ಇತ್ತೀಚೆಗಷ್ಟೇ ಕನ್ನಡದ ‘ಬಿಗ್‌ಬಾಸ್ ರಿಯಾಲಿಟಿ ಶೋ’ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದ ಪ್ರಕರಣದ ಬಳಿಕ, ರಾಜ್ಯಾದ್ಯಂತ ಇದು ವಿವಾದವಾಗಿ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ವರ್ತೂರು ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾಗಿ, ಜೈಲು ಶಿಕ್ಷೆ ಅನುಭವಿಸಿ ಮತ್ತೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.
ಇದು ಇನ್ನೂ ಕೂಡ ಚರ್ಚೆಯಲ್ಲಿರುವಾಗಲೇ ಇನ್ನೋರ್ವ ಸ್ಪರ್ಧಾಳುವಾಗಿರುವ ತನಿಷಾ ಕುಪ್ಪಂಡ ವಿರುದ್ಧ ಭೋವಿ ಜನಾಂಗಕ್ಕೆ ಅವಹೇಳನ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಡ್ರೋನ್ ಪ್ರತಾಪ್ ಹಾಗೂ ತನಿಷಾ ಕುಪ್ಪಂಡ
ತನಿಷಾ ಅವರು, ಇನ್ನೋರ್ವ ಸ್ಪರ್ಧಾಳುವಾಗಿರುವ ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಭೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ)ಯ ಅನ್ವಯ ತನಿಷಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ಭೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ, ತನಿಷಾ ಕುಪ್ಪಂಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಬಿಗ್‌ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.