ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ ಆರ್ ಪುರಂ (ಹಂತ 2 ಎ) ಮತ್ತು ಕೆ ಆರ್ ಪುರಂ – ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ -2 ಬಿ) ಮಾರ್ಗಗಳಲ್ಲಿ ಸೆಪ್ಟೆಂಬರ್ 2026ರ ವೇಳೆಗೆ ಮೆಟ್ರೋ ಸಿದ್ಧವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ ಎಲ್ ಯಶವಂತ ಚವಾಣ್ ಹೇಳಿದ್ದಾರೆ.
ಐಎನ್‌ಎಫ್‌ಎಚ್‌ಆರ್‌ಎ (ಮೂಲಸೌಕರ್ಯ, ಸೌಲಭ್ಯ, ಮಾನವ ಸಂಪನ್ಮೂಲ ಮತ್ತು ರಿಯಾಲ್ಟಿ ಅಸೋಸಿಯೇಷನ್) ತನ್ನ 8ನೇ ಆವೃತ್ತಿಯ ವರ್ಕ್‌ಪ್ಲೇಸ್ ಎಕ್ಸಲೆನ್ಸ್ ಸಮ್ಮೇಳನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಬೆಂಗಳೂರು – ಉತ್ತಮ ಮೂಲಸೌಕರ್ಯ’ ಕುರಿತ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
“ಹಂತ 2ಎ ಮತ್ತು 2ಬಿ ಸಿದ್ಧವಾಗುವ ಹೊತ್ತಿಗೆ, ಎಲೆಕ್ಟ್ರಾನಿಕ್ ಸಿಟಿ ಲೈನ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಹೊಂದಿರಲಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಐಟಿ ಉದ್ಯಮದ ವೃತ್ತಿಪರರು ನಿರಾಯಾಸವಾಗಿ ಪ್ರಯಾಣ ಬೆಳೆಸಬಹುದು” ಎಂದರು.
“ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಕಾರ, ಬಿಎಂಆರ್‌ಸಿಎಲ್ 2031ರ ವೇಳೆಗೆ 317 ಕಿಮೀ ಸ್ಥಾಪಿಸಲಿದೆ. ಸಾರ್ವಜನಿಕ ಬಳಕೆ ಸಾರ್ವಜನಿಕ ಸಾರಿಗೆಗೆ ಸಹಾಯ ಮಾಡಲು ಆ ಹೊತ್ತಿಗೆ 450 ಕಿಮೀ ತಲುಪಲು ಆಂತರಿಕವಾಗಿ ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಡಬ್ಲ್ಯುಆರ್‌ಐ ಇಂಡಿಯಾದ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಮತ್ತು ರಸ್ತೆ ಸುರಕ್ಷತೆಯ ಸಹವರ್ತಿ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, “ವಾಹನ ಚಲಾಯಿಸದ 18 ವರ್ಷದೊಳಗಿನವರನ್ನು ಬಿಟ್ಟರೆ, ಬೆಂಗಳೂರಿನಲ್ಲಿ ಜನಸಂಖ್ಯೆಗಿಂತ ಹೆಚ್ಚು ವಾಹನಗಳಿವೆ. ಬೆಂಗಳೂರಿನಲ್ಲಿ ಸುಮಾರು 1.2 ಕೋಟಿ ವಾಹನಗಳಿವೆ. 2016 ರಲ್ಲಿ ನಗರವು ಕೇವಲ 45 ಲಕ್ಷ ವಾಹನಗಳನ್ನು ಹೊಂದಿತ್ತು. ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೇರೇಪಿಸುವ ಕೆಲಸ ಮಾಡಬೇಕಿದೆ” ಎಂದು ಹೇಳಿದರು.
