ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯ 1964ರಲ್ಲಿ ತಲೆ ಎತ್ತಿತ್ತು. ಎಚ್.ನರಸಿಂಹಯ್ಯ ಅವರ ಕನಸಿನ ಕೂಸಾದ ಈ ವಿಶ್ವವಿದ್ಯಾಲಯ 1,400 ಎಕರೆ ವಿಸ್ತೀರ್ಣದ ವಿಶಾಲವಾದ ಪ್ರದೇಶದಲ್ಲಿ ಜ್ಞಾನಭಾರತಿ ಎಂಬ ಹೆಸರಿನೊಂದಿಗೆ ಹೊಸ ಆವರಣ (ಕ್ಯಾಂಪಸ್) ನಿರ್ಮಾಣವಾಯಿತು. ಈ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ, ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ, ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ವಿದ್ಯಾರ್ಜನೆಗೆ ಹೆಸರಾದ ಈ ವಿಶ್ವವಿದ್ಯಾಲಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂಗೆಟ್ಟಿದೆ.
ಬೆಂಗಳೂರಿನ ನಾಗರಭಾವಿ, ಮಲ್ಲತ್ತಹಳ್ಳಿ ಹಾಗೂ ಮೈಸೂರು ರಸ್ತೆ ನಡುವೆ ಕೇಂದ್ರವಾಗಿರುವ ಜ್ಞಾನಭಾರತಿ ಆವರಣದಲ್ಲಿರುವ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ವಿಶ್ವವಿದ್ಯಾಲಯದ ಆವರಣದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧ ಮಾಡಬೇಕು ಎಂದು ಬೆಂವಿವಿಯ ಸ್ನಾತಕೋತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇವರ ಕೂಗಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.
ಜ್ಞಾನಭಾರತಿ ಆವರಣದಲ್ಲಿ ದಟ್ಟ ಕಾಡಿದೆ. ಈ ಕಾಡಿನ ನಡುವೆಯೇ, ವಿಶ್ವವಿದ್ಯಾಲಯ ಹುಟ್ಟಿಕೊಂಡಿದೆ. ಈ ವಿಶ್ವವಿದ್ಯಾಲಯದಲ್ಲಿ 50ಕ್ಕೂ ಹೆಚ್ಚು ವಿಭಾಗಗಳಿವೆ. ಈ ಎಲ್ಲ ವಿಭಾಗಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮಹಿಳಾ ವಿದ್ಯಾರ್ಥಿಗಳು ಸುಮಾರು 1200 ಇದ್ದಾರೆ. ಈ ಆವರಣದಲ್ಲಿಯೇ ಪೊಲೀಸ್ ಠಾಣೆ, ಗ್ರಂಥಾಲಯ, ಚಿಕ್ಕ ಕ್ಲಿನಿಕ್ ಕೂಡ ಇದೆ.
ಆವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ನಿದರ್ಶನವೆಂದರೆ, ಆವರಣದಲ್ಲಿರುವ ಬೀದಿ ದೀಪಗಳ ಸೌಕರ್ಯ. ಇದು ವಿದ್ಯಾರ್ಥಿಗಳು ಅನುಭವಿಸುತ್ತಿರುವ ಮೂಲಭೂತ ಸೌಲಭ್ಯಗಳ ಕೊರತೆಗೆ ಕೈಗನ್ನಡಿಯಾಗಿದೆ.
ಮೈಸೂರು ರಸ್ತೆ ಕಡೆಯಿಂದ ಮಲ್ಲತ್ತಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಬೀದಿದೀಪಗಳ ಕೊರತೆ ಇದೆ. ಜತೆಗೆ, ವಿಶ್ವವಿದ್ಯಾಲಯದ ಮಾರ್ಗವಾಗಿ ಮಲ್ಲತ್ತಹಳ್ಳಿಯಿಂದ ನಾಗರಭಾವಿ ಕಡೆಗೆ ತೆರಳುವ ಮಾರ್ಗದಲ್ಲಿ ರಾತ್ರಿ 6 ಗಂಟೆಯ ಬಳಿಕ ದಟ್ಟ ಕತ್ತಲು ತುಂಬಿರುತ್ತದೆ. ಈ ಮಾರ್ಗವನ್ನು ರಾತ್ರಿ 10 ಗಂಟೆಯ ನಂತರ ಮುಚ್ಚಲಾಗುತ್ತದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರ ಮತ್ತು ಮಲ್ಲತ್ತಹಳ್ಳಿಯ ರಸ್ತೆಯ ಮಾರ್ಗ ದಿನದ 24 ಗಂಟೆ ತೆರೆದಿರುತ್ತದೆ.
