ಹಾಡಿದೆ.
ಇದೀಗ ನಗರದ ನಾಗರಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ಈ ಕ್ಯೂಆರ್ ಕೋಡ್ ಮೂಲಕವೇ ಪಡೆಯಬಹುದು. ತಮ್ಮ ಸಮಸ್ಯೆಗಳಿದ್ದಲ್ಲಿ ನೇರವಾಗಿ ಅಧಿಕಾರಿಗಳಿಗೆ ತಿಳಿಸಬಹುದು. ಇದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.
ಈ ಹಿಂದೆ ಬಿಬಿಎಂಪಿ ವಾರ್ಡ್ಗಳಲ್ಲಿ ಆಯಾ ಕೆಲಸಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿ ಪಟ್ಟಿಯನ್ನು ನೀಡಲಾಗುತ್ತಿತ್ತು. ಅದು ಅಲ್ಲಿಗೆ ಮಾತ್ರ ಸೀಮಿತವಾಗುತ್ತಿತ್ತು. ಕೆಲವು ದಿನಗಳ ನಂತರ ಅಧಿಕಾರಿಗಳು ಬದಲಾದಾಗ ಅವರ ಮಾಹಿತಿ ಸಿಗುವುದು ಕಷ್ಟಕರವಾಗಿತ್ತು. ಈ ವಿನೂತನ ಯೋಜನೆಯಿಂದ ಈ ಸಮಸ್ಯೆ ಇರುವುದಿಲ್ಲ.
#Bengaluru
— Kamran (@CitizenKamran) September 20, 2023
BBMP has initiated a new project to install QR codes on street name boards to enhance transparency & provide easy access to the concerned authorities. Scanning these QR code will enable citizens to obtain contact information for all relevant departments pic.twitter.com/bvlFnImGYl
ಕಾರ್ಯನಿರತವಾಗಿರುವ ಅಧಿಕಾರಿ, ಗುತ್ತಿಗೆದಾರರ ಮಾಹಿತಿ ಅಪ್ಡೇಟ್ ಆಗುತ್ತಿರುತ್ತದೆ. ಕ್ಯೂಆರ್ ಕೋಡ್ಗಳನ್ನು ರಸ್ತೆ ನಾಮಫಲಕಗಳಿಗೆ ಅಂಟಿಸಲಾಗುತ್ತಿದೆ. ಪ್ರತಿ ರಸ್ತೆಯೂ ಕೂಡ ತನ್ನದೇ ಪ್ರತ್ಯೇಕವಾದ ಲಿಂಕ್ ಒಳಗೊಂಡಿರುತ್ತದೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಸುಮಾರು 10,500 ರಸ್ತೆಗಳಿವೆ. ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರ, ವಿಜಯನಗರ ವಿಧಾನಸಭ ಕ್ಷೇತ್ರಗಳ ರಸ್ತೆಗಳಲ್ಲಿ ಕ್ಯೂಆರ್ ಕೋಡ್ಗಳನ್ನು ಹಾಕಲಾಗಿದೆ. ಸದ್ಯ ದಕ್ಷಿಣ ವಲಯದಲ್ಲಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 13 ಸಾವಿರ ಕಿ.ಮೀ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ಮತ್ತು ವಲಯಗಳ ಎಲ್ಲ ರಸ್ತೆಗಳಿಗೂ ವಿಸ್ತರಿಸಲು ಸುಮಾರು ₹1.5 ಕೋಟಿ ವೆಚ್ಚವಾಗಬಹುದು ಎನ್ನಲಾಗಿದೆ.
Congress model of Governance!!pic.twitter.com/CUxToYNsyY
— Prasanna Gowda (@Prasann02936808) September 19, 2023
ಈ ಕ್ಯೂಆರ್ ಕೋಡ್ನಲ್ಲಿ ಎಲ್ಲ ರೀತಿಯ ಕಾಮಗಾರಿಗಳ ಮಾಹಿತಿ ಅಳವಡಿಸಲಾಗಿದೆ. ಸದ್ಯ ಇಂಗ್ಲಿಷ್ನಲ್ಲಿ ಮಾಹಿತಿ ಲಭ್ಯವಿದೆ.