ಬಿಎಂಟಿಸಿಯ ಕಾರ್ಯಾಚರಣೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ ಆರ್ ವಿಶ್ವನಾಥ್ ಮಾತನಾಡಿ, “ರಸ್ತೆಯಲ್ಲಿ ಖಾಸಗಿ ವಾಹನಗಳ ಹಾವಳಿಯಿಂದ ಬಸ್‌ಗಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತವೆ. ಸಂಚಾರ ದಟ್ಟಣೆಯ ಸಮಯದಲ್ಲಿ, ಬಸ್‌ಗಳು ಗಂಟೆಗೆ 8 ರಿಂದ 10 ಕಿಮೀ ವೇಗದಲ್ಲಿ ಚಲಿಸುತ್ತವೆ. ಇದು ಪಾದಚಾರಿಗಳು ನಡೆಯಬಹುದಾದ ವೇಗವಾಗಿದೆ” ಎಂದರು.
“ಪ್ರಸ್ತುತ ಬಿಎಂಟಿಸಿಯ 6,000 ಬಸ್‌ಗಳೊಂದಿಗೆ 57 ಲಕ್ಷ ಟ್ರಿಪ್‌ಗಳನ್ನು ನಡೆಸುತ್ತಿದ್ದೇವೆ. 390 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದೇವೆ. ಆರು ತಿಂಗಳೊಳಗೆ ಅವುಗಳಲ್ಲಿ 1,500 ವಾಹನಗಳನ್ನು ಹೊಂದುವ ಭರವಸೆ ಇದೆ. ಇದು ಹಸಿರು ಚಲನಶೀಲತೆಯನ್ನು ಉತ್ತೇಜಿಸುತ್ತದೆ. ಇತ್ತೀಚಿನ ಬಂದ್ ದಿನದಂದು, ವಾಯು ವಜ್ರ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಮತ್ತು ಹೊರಹೋಗುವ ಸಾಮಾನ್ಯ ಸರಾಸರಿ ಅಂಕಿಅಂಶ 12,000 ಬದಲಿಗೆ ಸುಮಾರು 26,000 ಜನರನ್ನು ಸಾಗಿಸಿದವು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ಗುರುತಿಸಲು ಪಾಲಿಕೆ ಜತೆ ಕೈಜೋಡಿಸಿ
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ನ ನಿರ್ದೇಶಕ ಆರ್ ಕೆ ಸಿಂಗ್, “ನಾವು ಪ್ರತಿ 5 ನಿಮಿಷಗಳಿಗೊಮ್ಮೆ ಉಪನಗರ ರೈಲು ಓಡಿಸಲು ಯೋಜಿಸಿದ್ದೇವೆ. ಬೆನ್ನಿಗೇನಹಳ್ಳಿ ಮತ್ತು ಚಿಕ್ಕಬಾಣಾವಾರ (ಕಾರಿಡಾರ್ 2) ನಡುವಿನ ಒಂದು ಉಪನಗರ ಕಾರಿಡಾರ್‌ನಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಇನ್ನೊಂದಕ್ಕೆ ಹೀಲಲಿಗೆ ಮತ್ತು ರಾಜನಕುಂಟೆ ನಡುವಿನ ಟೆಂಡರ್ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ” ಎಂದು ಹೇಳಿದರು.
ಒಆರ್‌ಆರ್‌ಸಿಎ ಅಧ್ಯಕ್ಷ ಮಾನಸ್ ದಾಸ್ ಮಾತನಾಡಿ, “ಎಲ್ಲ ಮೆಟ್ರೋ ನಿಲ್ದಾಣಗಳ ಸುತ್ತಲೂ ಫುಟ್‌ಪಾತ್‌ಗಳನ್ನು ಖಾತ್ರಿಪಡಿಸುವಲ್ಲಿ ಸಂಘವು ಪ್ರಮುಖ ಪಾತ್ರ ವಹಿಸಿದೆ” ಎಂದರು.
“ನಿವಾಸಿಗಳಿಗೆ ತಡೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಾರ್ವಜನಿಕ ಸಾರಿಗೆ ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆ ಸಹಭಾಗಿತ್ವದಲ್ಲಿದೆ” ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಹೇಳಿದರು.