ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಡ್ರೋನ್ ಕ್ಯಾಮೆರಾ ಬಳಕೆ ಮಾಡಿ ಚಿತ್ರೀಕರಣ ಮಾಡಿದ್ದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯ ಅಧಿಕಾರಿ(ಆರ್‌ಎಫ್‌ಒ) ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಡ್ರೋನ್ ಕ್ಯಾಮರಾ ಬಳಕೆ ಮಾಡಿ ಚಿತ್ರೀಕರಣ ಮಾಡಿದ್ದಾರೆ. ಈ ಬಗ್ಗೆ ಕಾರಣ ಕೇಳಿ ಅರಣ್ಯಾಧಿಕಾರಿಗಳು ಭಟ್ ಅವರಿಗೆ ಜನವರಿ 10ರಂದು ನೋಟೀಸ್ ನೀಡಿದ್ದಾರೆ.
“ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ದೇವಸ್ಥಾನದ ಬಳಿ ಅನುಮತಿ ಇಲ್ಲದೆ ಡೋನ್ ಮೂಲಕ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದೀರಿ. ಇದು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಸೆಕ್ಷನ್ 28,1(ಬಿ) ರ ಉಲ್ಲಂಘನೆಯಾಗಿದೆ. ಅಲ್ಲದೆ, ನೀವು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ನಾನಾ ಚಿತ್ರಗಳನ್ನು ಹಾಗೂ ಪೋಸ್ಟ್ಗಳನ್ನು ಮಾಡಿ ಸಂಜೆ 6 ಗಂಟೆ ಎಂದು ನಮೂದಿಸಿದ್ದೀರಿ ಇದು ವ್ಯಾಪಕ ಚರ್ಚೆಯಾಗುತ್ತಿದ್ದು, ದೇವಾಲಯಕ್ಕೆ ತೆರಳಲು ತಪ್ಪಲಿನಿಂದ ಸಂಜೆ 4 ಗಂಟೆಯ ವರೆಗೆ ಅವಕಾಶವಿದೆ. ಆದ್ದರಿಂದ ಈ ಎರಡು ವಿಷಯಗಳ ಸ್ಪಷ್ಟಿಕರಣವನ್ನು ಈ ಪತ್ರ ತಲುಪಿದ ಕೂಡಲೇ ತಾವು ಖುದ್ದಾಗಿ ಹಾಜರಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬಂಡೀಪುರ ಉಪ ವಿಭಾಗ, ಬಂಡೀಪುರ ರವರ ಕಛೇರಿಗೆ ಹಾಜರಾಗಿ ಸದರಿ ಕಾರಣ ಕೇಳಿ ನೋಟಿಸ್ಗೆ ಉತ್ತರಿಸಬೇಕು” ಎಂದು ನೋಟಿಸ್ನಲ್ಲಿ ಆರ್‌ಎಫ್‌ಒ ಮಂಜುನಾಥ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆಟವಾಡುತ್ತಿದ್ದ ಬಾಲಕ ನೀರಿನ ಸಂಪ್‌ಗೆ ಬಿದ್ದು ಸಾವು
ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಡ್ರೋನ್ ಕ್ಯಾಮರಾದಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ವರದಿ ನೀಡುವಂತೆ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿಗೆ ಬಂಡೀಪುರ ಸಹಾಯಕ ಅರಣ್ಯ ಸಂರಣ್ಯಾಧಿಕಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್‌ರಿಗೆ ನೋಟಿಸ್ ಜಾರಿಯಾಗಿದೆ.