ಸಾರ್ವಜನಿಕರು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಒಂದು ಲಿಂಕ್ ಬರುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಆ ಏರಿಯಾದ ಪ್ರತಿಯೊಂದು ಮಾಹಿತಿ ಸಿಗುತ್ತದೆ. ಆ ಏರಿಯಾದ ಎಮ್ಎಲ್ಎ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳ ನಂಬರ್ ಸಹ ನೀಡಲಾಗಿದೆ. ಸಾರ್ವಜನಿಕರಿಗೆ ಆ ಬೀದಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ಕರೆ ಮಾಡಿ ಸಮಸ್ಯೆ ಹೇಳಬಹುದು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರತಿಭಟನೆಗಳು ಫ್ರೀಡಂ ಪಾರ್ಕ್ಗೆ ಸೀಮಿತ; ನಿಯಮ ಹಿಂಪಡೆಯದಿದ್ದರೆ ಪ್ರತಿಭಟನೆಯ ಹಕ್ಕಿಗಾಗಿ ಹೋರಾಟ
ಯಾವ ಅಧಿಕಾರಿ ಹೆಸರು/ನಂಬರ್ ಲಭ್ಯ?
- ಶಾಸಕರ ಹೆಸರು, ಕ್ಷೇತ್ರ ವಿಭಾಗ, ವಾರ್ಡ್ ರಸ್ತೆ ಹೆಸರು, ರಸ್ತೆ ಐಡಿ, ರಸ್ತೆ ಗುಡಿಸುವವರು ಸೂಪರ್ ವೈಸರ್ ಸಂಪರ್ಕ ಸಂಖ್ಯೆ, ಕಸ ಸಂಗ್ರಹಿಸುವ ಸಮಯ, ಕಸ ಗುತ್ತಿಗೆದಾರರ ಸಂಪರ್ಕ ಸಂಖ್ಯೆ
- ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪಾದನೆ ವಿವರ, ಗುಂಡಿ ಮುಚ್ಚುವ, ಪಾದಚಾರಿ ರಸ್ತೆ ನಿರ್ವಹಣೆ, ಚರಂಡಿ ಮೇಲಿನ ಸ್ಲ್ಯಾಪ್ ಬದಲಾವಣೆ, ಚರಂಡಿ ಹೂಳು ತೆಗೆಯುವ, ಬೀದಿದೀಪ ನಿರ್ವಹಣೆ ಜವಾಬ್ದಾರಿ ಹೊಂದಿರುವ ಎಂಜಿನಿಯರ್ ಗುತ್ತಿಗೆದಾರರ ಹೆಸರು ಮತ್ತು ಸಂಪರ್ಕ ಸಂಖ್ಯೆ
- ಮರದ ಕೊಂಬೆ ತೆರವಿಗೆ ಅರಣ್ಯ ವಿಭಾಗ ಆರ್ಎಫ್ಒ ಗುತ್ತಿಗೆದಾರರ ವಿವರ, ನೀರು ಸರಬರಾಜು ಒಳಚರಂಡಿ ನಿರ್ವಹಣೆ ಜವಾಬ್ದಾರಿ ಹೊಂದಿರುವ ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿ ಹೆಸರು, ಸಂಪರ್ಕ ಸಂಖ್ಯೆ
- ನಿಯಂತ್ರಣ ಕೊಠಡಿ ಸಂಖ್ಯೆ, ಅಗ್ನಿಶಾಮಕ ದಳ ಸಿಬ್ಬಂದಿ ವಿವರ, ನಾಯಿ ಹಿಡಿಯಲು ಹಾಗೂ ಬೀಡಾಡಿ ದನಗಳ ಸಮಸ್ಯೆ ನಿವಾರಿಸುವ ಪಶುಸಂಗೋಪನೆ ಅಧಿಕಾರಿಯ ಹೆಸರು ಸಂಪರ್ಕ ಸಂಖ್ಯೆ, ಸೊಳ್ಳೆ ನಿವಾರಣೆಗೆ ಔಷಧ ಸಿಂಪಡಿಸುವ ಆರೋಗ್ಯ ಇಲಾಖೆ ಅಧಿಕಾರಿಯ ಮಾಹಿತಿಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪಡೆಯಬಹುದು.