ಉದ್ಯಾನನಗರಿ ಬೆಂಗಳೂರು ತನ್ನ ಸಾಮರ್ಥ್ಯವನ್ನು ಮೀರಿ ಬೆಳೆಯುತ್ತಿದೆ. ನಗರ ಬೆಳೆದಂತೆ ಜನಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದೆ. ಇದೀಗ, ಸುಮಾರು 1.5 ಕೋಟಿ ಜನ ರಾಜಧಾನಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ಕಾಡು, ನಿರ್ಜನ ಪ್ರದೇಶ ಹಾಗೂ ಸ್ಮಶಾನಗಳ ಹತ್ತಿರ ಸುಳಿಯಲು ಹೆದರುತ್ತಿದ್ದ ಜನ ಇದೀಗ ಸ್ಮಶಾನವನ್ನೂ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇದೇ ರೀತಿ, ರಾಜಾಜಿನಗರದಲ್ಲಿರುವ ಹರಿಶ್ಚಂದ್ರ ಘಾಟ್ ಸ್ಮಶಾನದ ಸುತ್ತಲೂ ಜನವಸತಿ ನಿರ್ಮಾಣವಾಗಿದೆ.
ಮಕ್ಕಳು, ವೃದ್ಧರನ್ನು ಒಳಗೊಂಡ ಸಾವಿರಾರು ಕುಟುಂಬಗಳು ಸ್ಮಶಾನದ ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿವೆ. ಅವರೆಲ್ಲರೂ ಸತ್ತು ಸ್ಮಶಾನಕ್ಕೆ ಹೋಗುವ ಮುನ್ನವೇ ಸ್ಮಶಾನದಲ್ಲಿ ಸುಡುವ ಮೃತದೇಹಗಳ ದುರ್ಗಂಧದ ಹೊಗೆಯಿಂದ ನಿತ್ಯ ಸತ್ತು ಬದುಕುತ್ತ ಯಾತನೆ ಅನುಭವಿಸುತ್ತಿದ್ದಾರೆ.
ರಾಜಾಜಿನಗರದ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರ ಘಾಟ್ ಈ ಹಿಂದೆ 24 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿತ್ತು. ಇದೀಗ, ನಗರೀಕರಣವಾಗಿ ಜನವಸತಿ ಬೆಳೆದ ನಂತರ ಪ್ರದೇಶವೆಲ್ಲ ಒತ್ತುವರಿಯಾಗಿ ನಾಲ್ಕು ಎಕರೆ ಮಾತ್ರ ಉಳಿದಿದೆ. ಕಾಂಪೌಂಡ್ ಕಟ್ಟಿ ಈ ಭಾಗವನ್ನು ಉಳಿಸಲಾಗಿದೆ. ಸ್ಮಶಾನದ ಸುತ್ತ ವಾಸಿಸುವ ಈ ಕುಟುಂಬಗಳಿಗೆ ಇದೀಗ ದೆವ್ವ, ಭೂತವೆಂಬ ಭಯಕ್ಕಿಂತ ಆರೋಗ್ಯದ ಸಮಸ್ಯೆಯ ಚಿಂತೆಯೇ ಹೆಚ್ಚಾಗಿದೆ.

