ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದ್ದು, ಈ ಪೈಕಿ ಮಂಗಳವಾರ ಎರಡು ಮೃತದೇಹ ಪತ್ತೆಯಾಗಿವೆ. ಶೋಧ ಕಾರ್ಯ ಮುಂದುವರಿದಿದೆ.
ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮೃತ ಮಕ್ಕಳನ್ನು ಶ್ರೀನಿವಾಸ್ (ಜಾನ್ ಸೀನಾ) (15) ಮತ್ತು ಮಹಾಲಕ್ಷ್ಮಿ (13) ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ತೀವ್ರವಾಗಿದೆ ಖಂಡಿಸಿದೆ.
ಮೃತ ಮಕ್ಕಳ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಆಗ್ರಹಿಸಿದೆ.
ಮೃತ ಮಕ್ಕಳ ತಾಯಿಯನ್ನು ಸಿಪಿಐ(ಎಂ) ಕೆಂಗೇರಿ ವಲಯ ಸಮಿತಿಯ ನಿಯೋಗ ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದೆ. ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್.ಲಕ್ಷ್ಮಿ, ಮುಖಂಡರಾದ ಎನ್.ಬಿ.ಮಹಂತೇಶ್, ಬಿ.ಕಪನಿಗೌಡ, ಕೆ.ಗುರುಪ್ರಸಾದ್ ಇದ್ದರು.
“ಅಕ್ಟೋಬರ್ 21 ರಂದು ಸುರಿದ ತೀವ್ರ ಮಳೆಯಿಂದ ಕೆಂಗೇರಿ ಅಂಗಳದಲ್ಲಿ ಮಣ್ಣು ಮೃದುವಾಗಿ ಆಟವಾಡುತ್ತಿದ್ದ ಮಕ್ಕಳು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಇದು ಬಿಬಿಎಂಪಿಯ ತೀವ್ರ ನಿರ್ಲಕ್ಷ್ಯವಾಗಿದ್ದು ಕೆರೆ ಅಂಗಳದಲ್ಲಿ ತಂತಿ ಬೇಲಿ ಇಲ್ಲದಿರುವುದೇ ಈ ಅನಾಹುತಕ್ಕೆ ಕಾರಣ” ಎಂದು ಸಿಪಿಐ ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ಸತತ ಮಳೆ, ಬೆಂಗಳೂರು ನಗರ ಜಿಲ್ಲೆಯಾದ್ಯಂತ ಬುಧವಾರ ಶಾಲೆಗಳಿಗೆ ರಜೆ: ಡಿಸಿ ಜಗದೀಶ್ ಆದೇಶ
“ನಾಗರತ್ನರವರು ಬಿಬಿಎಂಪಿಯಲ್ಲಿ ಒಣ ತ್ಯಾಜ್ಯ ವಿಲೇವಾರಿಯ ವಿಭಾಗದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕಳು. ದಲಿತ ಕುಟುಂಬಕ್ಕೆ ಸೇರಿದ ಈಕೆ ಒಂಟಿ ಮಹಿಳೆ ಕೆಲಸಕ್ಕೆ ಹೋದಾಗ ಈ ಅವಘಡ ನಡೆದಿದೆ. ತನ್ನ ಸಂಸ್ಥೆಯ ದಿನಗೂಲಿ ನೌಕರಳ ಕುರಿತು ಈವರೆಗೆ ಬಿಬಿಎಂಪಿ ಉನ್ನತ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಇದು ಅತ್ಯಂತ ಅಮಾನವೀಯ ನಡೆಯಾಗಿದೆ” ಎಂದು ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸ್ಥಳೀಯ ಶಾಸಕರಾದ ಸೋಮಶೇಖರ್ ಆಗಲೀ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆಯವರಾಗಲೀ ಕನಿಷ್ಠ ಭೇಟಿ ನೀಡಿ ಸಾಂತ್ವನ ಹೇಳಲು ಬಂದಿಲ್ಲ. ಇದು ಬಡವರು ಮತ್ತು ದಲಿತ ಮಕ್ಕಳ ಕುರಿತ ನಿರ್ಲಕ್ಷ್ಯ” ಎಂದು ಸಿಪಿಐ(ಎಂ) ಕೆಂಗೇರಿ ವಲಯ ಸಮಿತಿ ದೂರಿದೆ.
“ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಮಧ್ಯಪ್ರವೇಶಿಸಬೇಕು. ಮೃತ ಮಕ್ಕಳ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕು. ಕುಟುಂಬದ ನಿರ್ವಹಣೆಗೆ ಕನಿಷ್ಠ 50 ಲಕ್ಷ ಪರಿಹಾರ ಘೋಷಿಸಬೇಕು. ನಿರ್ಲಕ್ಷ್ಯ ಮಾಡಿದ ಬಿ.ಬಿ.ಎಂ.ಪಿ ಅಧಿಕಾರಿಗಳ ವಿರುದ್ಧವು ಕ್ರಮಜರುಗಿಸಬೇಕು” ಎಂದು ಆಗ್ರಹಿಸಿದೆ.
“ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬೆಂಗಳೂರಿನ ಕೆರೆಗಳಿಗೆ ಮುಳ್ಳುತಂತಿ ಮತ್ತು ಗೇಟ್ ವ್ಯವಸ್ಥೆ ಮಾಡಬೇಕು. ಎಚ್ಚರಿಕೆಯ ಫಲಕಗಳನ್ನು ಹಾಕಬೇಕು” ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದೆ.
