‘ಕಾವೇರಿ ನೀರು ನಿಯಂತ್ರಣ ಸಮಿತಿ’ಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿರುವ ರಾಜ್ಯ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಹಾಗೂ ರಾಜಕೀಯ ಲಾಭ ಪಡೆಯಲು ಕನ್ನಡಿಗರ ಹಿತವನ್ನೇ ಬಲಿ ಕೊಟ್ಟಿದೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಗುಡುಗಿದ್ದಾರೆ.
ರಾಜ್ಯದಲ್ಲಿ ಈ ವರ್ಷ ನಿರೀಕ್ಷೆಯ ಮಳೆಯಾಗದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ಕನ್ನಡಿಗರಿಗೆ ಕುಡಿಯುವ ನೀರಿಗೂ ಸಂಕಷ್ಟವಿದೆ ಎಂಬ ಗಂಭೀರ ಸಂಗತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ವಿಧಾನಸೌಧದ ಬಳಿ ಇರುವ ಶಾಸಕರ ಭವನದಲ್ಲಿ ಮಂಗಳವಾರ ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟ ಸಂಘಗಳು, ನಾಡಿನ ನೀರಾವರಿ ತಜ್ಞರು, ಸಾಹಿತಿಗಳು ಹಾಗೂ ಚಿಂತಕರನ್ನೊಳಗೊಂಡ ‘ನಮ್ಮ ಜಲ ನಮ್ಮದು – ಬನ್ನಿ ಮಾತಾಡೋಣ’ ವಿಶೇಷ ದುಂಡುಮೇಜಿನ ಸಭೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಇನ್ನಿತರ ನಾಯಕರುಗಳ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, “ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ತಕ್ಷಣ, ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರದ ಧೋರಣೆ ಒಪ್ಪುವಂಥದ್ದಲ್ಲ. ಸರ್ಕಾರ ಪ್ರತಿಯಾಗಿ ಕೂಡಲೇ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಬೇಕಿತ್ತು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು, ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಹಿತ ಬಲಿಕೊಟ್ಟಿರುವುದು ಸರಿಯಲ್ಲ” ಎಂದರು.
“ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದ ಸರ್ಕಾರವು, ಪ್ರತಿಭಟನೆ ಹೆಚ್ಚಾದಂತೆ ಸರ್ವಪಕ್ಷ ಸಭೆ ಕರೆದಿರುವುದು ‘ಊರು ಕೊಳ್ಳೆಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ’ ಈ ಸಭೆ. ಈ ಸಭೆಗೆ ಕಾವೇರಿ ನೀರು ಉಳಿಸಲು ಸತತ ಹೋರಾಟ ನಡೆಸಿರುವ ರೈತ ಮತ್ತು ಕನ್ನಡ ಸಂಘಟನೆಗಳನ್ನು ಹೊರಗಿಟ್ಟು, ಎರಡು ರಾಜಕೀಯ ಪಕ್ಷಗಳನ್ನು ಮಾತ್ರ ಕರೆದದ್ದು ಈ ಸರ್ಕಾರದ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಾಗಿದೆ. ಕರ್ನಾಟಕಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗೆ ಕನ್ನಡಿಗರ ಹಿತವನ್ನು ಬಲಿಕೊಟ್ಟಿರುವುದು, ಕಾಣದಂತೆ ನೀರು ಹರಿಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ” ಎಂದು ತಿಳಿಸಿದರು.
ಕನ್ನಡಿಗರಿಗೆ ನೀರು ದಕ್ಕಬಾರದು: ತಮಿಳುನಾಡು ಧೋರಣೆ!
“ತಮಿಳುನಾಡು ‘ನೀರಿರಲಿ ಇಲ್ಲದಿರಲಿ, ಕರ್ನಾಟಕದ ಜನರು ಕುಡಿಯಲು ನೀರಿಲ್ಲದೆ ಒದ್ದಾಡಿದರೂ ಪರವಾಗಿಲ್ಲ, ನಮಗೆ ಬರಬೇಕಾದ ಪಾಲು ಬಂದುಬಿಡಲಿ’ ಎಂಬ ಧೋರಣೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿಯಾದುದ್ದಾಗಿದೆ. ಸಹಜವಾಗಿ ಮಳೆಯಾದ ವರ್ಷದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆ ಸರಾಗವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಮಳೆ ಕಡಿಮೆಯಾದ ವರ್ಷದಲ್ಲಿ ಎರಡೂ ರಾಜ್ಯಗಳು ಸಂಕಷ್ಟವನ್ನೂ ಪರಸ್ಪರ ಹಂಚಿಕೊಳ್ಳಬೇಕು. ಆಗ ನೀರು ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಹಿಂದಿನ ವರ್ಷ ತಮಿಳುನಾಡಿಗೆ 500 ಟಿಎಂಸಿ ನೀರನ್ನು ಹೆಚ್ಚಾಗಿ ಬಿಡಲಾಗಿದೆ. ಅದನ್ನು ಪೂರ್ಣ ಉಳಿಸಿಕೊಳ್ಳಲು ವ್ಯವಸ್ಥೆ ಇಲ್ಲದೆ ಸಮುದ್ರಕ್ಕೆ ಹರಿದು ಹೋಗಿದೆ. ಕರ್ನಾಟಕಕ್ಕೆ ಮೇಕೆದಾಟು ಯೋಜನೆಗೆ ತಕರಾರು ತೆಗೆದಿದೆ. ಸಮುದ್ರಕ್ಕೆ ನೀರು ಹರಿದು ವ್ಯರ್ಥವಾದರೂ ಪರವಾಗಿಲ್ಲ. ಕನ್ನಡಿಗರಿಗೆ ನೀರು ದಕ್ಕಬಾರದು ಎಂಬ ತಮಿಳುನಾಡು ಧೋರಣೆ ಮಾನವ ವಿರೋಧಿಯಾದದ್ದು” ಎಂದು ಹೇಳಿದರು.