ಸ್ಮಶಾನಕ್ಕೆ ಪ್ರತಿದಿನ 5 ರಿಂದ 6 ಮೃತದೇಹಗಳು ಬರುತ್ತವೆ. ಸ್ಮಶಾನದಲ್ಲಿ ಮೃತದೇಹಗಳನ್ನು ಹೂಳಲು ಜಾಗವಿಲ್ಲದ ಕಾರಣ ಎಲ್ಲ ಮೃತದೇಹಗಳನ್ನು ವಿದ್ಯುತ್ ಚಿತಾಗಾರದಲ್ಲಿ ಸುಡಲಾಗುತ್ತದೆ. ದೇಹಗಳನ್ನು ಸುಡುವಾಗ ಚಿತಾಗಾರದಲ್ಲಿರುವ ಚಿಮಣಿಯಿಂದ ಹೊಗೆ ಹೊರಹೋಗುತ್ತದೆ. ಈ ಚಿಮಣಿಯ ಉದ್ದ ಕಡಿಮೆ ಇದ್ದು, ಈ ದುರ್ಗಂಧದ ಹೊಗೆಯಿಂದ ಸುತ್ತಮುತ್ತ ವಾಸಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಬೆಂಗಳೂರಿನ ಪ್ರಕಾಶನಗರ, ರಾಜಾಜಿನಗರ, ಮಲ್ಲೇಶ್ವರ, ಸೆಂಟ್ರಲ್, ಭಾಷ್ಯಂ ವೃತ್ತ ಸೇರಿದಂತೆ ಇನ್ನಿತರ ಭಾಗಗಳ ಜನರು ತಮ್ಮ ಸಂಬಂಧಿಗಳು ಯಾರಾದರೂ ಮೃತಪಟ್ಟರೆ, ಅವರ ಅಂತ್ಯಸಂಸ್ಕಾರಕ್ಕೆ ಈ ವಿದ್ಯುತ್ ಚಿತಾಗಾರವನ್ನೇ ಅವಲಂಬಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮದ ಪ್ರಕಾರ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6ರವರೆಗೆ ಮಾತ್ರ ಅವಕಾಶವಿದೆ. ಆದರೆ, ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಸಾಯಂಕಾಲದ ನಂತರವೂ ಮೃತ ದೇಹಗಳನ್ನು ಸುಡಲಾಗುತ್ತದೆ. ಇದರಿಂದ ಸುತ್ತಮುತ್ತ ವಾಸಿಸುವ ಜನರು ವಾಸನೆಯಿಂದ ಹೈರಾಣಾಗಿದ್ದಾರೆ.
ಮೃತದೇಹಗಳ ಸುಟ್ಟ ಹೊಗೆ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಜನರಲ್ ಫಿಸಿಶಿಯನ್ ಡಾ. ಸುನೀಲ್ ಕುಮಾರ್ ಹೆಬ್ಬಿ, “ನಿತ್ಯ ಮೃತದೇಹಗಳ ಸುಟ್ಟ ವಾಸನೆ ಸೇವಿಸುವುದರಿಂದ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ. ಕೆಮ್ಮು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಟಿಬಿ ಬರುವ ಸಾಧ್ಯತೆ ದಟ್ಟವಾಗಿರುತ್ತದೆ. ಮೃತದೇಹಗಳ ಸುಟ್ಟ ವಾಸನೆ ನಿತ್ಯ ಸೇವನೆ ಮಾಡುವುದರಿಂದ ಒಂದೇ ಕಾಯಿಲೆ ಬರುತ್ತದೆ ಎಂದು ಹೇಳಲಾಗದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಉಸಿರಾಟದ ಅಲರ್ಜಿ ಇರುವವರಿಗೆ ಹೆಚ್ಚು ಸಮಸ್ಯೆ ಉಂಟಾಗುತ್ತದೆ” ಎಂದು ತಿಳಿಸಿದರು.
“ಮೃತದೇಹಗಳನ್ನು ಸುಡುವ ಸ್ಥಳದಿಂದ ಜನರು ವಾಸಿಸುವ ಸ್ಥಳ ಎಷ್ಟು ಅಂತರದಲ್ಲಿದೆ ಎಂಬುವುದು ಕಾಯಿಲೆಗಳ ಬರುವಿಕೆಗೆ ಕಾರಣವಾಗಿದೆ. ಮನೆಗಳು ಸ್ಮಶಾನದ ಹತ್ತಿರದಲ್ಲಿದ್ದರೆ, ನಿತ್ಯ ಜನರು ಈ ದುರ್ಗಂಧದ ವಾಸನೆ ಸೇವನೆ ಮಾಡುತ್ತಿದ್ದರೆ, ಶ್ವಾಸಕೋಶಕ್ಕೆ ತೊಂದರೆ ಉಂಟಾಗುತ್ತದೆ. ಜತೆಗೆ ಬ್ರಾಂಕೈಟಿಸ್ ಬರುವ ಸಾಧ್ಯತೆ ಇದೆ. ವೃದ್ಧರು ಮತ್ತು ಮಕ್ಕಳು ನಿತ್ಯ ಈ ವಾಸನೆ ಸೇವನೆ ಮಾಡುವುದರಿಂದ ಅವರಿಗೆ ಹೆಚ್ಚು ತೊಂದರೆಯಾಗುತ್ತದೆ. ಅಸ್ತಮಾದಿಂದ ಬಳಲುತ್ತಿರುವವರಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ. ಹಾಗಾಗಿ, ಮನೆಯಲ್ಲೂ ಮಾಸ್ಕ್‌ಗಳನ್ನು ಬಳಕೆ ಮಾಡಬೇಕು” ಎಂದರು.
