ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ದಲ್ಲಿನ ಪ್ರಯಾಣ ದರವನ್ನು ಬರೋಬ್ಬರಿ 45% ಏರಿಕೆ ಮಾಡಿರುವುದು ಆತಂಕಕಾರಿ. ಅದರಲ್ಲೂ ಕೆಲವು ನಿಲ್ದಾಣಗಳ ನಡುವಿನ ಪ್ರಯಾಣ ದರವನ್ನು 70%ನಿಂದ 100%ವರೆಗೆ ಏರಿಕೆ ಮಾಡಲಾಗಿದೆ. ಇದು ಜನಸಾಮಾನ್ಯರನ್ನು ಸುಲಿಗೆ ಮಾಡುವ ಹುನ್ನಾರವೆಂದು ಎಐಡಿವೈಒ ಆಕ್ರೋಶ ವ್ಯಕ್ತಪಡಿಸಿದೆ.
ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಎಐಡಿವೈಒ ಬೆಂಗಳೂರು ಜಿಲ್ಲಾ ಕಾರ್ಯದರ್ಶ ಜಯಣ್ಣ, “ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ ಟ್ರಾಫಿಕ್ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ನಮ್ಮ ಮೆಟ್ರೋವನ್ನು ಆರಂಭಿಲಾಗಿದೆ. ಆದರೆ, ಬೆಲೆ ಏರಿಕೆಯೆಂಬ ಹಠಾತ್ ಹೇರಿಕೆಯಿಂದ ಜನಸಾಮಾನ್ಯರು ಪ್ರಯಾಣಿಸುವುದೇ ಕಷ್ಟಕರವಾಗುವಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಹೆಚ್ಚಿನ ಜನ ಮೆಟ್ರೋ ಪ್ರಯಾಣವನ್ನು ತ್ಯಜಿಸಿ ಮತ್ತೆ ವೈಯಕ್ತಿಕ ಗಾಡಿಗಳನ್ನು ಅವಲಂಬಿಸಲು ಶುರು ಮಾಡಿದ್ದಾರೆ. ಇದರಿಂದಾಗಿ ಟ್ರಾಫಿಕ್ ಜಾಮ್ ಇನ್ನೂ ಭೀಕರವಾಗುತ್ತದೆ. ಜನರ ತೆರಿಗೆ ಹಣದಿಂದ ನಿರ್ಮಾಣವಾದ ಮೆಟ್ರೋ, ಇದರ ಸೌಲಭ್ಯ ಜನರಿಗೇ ಸಿಗದಿರುವುದು ದುರದಷ್ಟಕರ. ಬೆಲೆ ಏರಿಕೆ ದಿನನಿತ್ಯದ ಸುದ್ದಿಯಾಗಿದೆ. ಬೆಲೆ ಏರಿಕೆಗೆ ಸಿಕ್ಕಿ ಜನರ ಜೀವನ ಜರ್ಜರಿತವಾಗಿದೆ. ದುಡಿದು ಬಂದ ಬಿಡಿಗಾಸು ಹಣ ಅಕ್ಕಿ, ಬೇಳೆ, ತರಕಾರಿ, ಮಕ್ಕಳ ಶಾಲೆ-ಕಾಲೇಜುಗಳ ಶುಲ್ಕ, ಆರೋಗ್ಯ, ಸಾರಿಗೆ ರೀತಿಯ ಮೂಲಭೂತ ಸೌಲಭ್ಯಕ್ಕಾಗಿ ಖರ್ಚಾಗಿ ತಿಂಗಳ ಕೊನೆಯಲ್ಲಿ ಸಾಲದ ಮೊರೆ ಹೋಗುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮೆಟ್ರೋ ದರ ಏರಿಕೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ” ಎಂದು ಕಿಡಿಕಾರಿದ್ದಾರೆ.
“ಸುಮಾರು 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿದಿನವೂ ಮೆಟ್ರೋ ಬಳಸುತ್ತಿದ್ದಾರೆ. ದರ ಏರಿಕೆಯು ಜನರ ಪ್ರಯಾಣದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅನಿವಾರ್ಯವಾಗಿ ವೈಯಕ್ತಿಕ ವಾಹನ ಬಳಸುವ ಪರಿಸ್ಥಿತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಜನ ಪರ ನಿಲುವನ್ನು ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.