ಬೆಂಗಳೂರಿನ ಪಾರ್ಕುಗಳು ಮತ್ತು ಕೆರೆಗಳು ಇಲ್ಲವೇ ರಸ್ತೆ ಬದಿ ಬಳಿ ಕಾರಿನಲ್ಲಿ ಕುಳಿತ ಜೋಡಿಗಳನ್ನು ಬೆದರಿಸಿ ಅವರಿಂದ ಹಣ, ಚಿನ್ನ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸನನ್ನು ಬಂಧಿಸಲಾಗಿದೆ.
ನಕಲಿ ಪೊಲೀಸನ ಹಾವಳಿ ಬಗ್ಗೆ ಹಲವಾರು ದೂರುಗಳು ಕೇಳಿ ಬಂದ ನಂತರ ಕಾರ್ಯಾಚರಣೆಗಿಳಿದ ಜಯನಗರ ಪೊಲೀಸರು ಆಸೀಫ್ ಖಾನ್ ಅಲಿಯಾಸ್ ಪಿಸ್ತೋ ಎಂಬುವನನ್ನು ದಸ್ತಗಿರಿ ಮಾಡಿದ್ದಾರೆ. ಗಂಗಾನಗರದ ನಿವಾಸಿಯಾದ ಖಾನ್ 10ನೆಯ ತರಗತಿಯಲ್ಲಿ ನಪಾಸಾಗಿ ಅರೆಕಾಲಿಕ ಆಟೋ ಚಾಲಕನಾಗಿದ್ದ. ಕಾರಿನಲ್ಲಿ ಕುಳಿತಿರುತ್ತಿದ್ದ ಜೋಡಿಗಳನ್ನು ‘ಸಾರ್ವಜನಿಕ ಅಸಭ್ಯತೆ’ಯ ಹೆಸರಿನಲ್ಲಿ ಬೆದರಿಸಿ ಹಣ ಕೀಳುತ್ತಿದ್ದ. ಪೊಲೀಸರ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದ್ದ ಈತ ಪೊಲೀಸರ ಪಾಲಿಗೆ ವಿಶೇಷ ತಲೆನೋವಾಗಿದ್ದ.
ತನ್ನನ್ನು ಪೊಲೀಸನೆಂದು ಬಣ್ಣಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆಯ ಕೇಸು ಹಾಕುವುದಾಗಿ ಜೋಡಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆಯುತ್ತಿದ್ದ. ಜಯನಗರದ ಆರ್,ವಿ,ಮೆಟ್ರೋ ನಿಲ್ದಾಣದ ಬಳಿ ತಮ್ಮ ಸಹೋದ್ಯೋಗಿಯ ಜೊತೆ ಕಾರಿನಲ್ಲಿ ಕುಳಿತಿದ್ದ ಖಾಸಗಿ ಕಂಪನಿಯೊಂದರ ಉದ್ಯೋಗಿಯನ್ನು ಇದೇ ತಿಂಗಳ ಐದರಂದು ಬೆದರಿಸಿದ್ದ. ಆತನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿನ ಚಿನ್ನದ ಉಂಗುರದ ಜೊತೆಗೆ ಎಟಿಎಂ ನಿಂದ 10 ಸಾವಿರ ರುಪಾಯಿಗಳನ್ನು ತೆಗೆಯಿಸಿ ಕಬಳಿಸಿದ್ದ. ಇಂತಹ ಇನ್ನೂ ಹಲವು ದೂರುಗಳು ಈತನ ಮೇಲಿದ್ದವು.
ಈ ನಕಲಿ ಪೊಲೀಸನಿಂದ 80 ಗ್ರ್ಯಾಮ್ ಗಳಷ್ಟು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ. ಈತನ ಸುಲಿಗೆಗೆ ಈಡಾದವರು ಜಯನಗರ ಪೊಲೀಸರನ್ನು ಸಂಪರ್ಕಿಸಬಹುದು ಇಲ್ಲವೇ ಸಮೀಪದ ಠಾಣೆಗಳಲ್ಲಿ ದೂರು ನೀಡಬಹುದು ಎಂದು ಪೊಲೀಸರು ಸೂಚಿಸಿದ್ದಾರೆ.