ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಶಾಂತಿಯುತ ಸಭೆ, ಪ್ರತಿಭಟನೆಗಳನ್ನು ನಡೆಸಬಹುದು. ಊಹೆಯ ಆಧಾರದ ಮೇಲೆ ಸಭೆ, ಪ್ರತಿಭಟನೆಗಳನ್ನು ನಡೆಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪೊಲೀಸರು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿದೆ.
ಮಂಗಳವಾರ (ಮಾ.18) ಸಂಜೆ ಬೆಂಗಳೂರಿನಲ್ಲಿ ‘ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆ’ಯನ್ನು ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ನಡೆಸದಂತೆ ಶೇಷಾದ್ರಿಪುರಂ ಪೊಲೀಸರು ಸಭೆಯ ಸಂಘಟಕರಿಗೆ ನೋಟಿಸ್ ನೀಡಿದ್ದರು. ನೋಟಿಸ್ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ, “ಪೊಲೀಸರು ಮತ್ತು ಸರ್ಕಾರ ಯಾವುದೇ ಸಭೆ, ಪ್ರತಿಭಟನೆಯನ್ನು ತಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದೆ.
ಸೌಜನ್ಯ ನ್ಯಾಯಕ್ಕಾಗಿ ಮತ್ತು ಊಳಿಗಮಾನ್ಯ ದರ್ಪ ವಿರೋಧಿಸಿ ಸಾಹಿತಿಗಳು, ಚಿಂತಕರು, ಹೋರಾಟಗಾರರು ಆಯೋಜಿಸಿದ್ದ ಸಮಾಲೋಚನಾ ಸಭೆಯನ್ನು ರದ್ದುಗೊಳಿಸುವಂತೆ ಸೋಮವಾರ ರಾತ್ರಿ ಪೊಲೀಸರು ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ಕಳಿಸಿದ್ದರು. ‘ಜಸ್ಟಿಸ್ ಫಾರ್ ಸೌಜನ್ಯ’ ಹೆಸರಿನಲ್ಲಿ ಯಾರೂ ಯಾವುದೇ ಸಭೆ, ಪ್ರತಿಭಟನೆ ನಡೆಸುವಂತಿಲ್ಲ. ಸಭೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪೊಲೀಸರು ಬೆದರಿಕೆ ಹಾಕಿದ್ದರು. ಅಲ್ಲದೆ, ಸಂಘಟಕರಿಗೆ ಕರೆ ಮಾಡಿದ್ದ ಪೊಲೀಸರು, ಸಭೆ ನಡೆಸಿದರೆ, ಬಂಧಿಸಲಾಗುತ್ತದೆ ಎಂದೂ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿದೆ.
ಪೊಲೀಸರ ನೋಟಿಸ್ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ, “ಪೊಲೀಸರು ನೀಡಿದ ಕಾನೂನು ಬಾಹಿರ ವಾಟ್ಸ್‌ಆ್ಯಪ್ ನೋಟಿಸ್ ಹೋರಾಟಗಾರರ ಮೂಲಭೂತ ಹಕ್ಕುಗಳನ್ನು ಕಸಿದಿದೆ. ಪೊಲೀಸರ ಈ ಕ್ರಮ ವಿಕೃತ ಮತ್ತು ದುರುದ್ದೇಶಪೂರಿತವಾಗಿದೆ” ಎಂದು ವಾದಿಸಲಾಗಿತ್ತು.