ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ. ಅದಕ್ಕಾಗಿ, ಅಲ್ಲಿರುವ 468 ಮರಗಳನ್ನು ಕಡಿಯಲು ನಿರ್ಧರಿಸಿದೆ. ಮರ ಕಡಿಯುವ ವಿಚಾರವಾಗಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ರೈಲ್ವೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.
ರೈಲ್ವೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕಂಟೋನ್ಮೆಂಟ್ ರೈಲು ನಿಲ್ದಾಣದ ಆವರಣವನ್ನು ನವೀಕರಿಸಲು ಮುಂದಾಗಿದೆ. ಬಹುಮಹಡಿ ಪಾರ್ಕಿಂಗ್ ಸಂಕೀರ್ಣ, ಕಾಯುವ ಕೋಣೆ, ಟಿಕೆಟ್ ಕೌಂಟರ್‌ಗಳು ಸೇರಿದಂತೆ ನಾನಾ ಕಾಮಗಾರಿ ನಡೆಸಲು ಯೋಜನೆ ರೂಪಿಸಿದೆ. ಈ ಕಾಮಗಾರಿಗಳನ್ನು ನಡೆಸಲು, ರೈಲ್ವೆ ಆವರಣದಲ್ಲಿರುವ 368 ಮರಗಳನ್ನು ಕಡಿಯಬೇಕೆಂದು ಪ್ರಸ್ತಾವನೆಯಲ್ಲಿ ಹೇಳಿದೆ.
ಪ್ರಸ್ತಾವನೆ ಸ್ವೀಕರಿಸಿರುವ ಬಿಬಿಎಂಪಿ ಅರಣ್ಯ ವಿಭಾಗವು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಮನವಿ ಮಾಡಿದೆ. ಮರ ಕಡಿಯುವುದಕ್ಕೆ ಹೆಚ್ಚು ಹೆಚ್ಚಾಗಿ ವಿರೋಧ ವ್ಯಕ್ತವಾದರೆ ಮತ್ತು ಆಕ್ಷೇಪಗಳಿಗೆ ರೈಲ್ವೆ ಅಧಿಕಾರಿಗಳು ಸೂಕ್ತ ಉತ್ತರ ನೀಡದಿದ್ದರೆ, ಮರ ಕಡಿಯಲು ಅನುಮತಿ ನೀಡುವುದಿಲ್ಲ ಎಂದು ಬಿಬಿಎಂಪಿ ಅರಣ್ಯ ವಿಭಾಗ ಹೇಳಿದೆ.
ಪ್ರಸ್ತಾವನೆಯ ಬಗ್ಗೆ ತಿಳಿದ ಹಲವಾರು ಪರಿಸರವಾದಿಗಳು ರೈಲ್ವೆ ಯೋಜನೆಯನ್ನು ವಿರೋಧಿಸಿದ್ದಾರೆ. ಮರ ಕಡಿಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕಾಶ್ಮೀರಿಯೊಬ್ಬಳ ನಿತ್ಯ ನಿಜಾಯಿತಿಯ ಸತ್ಯ ಸ್ವಗತ
ಈಗಾಗಾಲೇ, ಬೆಂಗಳೂರು ಕಾಂಕ್ರೀಟ್ ಕಾಡಿನಂತಾಗಿದೆ. ಎಲ್ಲೆಡೆ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ನಿರಂತರವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ. ಪರಿಸರ ರಕ್ಷಣೆಗೆ ಆಡಳಿತ ಸಂಸ್ಥೆಗಳು ಒತ್ತುಕೊಡುತ್ತಿಲ್ಲ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣವೂ ಹೆಚ್ಚತ್ತಿದೆ. ಹೀಗಿರುವಾಗ ಹೆಚ್ಚು ಮರಗಳನ್ನು ಬೆಳೆಸಬೇಕು. ಯಾವುದೇ ಕಾರಣಕ್ಕೂ ಮರ ಕಡಿಯಲು ಅವಕಾಶ ನೀಡಬಾರದು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಸದ್ಯಕ್ಕೆ, ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು 480 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರೈಲ್ವೆ ಮುಂದಾಗಿದೆ. ಅದರಲ್ಲಿ, 1,000 ಬೈಕ್ ಮತ್ತು 2,000 ಕಾರುಗಳನ್ನು ನಿಲ್ಲಿಸುವ ಸಾಮರ್ಥ್ಯದ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ, ಬೃಹತ್ ಕಾಯುವ ಕೋಣೆ, ಹೆಚ್ಚುವರಿ ಟಿಕೆಟ್ ಕೌಂಟರ್‌ಗಳು, ಸೋಲಾರ್ ಪವರ್ ಮೇಲ್ಚಾವಣಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲು ಯೋಜಿಸಿದೆ.