ರಾಜ್ಯದಲ್ಲಿ ದಸರಾ ಹಬ್ಬ ಸಂಭ್ರಮ ಗರಿಗೆದರಿದೆ. ಅ.23 ರಂದು ಆಯುಧ ಪೂಜೆ ಇರುವ ಹಿನ್ನೆಲೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳ ಖರೀದಿಗಾಗಿ ಮಾರುಕಟ್ಟೆಗಳಲ್ಲಿ ಸಾವಿರಾರು ಜನ ಮುಗಿಬಿದ್ದಿದ್ದಾರೆ.
ಕೆ.ಆರ್.ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಮಾರುಕಟ್ಟೆ ಪ್ರದೇಶಗಳು, ಎಂ.ಜಿ ರಸ್ತೆಯ ಮಾರುಕಟ್ಟೆ ಸೇರಿದಂತೆ ನಗರದಲ್ಲಿರುವ ಬಹುತೇಕ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿವೆ. ರಸ್ತೆ ಬದಿಯಲ್ಲೂ ಆಯುಧ ಪೂಜೆ ಸಾಮಗ್ರಿಗಳ ಮಾರಾಟ ಜೋರಾಗಿದೆ. ಹಬ್ಬದ ಹಿನ್ನೆಲೆ ಹೂ, ಹಣ್ಣಿನ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ.
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧವಾಗಿದ್ದು, ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನರು ತುಂಬಿದ್ದಾರೆ. ಕೆ.ಆರ್.ಮಾರುಕಟ್ಟೆ ಸುತ್ತ-ಮುತ್ತ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.
ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆಯಾಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರಗಳು ಹೆಚ್ಚಾಗಿದೆ. ಹಣ್ಣುಗಳ ಬೆಲೆ 100ರ ಗಡಿ ದಾಟಿದೆ.
ತರಕಾರಿ ₹20 ರಿಂದ ₹30ರೂ ಏರಿಕೆಯಾಗಿದೆ. ಹೂವಿನ ಬೆಲೆಯಲ್ಲಿ ₹50 ರಿಂದ ₹60 ಏರಿಕೆಯಾಗಿದೆ. ಬೆಲೆ ಏರಿಕೆಯ ಮಧ್ಯೆಯೂ ಹಬ್ಬದ ಹಿನ್ನೆಲೆ, ಜನ ಖರೀದಿಯಲ್ಲಿ ತೊಡಗಿದ್ದಾರೆ.
ದಸರಾ ಹಬ್ಬದಲ್ಲಿ ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆ ದಿನ ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ.
ಪ್ರತಿ ಕೆ.ಜಿ ಕನಕಾಂಬರ ₹2,400, ಮಲ್ಲಿಗೆ ₹1,600, ಗುಲಾಬಿ ₹300, ಸೇವಂತಿಗೆ ₹300, ಚಂಡೂ ಹೂ ₹100, ಕಣಗಿಲೆ ₹600, ದುಂಡು ಮಲ್ಲಿಗೆ ₹1209, ಕಾಕಡಾ ₹500, ಆಮ್ರ ಮಲ್ಲಿಗೆ ₹800, ಬಿಳಿ ಸೇವಂತಿಗೆ ₹300, ಹಳದಿ ಸೇವಂತಿಗೆ ₹350, ಕೆಂಪು ಸೇವಂತಿ ₹350, ಪರ್ಪಲ್ ಸೇವಂತಿಗೆ ₹350 ಹೂವಿಗಳು ಮಾರಾಟವಾಗುತ್ತಿದೆ.
ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳ ಕೆ.ಜಿಗೆ ₹50ರಂತೆ ಮತ್ತು ಗಾತ್ರದ ಆಧಾರದ ಮೇಲೆ ಒಂದಕ್ಕೆ ₹100–₹200ರಂತೆ ಮಾರಾಟವಾಗುತ್ತಿದೆ.
ಪ್ರತಿ ಕೆ.ಜಿ ಬಟಾಣಿ ₹400, ಶುಂಠಿ ₹200, ಬೀನ್ಸ್ ₹80, ಕ್ಯಾರೆಟ್ ₹60, ಹಿರೇಕಾಯಿ ₹60, ಕ್ಯಾಪ್ಸಿಕಮ್ ಮತ್ತು ಬಿಟ್‌ರೂಟ್ ₹40, ಮೆಣಸಿನಕಾಯಿ ₹80, ಬದನೆಕಾಯಿ ₹50, ಬೆಂಡೆಕಾಯಿ ₹40, ದಪ್ಪ ಮೆಣಸಿನಕಾಯಿ ₹40, ಮೂಲಂಗಿ ₹40, ಟೊಮಾಟೋ ₹25, ನವೀಲು ಕೋಸು ₹80, ಈರುಳ್ಳಿ ₹50, ಆಲೂಗೆಡ್ಡೆ ₹30, ಬೆಳ್ಳುಳ್ಳಿ ₹240, ಹಾಗಲಕಾಯಿ ₹120 ಗೆ ಮಾರಟವಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಎರಡು ದಿನ ರಾಜ್ಯದ ಕೆಲವೆಡೆ ಸಾಧಾರಣ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಬಿಎಂಟಿಸಿ ಬಸ್ ಬಳಕೆಗೆ ಕೆಎಸ್ಆರ್‌ಟಿಸಿ ನಿರ್ಧಾರ
ದಸರಾ ಹಬ್ಬದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬಸ್‌ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ಈ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಬಳಕೆ ಮಾಡಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.
ದಸರಾ ಹಬ್ಬದ ಪ್ರಯುಕ್ತ ಅ.21 ರಿಂದ ಅ.23ರವರೆಗೆ ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಸಾರಿಗೆಗಳು ಕಾರ್ಯಾಚರಣೆ ನಡೆಸಲಿವೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಅ.23 ಹಾಗೂ ಅ24 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಹೊರ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ, ಅ.21, 22 ಹಾಗೂ 23ರಂದು ಕೆಎಸ್‌ಆರ್‌ಟಿಸಿ ಕಾರ್ಯಾಚರಣೆಯ ವ್ಯಾಪ್ತಿಯ ಸ್ಥಳಗಳಾದ ದಾವಣಗೆರೆ, ಭದ್ರಾವತಿ, ಶಿವಮೊಗ್ಗ, ಚಿತ್ರದುರ್ಗ, ಹೊಸದುರ್ಗ, ಶ್ರೀ ರಾಂಪುರ, ಹಿರಿಯೂರು, ಬಳ್ಳಾರಿ, ಹಾಸನ, ಅರಸೀಕೆರೆ, ಕುಣಿಗಲ್, ಯಡಿಯೂರು, ಹಿರಿಸವೆ, ಚನ್ನಪಟ್ಟಣ, ಮೈಸೂರು, ಕೊಳ್ಳೆಗಾಲ, ತುಮಕೂರು, ಗುಬ್ಬಿ, ನಿಟ್ಟೂರು, ಕೆ.ಬಿ.ಕ್ರಾಸ್, ಧರ್ಮಸ್ಥಳ, ಹಾಸನ ಮತ್ತು ಮೈಸೂರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ ಎಂದು ಹೇಳಿದೆ.