ವಿಶ್ವವಿದ್ಯಾಲಯದ ಈ ಮಾರ್ಗದಲ್ಲಿ ರಾತ್ರಿ ವೇಳೆ, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ದಾರಿಹೋಕರು ಓಡಾಡುತ್ತಾರೆ. ಇದು ಅಸುರಕ್ಷಿತ ಸ್ಥಳವಾಗಿದೆ. ಸುತ್ತ ದಟ್ಟ ಗಿಡ, ಮರ ಇರುವ ಈ ಪ್ರದೇಶ ಅಪಾಯಕಾರಿಯಾಗಿದೆ. ಈ ರಸ್ತೆಗೆ ಸಂಪೂರ್ಣ ನಿರ್ಬಂಧ ಹಾಕದ ವಿಶ್ವವಿದ್ಯಾಲಯ ಅರೆಬರೆ ನಿಯಮಗಳನ್ನು ಪಾಲಿಸುತ್ತ ಬಂದಿದೆ. ಜತೆಗೆ, ಬೀದಿ ದೀಪಗಳಿಲ್ಲದೇ ಕತ್ತಲೆ ಇದ್ದರೂ, ಕಾಣದ ಹಾಗೇ ಕಣ್ಮುಚ್ಚಿ ಕುಳಿತಿದೆ. ಇದಕ್ಕೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಹಿತರಕ್ಷಣೆಯ ಬಗ್ಗೆ ಚಿಂತಿಸದಿರುವುದು ವಿಷಾದನೀಯ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಅಧ್ಯಕ್ಷ ಲೋಕೇಶ್, “ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಬೀದಿ ದೀಪಗಳ ವ್ಯವಸ್ಥೆಯಿಲ್ಲ. ಕಳೆದ ಹಲವು ವರ್ಷಗಳಿಂದ ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದೇವೆ. ವಿದ್ಯುತ್ ಬಿಲ್ ಹೆಚ್ಚಳವಾಗುತ್ತದೆ ಎಂದರೆ, ಸೋಲಾರ್ ದೀಪಗಳನ್ನು ಬಳಸಿ ಎಂಬ ಸಲಹೆ ಕೂಡ ನೀಡಿದ್ದೇವೆ. ಆದರೂ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
“ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಂದು ವರ್ಷಕ್ಕೆ ₹48 ರಿಂದ ₹50 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ವಿದ್ಯುತ್ ಸಂಬಂಧಿತ ಕೆಲಸಗಳಿಗೆ ತಿಂಗಳಿಗೆ ಸುಮಾರು ಕೋಟಿ ಖರ್ಚು ಮಾಡುತ್ತಾರೆ. ಈ ಬೀದಿ ದೀಪಗಳ ಕೊರತೆಯಿಂದ ಆವರಣದಲ್ಲಿ ಹಲವು ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಕಳೆದ ಕೆಲವು ದಿನಗಳ ಹಿಂದೆ ಹೊರಗಡೆಯ ಯುವಕರು ರಕ್ತ ಬರುವ ರೀತಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಜತೆಗೆ, ವಿಶ್ವವಿದ್ಯಾಲಯದ ವಸ್ತುಗಳಿಗೂ ಹಾನಿ ಮಾಡಿದ್ದಾರೆ” ಎಂದು ಹೇಳಿದರು.
“ವಿಭಾಗಗಳಿಗೆ ಸುರಕ್ಷತೆ ಇಲ್ಲ. ಇನ್ನ ವಿದ್ಯಾರ್ಥಿಗಳಿಗೆ ಎಲ್ಲಿ ಸುರಕ್ಷತೆ ಇರುತ್ತದೆ. ಇಡೀ ವಿಶ್ವವಿದ್ಯಾಲಯದಲ್ಲಿ ಬೀದಿ ದೀಪಗಳ ಕೊರತೆ ಇದೆ. ಈ ವಿಶ್ವವಿದ್ಯಾಲಯದಲ್ಲಿ ಸುಮಾರು 3,000 ವಿದ್ಯಾರ್ಥಿಗಳು ಇದ್ದಾರೆ. ಇವರೆಲ್ಲರ ಸುರಕ್ಷತೆಗಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮುಂದಾಗಬೇಕು. ಇನ್ನು ವಿಶ್ವವಿದ್ಯಾಲಯದ ಒಳಗಡೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಈ ಸಂಚಾರವನ್ನು ನಿರ್ಬಂಧಿಸಬೇಕು ಎಂದು ಕಳೆದ 15 ವರ್ಷಗಳಿಂದ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ನಮಗೆ ಜಯ ಸಿಕ್ಕಿಲ್ಲ” ಎಂದು ತಿಳಿಸಿದರು.
“ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎಂಬ ಬಗ್ಗೆ ಹೇಳುತ್ತಾರೆ. ಹಾಗಿದ್ದರೇ, ನಗರದಲ್ಲಿ ಇರುವ ಜಿಕೆವಿಕೆ ವಿಶ್ವವಿದ್ಯಾಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತ್ರ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದು ಯಾಕೆ?” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಪೌರ ಕಾರ್ಮಿಕ ದಿನಾಚರಣೆಯ ಜೊತೆಗೆ ತಾರತಮ್ಯ, ಅವಮಾನ, ಶೋಷಣೆಯೂ ಇದೆ…
“ಸಾರ್ವಜನಿಕರ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದ ಹೊರಾಂಗಣ ಭಾಗದಿಂದ ಪೆರಿಫೆರಲ್ ರಸ್ತೆ ನಿರ್ಮಾಣ ಮಾಡಿ ಆಗ ವಿಶ್ವವಿದ್ಯಾಲಯದ ಒಳಗಡೆ ವಾಹನಗಳ ಸಂಚಾರ ನಡೆಸಲು ನಿರ್ಬಂಧ ವಿಧಿಸಬೇಕು. ಬಿಬಿಎಂಪಿ ಈ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದೆವು. ಇತ್ತೀಚೆಗೆ, ಶಿಲ್ಪಾ ಎಂಬ ವಿದ್ಯಾರ್ಥಿನಿ ಬಿಎಂಟಿಸಿ ಬಸ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. ಮಾಜಿ ಮುಖ್ಯಮಂತ್ರಿ ಭೇಟಿ ನೀಡಿ ರಸ್ತೆ ನಿರ್ಮಾಣ ಸೇರಿ ಹಲವು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ. ವಿಶ್ವವಿದ್ಯಾಲದಲ್ಲಿ ಸಿಸಿಟಿವಿ ಕೊರತೆ ಇದೆ. ಆಂಬುಲೆನ್ಸ್ ಸೇವೆ ಇಲ್ಲ” ಎಂದು ಹೇಳಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ್, “ಕೂಡಲೇ ಈ ಸಮಸ್ಯೆ ಬಗೆಹರಿಸುತ್ತೇವೆ” ಎಂದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಎಇ ಚಂದ್ರಶೇಖರ್, “ಬೀದಿ ದೀಪಗಳನ್ನು ಅಳವಡಿಸಲು ಟೆಂಡರ್ ಕರೆದಿದ್ದೇವೆ. ಮುಂದಿನ 15 ದಿನದೊಳಗೆ ಈ ಸಮಸ್ಯೆ ಬಗೆಹರಿಸುತ್ತೇವೆ. ವಿಶ್ವವಿದ್ಯಾಲಯದ ಒಳಗಡೆ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಕ್ಕೆ ಹಲವು ಬಾರಿ ಪ್ರಯತ್ನಿಸಿದ್ದೆವು. ಆದರೆ, ಆಗಲಿಲ್ಲ. ವಿಶ್ವವಿದ್ಯಾಲಯದ ಸುತ್ತಮುತ್ತ ಇರುವ ಮಲ್ಲತ್ತಹಳ್ಳಿ, ನಾಗದೇವನಹಳ್ಳಿಯ ಜನರು ಈ ರಸ್ತೆ ನಮ್ಮ ನಕ್ಷೆಯಲ್ಲಿ ಬರುತ್ತದೆ. ಆದನ್ನು ನಾವು ಬಳಸುತ್ತೇವೆ ಎಂದು ಹಲವು ಬಾರಿ ಗಲಾಟೆ ಮಾಡಿದ್ದಾರೆ. ಈ ಸಮಸ್ಯೆ ಬಗ್ಗೆ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ” ಎಂದರು.