ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಒಂದು ವಾರ ಕಾಲಾವಕಾಶ ಕೇಳಿದೆ. ಪ್ರಕರಣ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಸಿದ್ದಪಡಿಸಲು ತಿಂಗಳ ಅವಧಿ ಬೇಕಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.
ಜೂನ್ 4ರಂದು ಬೆಂಗಳೂರಿನ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಪ್ರವೇಶಿಸಲು ಆರ್‌ಸಿಬಿ ಅಭಿಮಾನಿಗಳು ಯತ್ನಿಸುವಾಗ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕಾಲ್ತುಳಿತ ದುರ್ಘಟನೆ ಸಂಭವಿಸಲು ಆರ್‌ಸಿಬಿ ತಂಡ-ಫ್ರಾಂಚೈಸಿಯ ಧಾವಂತ, ಸರ್ಕಾರದ ಆತುಕ, ಕೆಎಸ್‌ಸಿಎ-ಸರ್ಕಾರ-ಪೊಲೀಸ್ ನಡುವಿನ ಸಂವಹನ ಕೊರತೆಯೇ ಕಾರಣವೆಂದು ಆರೋಪಿಸಲಾಗಿದೆ. ದುರಂತ ಘಟನೆ ಕುರಿತು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದೆ. ಹಲವಾರು ಅಧಿಕಾರಿಗಳನ್ನು ಅಮಾನತು ಮಾಡಿದೆ.
ಪ್ರಕರಣ ಸಂಬಂಧ ಹೈಕೋರ್ಟ್ ಕೂಡ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, “ಪ್ರಕರಣಕ್ಕೆ ಸಂಬಂಧಿಸಿತ ವರದಿಯನ್ನು ಇನ್ನೂ ಯಾಕೆ ಸಲ್ಲಿಸಿಲ್ಲ” ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಈ ಲೇಖನ ಓದಿದ್ದೀರಾ?: ಐಪಿಎಲ್‌ನಲ್ಲಿದೆ ಜನ ಮನಸ್ಥಿತಿಯ ಪ್ರತಿಬಿಂಬ: ಸಚಿನ್, ಧೋನಿ, ಕೊಹ್ಲಿ ಸ್ಟಾರ್ ಆಗಿದ್ದೂ ಹೀಗೆ…!
ಸರ್ಕಾರದ ಪರವಾಗಿ ಹಾಜರಿದ್ದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ಸರ್ಕಾರವು ತನಿಖೆಗೆ ಆದೇಶ ನೀಡಿದೆ. ತನಿಖೆ ನಡೆಯುತ್ತಿದ್ದು, ವರದಿ ಸಲ್ಲಿಸಲು ಒಂದು ವಾರ (ಜೂನ್ 16ರವರೆಗೆ) ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
ಅಡ್ವಕೇಟ್ ಜನರಲ್ ಮನವಿಗೆ ಪ್ರತಿಕ್ರಿಯಿಸಿದ ಪೀಠವು, “ಜೂನ್ 12ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು” ಎಂದು ತಾಕೀತು ಮಾಡಿದೆ. ವಿಚಾರಣೆಯಲ್ಲಿ ಜೂನ್ 12ಕ್ಕೆ ಮುಂದೂಡಿದೆ.