ರಾಜ್ಯ ಸರ್ಕಾರ ಗೂಡ್ಸ್ ವಾಹನಗಳ ತೆರಿಗೆ ಮೊತ್ತವನ್ನು ಅಧಿಕಗೊಳಿಸಿದ್ದು, ಲೈಫ್ ಟೈಂ ಟ್ಯಾಕ್ಸ್ ಪಾವತಿಗೆ ಜುಲೈ 28ರಂದು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಇದೀಗ, ಈ ಕಾಯ್ದೆ ಗೂಡ್ಸ್ ವಾಹನ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಗೂಡ್ಸ್ ವಾಹನ ಮಾಲೀಕರು ಸೆ. 1ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಆ. 31 ರಂದು ಶಾಂತಿನಗರ ರಸ್ತೆಯುದ್ದಕ್ಕೂ 250ಕ್ಕೂ ಹೆಚ್ಚು ಎಂಜಿವಿ (ಮೀಡಿಯಂ ಗೂಡ್ಸ್ ವೆಹಿಕಲ್) ಗೂಡ್ಸ್ ವಾಹನ ನಿಲ್ಲಿಸಲಾಗಿದೆ. ನಿಲ್ದಾಣದ ಬಳಿಯ ಬಿಟಿಎಸ್ ರೋಡ್ ಬ್ಲಾಕ್ ಮಾಡಲಾಗಿದೆ. ಪ್ರತಿಭಟನಾನಿರತರು ಈ ವೇಳೆ ಶಾಂತಿನಗರ ಆರ್ಟಿಒ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಲಾರಿ ಅಸೋಸಿಯೇಷನ್ ಅಧ್ಯಕ್ಷ ಶಣ್ಮುಗಪ್ಪ, “ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯದೇ ಇದ್ದರೆ, ಸೆ.1 ರಂದು ಬೆಂಗಳೂರಿನಾದ್ಯಂತ ಎರಡೂವರೆ ಸಾವಿರ ಎಂಜಿವಿ ಗೂಡ್ಸ್ ವಾಹನ ನಿಲ್ಲಿಸಿ ಬೃಹತ್ ಪ್ರತಿಭಟನೆ ಮಾಡುತ್ತೇವೆ” ಎಂದು ತಿಳಿಸಿದರು.
“2 ಸಾವಿರದಿಂದ ಲೈಫ್ ಟ್ಯಾಕ್ಸ್ 70 ಸಾವಿರ ಮಾಡಿದ್ದಾರೆ. ನಮಗೆ ಈ ಟ್ಯಾಕ್ಸ್ ಕಟ್ಟಲು ಆಗಲ್ಲ. ಇದು ನಮ್ಮ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಸರ್ಕಾರ ಕಳೆದ ಜುಲೈ 28ರಂದು ಅಧಿಸೂಚನೆ ಹೊರಡಿಸಿದೆ. ಟ್ಯಾಕ್ಸ್ ಪಾವತಿಗೆ ಇವತ್ತು ಕಡೆಯ ದಿನ. ರಾಜ್ಯಾದ್ಯಂತ 28 ಸಾವಿರ ಲಾರಿಗಳಿದ್ದು, ಬೆಂಗಳೂರಿನಲ್ಲಿ 13 ಸಾವಿರ ಲಾರಿಗಳಿವೆ” ಎಂದು ಹೇಳಿದರು.
“ಬೇರೆ ರಾಜ್ಯಗಳಲ್ಲಿ ಇಲ್ಲದ ಕಾಯ್ದೆ ನಮ್ಮ ರಾಜ್ಯದಲ್ಲಿ ಏಕೆ ಜಾರಿಗೆ ತಂದಿದ್ದಾರೆ. ಸೆ.1 ರಂದು ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಇದರಿಂದ ಲಾ ಅಂಡ್ ಆರ್ಡರ್ಗೆ ತೊಂದರೆ ಆದರೆ ಅದಕ್ಕೆ ನಾವು ಹೊಣೆಯಲ್ಲ” ಎಂದರು.
ತ್ರೈಮಾಸಿಕ ತೆರಿಗೆ ಪಾವತಿ ಬದಲಾಗಿ ವಾಹನ ನೋಂದಣಿ ವೇಳೆ ಲೈಫ್ ಟೈಂ (ಏಕ ಕಾಲಿಕ) ಪಾವತಿ ಮಾಡಲು ರಾಜ್ಯ ಸರ್ಕಾರ ಜುಲೈ 28ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆ.1ರಿಂದಲೇ ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ.
ಈ ಸುದ್ದಿ ಓದಿದ್ದೀರಾ? ಡ್ರಗ್ಸ್ ಹಾವಳಿ ತಡೆಗಟ್ಟಲು ವಿದ್ಯಾರ್ಥಿಗಳ ಪಡೆ ನಿರ್ಮಾಣ ಮಾಡಿದ ