ಹಳೆಯ ವಾಹನಗಳಿಗೆ ‘ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ 2023ರ ನವೆಂಬರ್ 17 ಕೊನೆಯ ದಿನವಾಗಿತ್ತು. ಇದೀಗ, ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ವಾಹನ ಮಾಲೀಕರು ಯಾವುದೇ ತರಾತುರಿಯಿಲ್ಲದೇ ಎಚ್‌ಎಸ್‌ಆರ್‌ಪಿ ಫಲಕವನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ.
2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.
ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ 2023ರ ನವೆಂಬರ್ 17 ಕೊನೆಯ ದಿನವಾಗಿದೆ ಎಂದು ವಾಹನ ಮಾಲೀಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಇದೀಗ, ಫಲಕ ಅಳವಡಿಸಿಕೊಳ್ಳಲು ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಮತ್ತೊಂದು ಅವಕಾಶ ನೀಡಿದೆ. 2023ರ ನವೆಂಬರ್ 17 ಬದಲಾಗಿ 2024ರ ಫೆಬ್ರವರಿ 17ಕ್ಕೆ ಡೆಡ್ ಲೈನ್ ನಿಗದಿಪಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ಹೆಚ್‌ಎಸ್‌ಆರ್‌ಪಿ ಅಳವಡಿಕೆ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ. ಕೆಲವರು ಕೋರ್ಟ್‌ಗೆ ತೆರಳಿದ ಕಾರಣ ವಿಳಂಬವಾಗಿದೆ. ಈ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ವಾಹನ ಮಾಲೀಕರ ಹಿತದೃಷ್ಟಿಯಿಂದ ಗಡುವನ್ನು ಮೂರು ತಿಂಗಳ ಕಾಲ ದಂಡ ಶುಲ್ಕವಿಲ್ಲದೆ ವಾಹನ ಮಾಲೀಕರು ಫಲಕ ಅಳವಡಿಸಿಕೊಳ್ಳಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಲಸದಿಂದ ತೆಗೆದಿದ್ದ ಕಂಪನಿ; ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ಯುವತಿ
ಏನಿದು ಹೆಚ್‌ಎಸ್‌ಆರ್‌ಪಿ ಫಲಕ?
ಹೆಚ್‌ಎಸ್‌ಆರ್‌ಪಿ ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ.