ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ಡ್ರಗ್ಸ್ ಹಾವಳಿ ಹೆಚ್ಚಳವಾಗುತ್ತಿದ್ದು, ಯುವಕ-ಯುವತಿಯರು, ವಿದ್ಯಾರ್ಥಿಗಳು ಡ್ರಗ್ಸ್ಗೆ ಬಲಿಯಾಗುತ್ತಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಸನ್ನದ್ಧರಾಗಿದ್ದು, ಡ್ರಗ್ಸ್ ಎಂಬ ಮಾದಕ ವಸ್ತುವಿನ ವಿರುದ್ಧ ಹೋರಾಟ ನಡೆಸಲು ವಿದ್ಯಾರ್ಥಿಗಳ ಪಡೆ ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸರ ಸಹಕಾರದಲ್ಲಿ ವಿದ್ಯಾರ್ಥಿಗಳ ಮಾರ್ಷಲ್ಸ್ ಪಡೆ ರಚಿಸಲಾಗಿದೆ. ಪ್ರತಿ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಪೊಲೀಸರು ಡ್ರಗ್ಸ್ ಅಪಾಯದ ಜಾಗೃತಿ ತರಬೇತಿ ನೀಡಲಿದ್ದಾರೆ. ಡ್ರಗ್ಸ್ ಮುಕ್ತ ನಗರಕ್ಕಾಗಿ ವಿದ್ಯಾರ್ಥಿ ಮಾರ್ಷಲ್ ಪಡೆ ಪೊಲೀಸರ ಜೊತೆ ಕೈ ಜೋಡಿಸಿದೆ.
ಇತ್ತೀಚಿಗೆ ನಗರದ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ಹೆಚ್ಚಳವಾಗಿದೆ. ಹಾಗಾಗಿ, ನಗರದ ವಿಭಾಗಾವಾರು ವ್ಯಾಪ್ತಿಯಲ್ಲಿ ಸುಮಾರು 750 ವಿದ್ಯಾರ್ಥಿಗಳ ಮಾರ್ಷಲ್ಸ್ ಪಡೆಯನ್ನು ರಚಿಸಿ ತರಬೇತಿ ನೀಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಈ ಸುದ್ದಿ ಓದಿದ್ದೀರಾ? ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದಿಂದ 2023ರ ಅಂತಾರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ
ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸಲಿದ್ದಾರೆ. ಕಾಲೇಜು ಸುತ್ತಮುತ್ತ ಮಾದಕವಸ್ತು ಮಾರಾಟ, ಸೇವನೆ ಕಂಡು ಬಂದರೆ ಪೊಲೀಸ್ ಸ್ನೇಹಿಯಾಗಿ ಮಾಹಿತಿ ನೀಡಲಿದ್ದಾರೆ.
ಡ್ರಗ್ಸ್ ಮುಕ್ತ ಕಾಲೇಜಿಗಾಗಿ ಪೊಲೀಸರ ಜೊತೆ ಸಂಪರ್ಕದಲ್ಲಿದ್ದು ಕೆಲಸ ಮಾಡಲಿದ್ದಾರೆ. ಈಗಾಗಲೇ ಜಸ್ಟ್ ಸೇ ಟು ನೋ ಡ್ರಗ್ಸ್ ಹೆಸರಲ್ಲಿ ತರಬೇತಿ ಆರಂಭವಾಗಿದೆ. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಲಿದ್ದಾರೆ. ನಗರದ ಇತರೆ ಕಾಲೇಜು ವಿದ್ಯಾರ್ಥಿಗಳ ಸಂಪರ್ಕಿಸಿ ಸ್ವಯಂ ಸೇವಕರ ಪಡೆ ರಚಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ , “ಬೆಂಗಳೂರು ನಗರ ಪೊಲೀಸ್ ಹಾಗೂ ಆರೋಹಣ ಫೌಂಡೇಶನ್ ಸಹಯೋಗದಲ್ಲಿ ಯಲಹಂಕದ ಅಂಬೇಡ್ಕರ್ ಭವನದಲ್ಲಿ ‘ಪೊಲೀಸ್ ಮಾರ್ಷಲ್ಸ್’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಡ್ರಗ್ಸ್ ಸೇವನೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಪೊಲೀಸ್ ಮಾರ್ಷಲ್ಸ್ಗಳ ಕಾರ್ಯವಾಗಿದೆ. ಮುಂದಿನ 45 ದಿನಗಳ ಕಾಲಾವಧಿಯಲ್ಲಿ 700 ಪೊಲೀಸ್ ಮಾರ್ಷಲ್ಸ್ಗಳು ಸುಮಾರು 40,000 ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ” ಎಂದು ಹೇಳಿದೆ.