“ನಗರದಲ್ಲಿ ಜಾಗದ ಕೊರತೆಯಿಂದ ಮೃತದೇಹಗಳನ್ನು ಸುಡುವುದು ಅನಿವಾರ್ಯ. ಆದರೆ, ಜನರು ಕೂಡ ಆರೋಗ್ಯವಾಗಿ ಬದುಕಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಆದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದಕೊಳ್ಳಬೇಕು. ಜನವಸತಿ ಇರುವ ಪ್ರದೇಶಗಳಲ್ಲಿ ಈ ಬರ್ನಿಂಗ್ ಮಾಡುವುದನ್ನು ನಿಲ್ಲಿಸಿ ಊರ ಹೊರಗೆ ಮೃತದೇಹಗಳನ್ನು ಬರ್ನ್ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾದ ‘ಬೆಂಗಳೂರು ವಿಶ್ವವಿದ್ಯಾಲಯ’ಕ್ಕೇ ಇಲ್ಲ ಬೆಳಕು
ಪ್ರಕಾಶನಗರ ನಿವಾಸಿಗಳು ಏನಂತಾರೆ?
ಸ್ಮಶಾನದಿಂದ ನಿತ್ಯ ಬರುವ ದುರ್ವಾಸನೆಯ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಪ್ರಕಾಶನಗರದ ನಿವಾಸಿ ದಿನೇಶ್, “ನಿಯಮಗಳ ಪ್ರಕಾರ ಮೃತದೇಹಗಳನ್ನು ಸುಡಲು 5 ಗಂಟೆಯವರೆಗೂ ಮಾತ್ರ ಅನುಮತಿ ಇದೆ. ಮೃತದೇಹಗಳು ಸುಡಲು ಕನಿಷ್ಟ ಮುಕ್ಕಾಲು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆರು ಗಂಟೆಗೆ ಮೃತದೇಹಗಳನ್ನು ಬರ್ನಿಂಗ್ ಮಾಡುವುದು ನಿಲ್ಲಿಸಬೇಕು. ರಾತ್ರಿ ಒಂಬತ್ತು ಗಂಟೆಯಾದರೂ ಮೃತದೇಹಗಳನ್ನು ಬರ್ನಿಂಗ್ ಮಾಡುತ್ತಾರೆ. ನಿತ್ಯ ಈ ದುರ್ವಾಸನೆ ತಡೆಯಲು ಆಗುವುದಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಹ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
“ಹರಿಶ್ಚಂದ್ರ ಘಾಟ್‌ನಲ್ಲಿರುವ ಬರ್ನಿಂಗ್ ಚಿಮಣಿ ತುಂಬಾ ಕೆಳಗೆ ಇದೆ. ಚಿಮಣಿಯನ್ನು ಎತ್ತರಕ್ಕೆ ಕಟ್ಟಿದರೆ ಸಮಸ್ಯೆ ಇರುವುದಿಲ್ಲ. ಇಲ್ಲಾಂದ್ರೆ 5 ಗಂಟೆಯ ಮೇಲೆ ಯಾವುದೇ ಮೃತದೇಹದ ಬರ್ನಿಂಗ್ ಮಾಡಬಾರದು. ಯಾವ ಅಧಿಕಾರಿಗಳೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಮನುಷ್ಯರಿಗೆ ಉಸಿರಾಡಲು ಒಳ್ಳೆಯ ಗಾಳಿ ಇಲ್ಲದಿದ್ದರೆ, ಬದುಕುವುದು ಕಷ್ಟವಾಗುತ್ತದೆ. ಚಿಕ್ಕ ಮಕ್ಕಳು ಬದುಕುತ್ತಿರುವ ಪ್ರದೇಶದಲ್ಲಿ ಈ ರೀತಿಯ ಮೃತದೇಹಗಳ ಬರ್ನಿಂಗ್ ಅಪಾಯಕಾರಿ” ಎಂದು ತಿಳಿಸಿದರು.

