ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿರುವ ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನವೆಂದು ನ್ಯಾಯಾಧೀಶರು ಕರೆದಿರುವುದು ಅಕ್ಷಮ್ಯವಾಗಿದೆ. ನ್ಯಾಯ ನೀಡುವ ಓರ್ವ ನ್ಯಾಯಾಧೀಶರ ಮನೋಸ್ಥಿತಿಯನ್ನು ಇದು ಬಹಿರಂಗಪಡಿಸಿದೆ.ನ್ಯಾಯಾಧೀಶರಲ್ಲಿಯೇ ಕೋಮುದ್ವೇಷ ಇರುವುದು ಆತಂಕಕಾರಿಯಾಗಿದೆ ಎಂದು ‘ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ’ದ ರಾಜ್ಯಾಧ್ಯಕ್ಷ, ವಕೀಲ ತಾಹೇರ್ ಹುಸೇನ್ ಹೇಳಿದ್ದಾರೆ.
ನ್ಯಾಯಾಧೀಶರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಅವರು, “ಇತ್ತೀಚಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಇಂತಹ ಅಘಾತಕಾರಿ, ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದರಿಂದ ಬಹುತ್ವ ಭಾರತದ ಬುನಾದಿಗೆ ಹಾನಿಯಾಗುತ್ತಿದೆ” ಎಂದಿದ್ದಾರೆ.
“ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮೂವತ್ತು ನಿವೃತ್ತ ನ್ಯಾಯಾಧೀಶರು ಭಾಗವಹಿಸಿರುವುದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮನೆಗೆ ಪ್ರಧಾನಿ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗುವುದು. ಹೈಕೋರ್ಟ್ ನ್ಯಾಯಾಧೀಶರೋರ್ವರು ಮನುಸ್ಮೃತಿಯನ್ನು ಹೊಗಳುವುದು ಹಗೂ ಈಗ ಮುಸ್ಲಿಮರು ವಾಸಿಸುವ ಪ್ರದೇಶವನ್ನು ಪಾಕಿಸ್ತಾನವೆಂದು ಕರೆಯುವುದು ಆತಂಕಕಾರಿ ಬೆಳವಣಿಗೆಗಳಾಗಿವೆ. ನ್ಯಾಯಾಧೀಶರೇ ಕೋಮುದ್ವೇಷ ಹರಡುವವರಾದರೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಒಳ್ಳೆಯ ಬೆಳವಣಿಗೆ. ನ್ಯಾಯಾಧಿಶರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.