ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಕಾಂಗ್ರೆಸ್ ಸರ್ಕಾರವು ಎಸ್‌ಸಿ/ಟಿಎಸ್‌ಪಿ ನಿಧಿಯನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ದಲಿತ-ಬಡ ಸಮುದಾಯಗಳ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳುವುದು ದಲಿತ ಸಮುದಾಯಕ್ಕೆ ಎಸಗುವ ದ್ರೋಹ. ಸರ್ಕಾರದ ಈ ನಡೆ ನಿಂದನೀಯ ಮತ್ತು ಅಸಂವಿಧಾನಿಕ ಎಂದು ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜ್‌ಗೋಪಾಲ್ ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಎಸ್‌ಸಿ/ಟಿಎಸ್‌ಪಿ ಯೋಜನೆಗಳನ್ನು ಸಮಾಜದಲ್ಲಿ ಹಿಂದುಳಿದಿರುವ ಎಸ್‌ಸಿ/ಎಸ್‌ಟಿ ಸಮುದಾಯಗಳ ಸಬಲೀಕರಣಕ್ಕಾಗಿ ರೂಪಿಸಲಾಗಿದೆ. ಈ ಯೋಜನೆಗಳ ವಿಶೇಷ ಮೀಸಲು ಅನುದಾನವನ್ನು ಸಾರ್ವಜನಿಕ ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ನ್ಯಾಯೋಚಿತಲ್ಲ. ಎಸ್‌ಸಿ/ಟಿಎಸ್‌ಪಿ ಹಣವನನ್ನು ಇತರ ಉದ್ದೇಶಕ್ಕೆ ಬಳಸುವುದು ನೈತಿಕತೆಗೂ, ಸಂವಿಧಾನಕ್ಕೂ ವಿರುದ್ಧವಾದದ್ದು” ಎಂದು ಕಿಡಿಕಾರಿದ್ದಾರೆ.
“ದಲಿತ ಅಭಿವೃದ್ಧಿಗಾಗಿ ಮೀಸಲಾದ ಹಣವನ್ನು ಇತರ ಉದ್ದೇಶಗಳಿಗೆ ಬಳಸುವುದು ಅಂಬೇಡ್ಕರ್ ವರ ದೃಷ್ಟಿಕೋನ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಸಿಡುಗು ಹಾಕುವ ಕ್ರಮವಾಗಿದೆ. ಬಡ ದಲಿತ ಮತ್ತು ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಬೇರೆಯವರಿಗೆ ಹಂಚುವುದು ಸಮಾಜವನ್ನು ಹಿನ್ನಡೆಗೆ ದೂಡುತ್ತದೆ” ಎಂದು ಎಚ್ಚರಿಸಿದ್ದಾರೆ.
“ಸರ್ಕಾರವು ಯಾವುದೇ ಕಾರಣಕ್ಕೂ ಎಸ್‌ಸಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳು ಅಥವಾ ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು. ಸರ್ಕಾರ ಈ ಹಣವನ್ನು ನಿಗದಿತ ಗುರಿಗಳಿಗಾಗಿ ಮಾತ್ರವೇ ಬಳಸುತ್ತದೆ ಎಂಬ ಖಚಿತತೆ ನೀಡಬೇಕು. ಸಂವಿಧಾನಾತ್ಮ,ಕ ಹಕ್ಕುಗಳನ್ನು ಭಂಗಗೊಳಿಸುವ ಯಾವುದೇ ತೀರ್ಮಾನವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
“ಎಸ್‌ಸಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಸ್ಪಷ್ಟನೆ ನೀಡದಿದ್ದಲ್ಲಿ, ರಾಜ್ಯವ್ಯಾಪಿ ಬೃಹತ್ ಹೋರಾಟ, ಕಾನೂನು ಹೋರಾಟ ಹಾಗೂ ಸಾಮೂಹಕ ಚಳವಳಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.