ಪ್ರಕಾಶನಗರದ ಮತ್ತೋರ್ವ ನಿವಾಸಿ ಸತೀಶ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬರ್ನಿಂಗ್ ಚಿಮಣಿ ಎತ್ತರ ಮಾಡಿದರೂ ಕೂಡ ತುಂಬಾ ವಾಸನೆ ಬರುತ್ತದೆ. ನಿತ್ಯ ಈ ದುರ್ಗಂಧ ಸೇವಿಸುತ್ತಿರುವುದರಿಂದ ಮಾರಕ ರೋಗಗಳು ಬರಬಹುದು ಎಂಬ ಭೀತಿ ಎದುರಾಗಿದೆ. ಜನರು ಆರೋಗ್ಯ ಸಮಸ್ಯೆಗಳೊಂದಿಗೆ ಜೀವನ ದೂಡಬೇಕಾಗಿದೆ. ಚಿಮಣಿಯನ್ನು ಸ್ವಚ್ಛಗೊಳಿಸಬೇಕು. ಆದರೆ, ಸಿಬ್ಬಂದಿ ಆ ಕೆಲಸ ಮಾಡುವುದಿಲ್ಲ. ಮೃತದೇಹ ಬರ್ನಿಂಗ್ ಮಾಡಿದ ನಂತರ ಹೊಗೆ ಸುತ್ತಮುತ್ತ ಪ್ರದೇಶಗಳ ತುಂಬಾ ಹರಡುತ್ತದೆ. ಈ ಬಗ್ಗೆ ಹಿಂದೆ ಪ್ರತಿಭಟನೆ ಮಾಡಿದ್ದೆವು. ಅದಕ್ಕೆ ಚಿಮಣಿಯನ್ನು ಸ್ವಲ್ಪ ಎತ್ತರಿಸಿದ್ದರು” ಎಂದರು.
ಮತ್ತೋರ್ವ ನಿವಾಸಿ ಶಶಿಕಲಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೊರೊನಾ ಸಮಯದಲ್ಲಿ ಇಲ್ಲಿ ಜೀವಿಸುವುದೇ ಕಷ್ಟಕರವಾಗಿತ್ತು. ನಿತ್ಯ ಸುಮಾರು ಮೃತದೇಹಗಳನ್ನು ಸುಡುತ್ತಿದ್ದರು. ಈಗಲೂ ಕೂಡ ಮೃತದೇಹಗಳನ್ನು ಸುಡುವುದರಿಂದ ವಿಪರೀತ ವಾಸನೆ ಬರುತ್ತದೆ. ಆದರೆ, ಯಾವ ಅಧಿಕಾರಿಯೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಆರೋಗ್ಯದ ಸಮಸ್ಯೆ ಎದುರಾಗಿದೆ” ಎಂದು ಹೇಳಿದರು.
ಈದಿನ.ಕಾಮ್ ಈ ಬಗ್ಗೆ ಬಿಬಿಎಂಪಿಯನ್ನು ಸಂಪರ್ಕಿಸಿತು.
“ಆರು ಗಂಟೆಯ ಮೇಲೆ ಮೃತ ದೇಹಗಳ ಬರ್ನಿಂಗ್ ಇರುವುದಿಲ್ಲ. ಕೆಲವು ಬಾಡಿಗಳು ಬರ್ನ್ ಆಗಲು ಸಮಯ ತೆಗೆದುಕೊಳ್ಳುತ್ತೇವೆ. ಆರು ಗಂಟೆಗೆ ಬಾಡಿ ಬರ್ನಿಂಗ್‌ಗೆ ಹಾಕಿದ್ದರೂ, ಬರ್ನ್ ಆಗಲು ಒಂದೊಂದು ಬಾಡಿ ಒಂದು ರೀತಿಯ ಸಮಯ ತೆಗೆದುಕೊಳ್ಳುತ್ತದೆ. ಚಿಮಣಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತೇವೆ” ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಈ ದಿನ.ಕಾಮ್‌ಗೆ ಹೇಳಿದರು.