ರಾಜ್ಯ ರಾಜಧಾನಿ ಬೆಂಗಳೂರಿನ ಜನರಿಗೆ ವಾರಾಂತ್ಯದ ತಾಣವಾದ ಜಗದ್ವಿಖ್ಯಾತ ಪ್ರವಾಸಿ ಸ್ಥಳ ನಂದಿ ಗಿರಿಧಾಮಕ್ಕೆ ಇನ್ನುಮುಂದೆ ಎಲೆಕ್ಟ್ರಿಕ್ ರೈಲಿನಲ್ಲಿ ಸಂಚರಿಸಬಹುದು. ಹೌದು, ಡಿಸೆಂಬರ್ 11ರಿಂದ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳನ್ನು ವಿಸ್ತರಿಸಲು ನೈಋತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನೈರುತ್ಯ ರೈಲ್ವೆ ಇಲಾಖೆ, “ಬೆಂಗಳೂರಿನ ನಿವಾಸಿಗಳು ನಗರದಿಂದ 60 ಕಿ.ಮೀ ದೂರದಲ್ಲಿರುವ ನಂದಿ ಹಿಲ್ಸ್‌ಗೆ ಎಲೆಕ್ಟ್ರಿಕ್ ರೈಲಿನಲ್ಲಿ ಪ್ರಯಾಣಿಸಬಹುದು” ಎಂದು ಹೇಳಿದೆ.
ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ- ಬೆಂಗಳೂರು ಕಂಟೋನ್ಮೆಂಟ್ (06531/06532), ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ (06535/06583) ಹಾಗೂ ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ (06593/06594) ರೈಲುಗಳು ಸಂಚರಿಸಲಿವೆ.
ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ವಿದ್ಯುದ್ದೀಕರಣವು ಮಾರ್ಚ್ 2022ರಲ್ಲಿ ಪೂರ್ಣಗೊಂಡಿತು. ಆದರೆ, ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಪರಿಚಯವನ್ನು ನೈರುತ್ಯ ರೈಲ್ವೆ ಇಲಾಖೆ ಹಲವು ಕಾರಣಗಳಿಂದ ವಿಳಂಬಗೊಳಿಸಿದೆ.
ಪ್ರಸ್ತುತ, (06387/06388) ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ಮತ್ತು (16549/16550) ಕೆಎಸ್‌ಆರ್ ಬೆಂಗಳೂರು – ಕೋಲಾರ- ಕೆಎಸ್‌ಆರ್ ಬೆಂಗಳೂರು ಡೆಮು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಹೊಂದಿವೆ.
“ನಂದಿ ನಿಲ್ದಾಣದಿಂದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿ.ಮೀ ದೂರವಿದೆ. ನಂದಿ ಬೆಟ್ಟದ ತುದಿಯನ್ನು ತಲುಪಲು ಹೆಚ್ಚುವರಿ 15-18 ಕಿಮೀ ಕ್ರಮಿಸಬೇಕಾಗಿದೆ. ನಂದಿ ಹಾಲ್ಟ್ ರೈಲು ನಿಲ್ದಾಣದಿಂದ ಈ ಸ್ಥಳಗಳಿಗೆ ಬಹು-ಮಾದರಿ ಸಾರ್ವಜನಿಕ ಅಥವಾ ಸಾಮಾನ್ಯ ಸಾರಿಗೆ (ಬಸ್‌ಗಳು, ಆಟೋಗಳು, ಇತ್ಯಾದಿ) ಕಡಿಮೆ ಇವೆ. ಪ್ರವಾಸಿಗರಿಗೆ ಇದರಿಂದ ಹೆಚ್ಚು ಅನುಕೂಲವಾಗುವುದಿಲ್ಲ. ನೈಋತ್ಯ ರೈಲ್ವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಗಮನಹರಿಸಬೇಕು” ಎಂದು ನಂದಿ ಬೆಟ್ಟದಲ್ಲಿ ನೆಲೆಸಿರುವ ಇತಿಹಾಸ ಪ್ರೇಮಿ ಸಿದ್ಧಾರ್ಥ್ ರಾಜಾ ಎಂಬುವವರು ಮನಿಕಂಟ್ರೋಲ್‌ಗೆ ಹೇಳಿರುವುದಾಗಿ ವರದಿಯಾಗಿದೆ.
“ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ನೋಡಬೇಕು ಎನ್ನುವವರು 6:37ಕ್ಕೆ ನಂದಿ ಬೆಟ್ಟ ತಲುಪುತ್ತಾರೆ. ಆದರೆ, ಅಂತಹ ಪ್ರವಾಸಿಗರಿಗೆ ಈ ರೈಲುಗಳ ಸಂಚಾರ ಉಪಯೋಗವಿಲ್ಲ” ಎಂದು ಕಾಲೇಜು ವಿದ್ಯಾರ್ಥಿ ಮಂಜು ನಾಯರ್ ಹೇಳಿರುವುದು ವರದಿ ಆಗಿದೆ.
“ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ನೋಡಲು ವಿದ್ಯಾರ್ಥಿಗಳು, ಸೇರಿದಂತೆ ಹಲವರು ಬರುತ್ತಾರೆ. ಚಿಕ್ಕಬಳ್ಳಾಪುರಕ್ಕೆ ಸೇವೆಗಳನ್ನು ವಿಸ್ತರಿಸುವುದರಿಂದ ಪ್ರಯೋಜನವಾಗುತ್ತದೆ. ಆದರೆ, ಈ ರೈಲುಗಳಿಗೆ ಬೆಟ್ಟಹಲಸೂರು, ದೊಡ್ಡಜಾಲ, ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲುಗಳು ಬೆಟ್ಟಹಲಸೂರು ಸೇರಿದಂತೆ ಮಧ್ಯಂತರ ನಿಲ್ದಾಣಗಳಲ್ಲಿ ನಿಲ್ಲಬೇಕು. ಆದರೆ, ನೈರುತ್ಯ ರೈಲ್ವೆ ಇಲಾಖೆ ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಿಲ್ಲ. ಏಕೆಂದರೆ ಯಾವುದೇ ಏಜೆಂಟರು ತಿಂಗಳಿಗೆ ಕೇವಲ ₹1,500 ನಿಲುಗಡೆ ನಿಲ್ದಾಣಗಳನ್ನು ನಿರ್ವಹಿಸಲು ಸಿದ್ಧರಿಲ್ಲ” ಎಂದು ರೈಲು ಕಾರ್ಯಕರ್ತ ರಾಜ್‌ಕುಮಾರ್ ದುಗಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜನವರಿ 5 ರಿಂದ 9 ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರೆಬೇಳೆ ಮೇಳ
ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ (ಬೆಂಗಳೂರು ವಿಭಾಗ) ಕುಸುಮಾ ಹರಿಪ್ರಸಾದ್ ಮಾತನಾಡಿ, “ನೈರುತ್ಯ ರೈಲ್ವೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಚ್) ಜತೆಗೆ ಈಗಾಗಲೇ ಈ ಮಾರ್ಗದಲ್ಲಿ ಮೂರು ಪಾರಂಪರಿಕ ಕೇಂದ್ರಗಳನ್ನು ಪುನಃಸ್ಥಾಪಿಸಲಾಗಿದೆ. ದೊಡ್ಡಜಾಲ, ದೇವನಹಳ್ಳಿ ಹಾಗೂ ಆವತಿಹಳ್ಳಿಗೆ ನಿಲುಗಡೆಯ ಪುನಃಸ್ಥಾಪನೆ ಕಾರ್ಯವು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದು ಪೂರ್ಣಗೊಂಡ ನಂತರ, ರೈಲು ಸಂಚಾರ ಆರಂಭಿಸುತ್ತೇವೆ. ಈ ವೇಳೆ, ಪ್ರವಾಸಿಗರು ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ವೀಕ್ಷಿಸಬಹುದು” ಎಂದು ಹೇಳಿದರು.