ಮನೆಯಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡಿದ್ದು, ದಂಪತಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪುಲಿಕೇಶಿನಗರದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಿದ್ದೇಶ್ ಮತ್ತು ಅವರ ಪತ್ನಿ ಶಿಶಿಲಾ ಅವರು ಗಾಯಗೊಂಡಿದ್ದಾರೆ. ಇಬ್ಬರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಹಾ ಮಾಡಲೆಂದು ಶಿಶಿಲಾ ಅವರು ಅಡುಗೆ ಮನೆಗೆ ತೆರಳಿ, ಗ್ಯಾಸ್ ಸ್ಟೌವ್ ಹಚ್ಚಿದ್ದಾರೆ. ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್ ಸ್ಪೋಟಗೊಂಡಿದೆ. ಅಡುಗೆ ಮನೆಯಲ್ಲಿದ್ದ ಶಿಶಿಲಾ ಅವರಿಗೆ ಬೆಂಕಿ ತುಗುಲಿದೆ. ಸಮೀಪವೇ ಇದ್ದ ಸಿದ್ದೇಶ್ ಅವರಿಗೂ ಬೆಂಕಿ ತಲುಗಿದೆ. ಇಬ್ಬರಿಗೂ ತೀವ್ರ ಗಾಯಗಳಾಗಿವೆ.
ಶಿಶಿಲಾ ಅವರ ದೇಹದ 90% ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಿದ್ದೇಶ್ ಅವರ ದೇಹದ 45% ಭಾಗದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ, ರಾಯಚೂರು ಜಿಲ್ಲೆಯ ಏಗನೂರು ಗ್ರಾಮದಲ್ಲಿಯೂ ಸಿಲಿಂಡರ್ ಸ್ಫೋಟಿಸಿದ್ದ ಘಟನೆ ನಡೆದಿತ್ತು. ಗ್ರಾಮದ ನರಸಿಂಹಲು ಅವರು ಗುಡಿಸಲಿನಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ, ನರಸಿಂಹಲು ಮತ್ತು ಅವರ ಪತ್ನಿ ಗುಡಿಸಲಿನಲ್ಲಿಯೇ ಇದ್ದರು, ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆಯೇ ಗುಡಿಸಲಿನಿಂದ ಹೊರ ಓಡಿ ಬಂದಿದ್ದು, ಅಪಾಯದಿಂದ ಬಜಾವಾಗಿದ್ದರು. ಆದರೆ, ಐದು ಕುರಿಗಳು ಜೀವಂತವಾಗಿ ಸುಟ್ಟುಹೋಗಿದ್ದವು. ಅಲ್ಲದೆ, ಗುಡಿಸನಲ್ಲಿದ್ದ ಇಟ್ಟಿದ್ದ 40,000 ರೂ. ನಗದು, ಚಿನ್ನದ ಆಭರಣೆಗಳು ಹಾಗೂ ಆಹಾರ ಧಾನ್ಯಗಳು ಸುಟ್ಟು ಹೋಗಿವೆ. ಗುಡಿಸಲಿನ ಪಟ್ಟದಲ್ಲಿ ಕಟ್ಟಿದ್ದ ಕುರಿಗಳು ಜೀವಂತವಾಗಿ ಸುಟ್ಟುಹೋಗಿದ್ದವು.