ವರುಣ ಮತ್ತು ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ನಾಯಕರುಗಳ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ ಸೋಮಣ್ಣ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪರನ್ನು ಶನಿವಾರ ಭೇಟಿಯಾಗಿದ್ದಾರೆ. ಈ ಭೇಟಿಯೀಗ ಚರ್ಚೆಗೆ ಗ್ರಾಸವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಸಕ್ರಿಯ ರಾಜಕೀಯ ಚಟುವಟಿಕೆಯಿಂದ ವಿ ಸೋಮಣ್ಣ ದೂರು ಉಳಿದಿದ್ದರು. ಆದರೆ ಈಗ ದಿಡೀರ್ ಆಗಿ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿರುವುದರಿಂದ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.
ಈ ವರ್ಷದಲ್ಲೇ ಲೋಕಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಸೋಮಣ್ಣ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಮತ್ತು ಸೋಮಣ್ಣ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್‌ವೈ ನಿವಾಸಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತುಮಕೂರು ಸಂಸದ ಜಿ ಎಸ್ ಬಸವರಾಜ, ಮಾಜಿ ಶಾಸಕ ಎಂ ಡಿ ಲಕ್ಷ್ಮೀ ನಾರಾಯಣ ಮತ್ತು ತಮ್ಮ ಪುತ್ರ ಅರುಣ್ಣ ಸೋಮಣ್ಣ ಜೊತೆ ವಿ ಸೋಮಣ್ಣ ತೆರಳಿದ್ದಾರೆ. ಎಲ್ಲ ಭಿನ್ನಾಭಿಪ್ರಾಯವನ್ನು ಬಿಟ್ಟು ರಾಜಕೀಯ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ವಿಧಾನಸಭೆ ಚುನಾವಣೆ ವೇಳೆಯಲ್ಲಿ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ವಿರುದ್ಧ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಕಣ್ಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ವಿಜಯೇಂದ್ರರನ್ನು ತಮ್ಮ ಸ್ವಕ್ಷೇತ್ರವಾದ ಶಿಕಾರಿಪುರದಿಂದ ಕಣ್ಣಕ್ಕೆ ಇಳಿಸಲು ಬಿಎಸ್ ಯಡಿಯೂರಪ್ಪ ಬಯಸಿದ್ದರು. ಈ ನಿಟ್ಟಿನಲ್ಲಿ ಹೈಕಮಾಂಡ್ ಮನವೊಲಿಸುವಲ್ಲಿಯೂ ಸಫಲರಾಗಿದ್ದರು. ಈ ಕಾರಣದಿಂದ ವಿ ಸೋಮಣ್ಣರನ್ನು ಸಿದ್ಧರಾಮಯ್ಯರ ವಿರುದ್ಧ ನಿಲ್ಲಿಸಲ್ಲಾಗಿತ್ತು. ಆದರೆ ಸೋಮಣ್ಣ ಸೋತು ತನ್ನ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದರು.
ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿ ಸೋಮಣ್ಣ, “ನನಗೆ ಪಕ್ಷದ ನಾಯಕರ ಜೊತೆ ಮುನಿಸಿಲ್ಲ. ಇದೆಲ್ಲ ಮನೆಯೊಳಗೆ ನಡೆಯುವ ಜಗಳ. ಏನಾದರೂ ದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರ ಪಡೆಯಬೇಕು. ರಾಜ್ಯದ ಎಲ್ಲ 28 ಸ್ಥಾನದಲ್ಲಿಯೂ ನಾವೇ ಗೆಲ್ಲುವುದು ನಮ್ಮ ಗುರಿ. ತುಮಕೂರು ಕ್ಷೇತ್ರವನ್ನು ಬಿಜೆಪಿಗೆ ಬಿಡುವ ಮಾತುಕತೆ ನಡೆದಿಲ್ಲ. ಏನಾದರೂ ನಾನು ಪಕ್ಷದ ವರಿಷ್ಠರ ತೀರ್ಮಾನ ಒಪ್ಪಿ ಪಾಲಿಸುತ್ತೇನೆ,” ಎಂದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.