“ಈ ವರ್ಷ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಕೊಡಗು ಸೇರಿದಂತೆ ಕಾವೇರಿ ಜಲಾಶಯದ ಪ್ರದೇಶಗಳಲ್ಲಿ ಕಡಿಮೆ ಮಳೆಯಿಂದಾಗಿ ಒಳಹರಿವು ಕಡಿಮೆಯಾಗಿದೆ. ಜೂನ್ನಿಂದ ಆಗಸ್ಟ್ ವರೆಗೆ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಶೇ.44 ರಷ್ಟು ಮಳೆಯ ಕೊರತೆಯಾಗಿದೆ. ರಾಜ್ಯದಲ್ಲಿ ಮುಂಗಾರು ಅವಧಿ ಮುಗಿಯುತ್ತಿದೆ. ಆದರೆ, ತಮಿಳುನಾಡಿನಲ್ಲಿ ಮುಂಗಾರು ಅವಧಿ ಇನ್ನೂ ಇದೆ. ನಮ್ಮಲ್ಲಿ ಮಳೆ ಕೊರತೆಯೂ ಆಗಿದೆ. ಆದರೂ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು ತಪ್ಪೆಂದು ಸುಪ್ರೀಂ ಕೋರ್ಟ್ನಲ್ಲಿ ಮನವರಿಕೆ ಮಾಡಿಕೊಡಬೇಕಿತ್ತು. ಕರ್ನಾಟಕ ಜಲಾಶಯದಲ್ಲಿರುವ ಕುಡಿಯುವ ನೀರಿಗೂ ಸಾಕಾಗುವುದಿಲ್ಲ ಎಂಬುದನ್ನು ಕರ್ನಾಟಕ ಸ್ಪಷ್ಟವಾಗಿ ದಾಖಲೆ ಸಮೇತ ನ್ಯಾಯಾಲಯಕ್ಕೆ ಮನವಿ ಮಾಡಬೇಕಿದೆ” ಎಂದರು.
ಮೇಕೆದಾಟು ಯೋಜನೆ ತಂದು ನೀರು ಪೋಲಾಗುವುದನ್ನು ತಪ್ಪಿಸಬೇಕು
“ಸುಪ್ರೀಂ ಕೋರ್ಟ್ 2007ರ ತೀರ್ಪು ಬಂದನಂತರ ಏನು ಹೆಚ್ಚುವರಿ ನೀರು 178 ಟಿಎಂಸಿ ತಮಿಳುನಾಡಿಗೆ ಕೊಟ್ಟು ಉಳಿದದ್ದನ್ನು ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯ ಬಂದಿದೆ. ಅದರ ಪ್ರಕಾರ ಹೊಗೆನಕಲ್ ಫಾಲ್ಸ್ನಲ್ಲಿ 25 ಟಿಎಂಸಿ ನೀರು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಈಗಾಗಲೇ ಕಾರ್ಯಯೋಜನೆ ಜಾರಿಗೆ ತಂದಿದ್ದಾರೆ. ಹೀಗಿರುವಾಗ ನಾವೇಕೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬಾರದು. ಸುಮಾರು 50-60 ಟಿಎಂಸಿ ನೀರು ಪೋಲಾಗುವುದನ್ನು ಏಕೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬುದು ನಮ್ಮ ಆತಂಕ,” ಎಂದು ಶಾಂತಕುಮಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? 2 ವರ್ಷದ ಮಗುವಿಗೆ ಮರುಜೀವ ನೀಡಿದ ಬೆಂಗಳೂರು-ದೆಹಲಿ ವಿಮಾನದಲ್ಲಿದ್ದ ಐವರು ವೈದ್ಯರು
“ಎರಡನೆಯದಾಗಿ ಅಂದು ಸುಪ್ರೀಂ ಕೋರ್ಟ್ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನಿಯೋಜಿಸದ ಪ್ರಮಾಣ ಬಹಳ ಕಡಿಮೆ. ಅದನ್ನು ಹೆಚ್ಚುವರಿ ಮಾಡಬೇಕು. 15 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಭಾಗಕ್ಕೆ ಕುಡಿಯುವ ನೀರಿನ ಸಲುವಾಗಿ 30 ಟಿಎಂಸಿ ನೀರು ಕೊಡಲು ಆದೇಶ ಮಾಡಬೇಕು ಎಂದು ಸುಪ್ರೀಂ ಕೋರ್ಟ್ಗೆ ಮರು ಪರಿಶೀಲನೆ ಅರ್ಜಿಯನ್ನು ರಾಜ್ಯ ಸರ್ಕಾರ ಯಾಕೆ ಹಾಕಬಾರದು? ಈ ಅಂಶಗಳನ್ನು ಸರ್ಕಾರದ ಗಮನಕ್ಕೆ ತರುವ ಅಗತ್ಯವಿದೆ” ಎಂದು ತಿಳಿಸಿದರು.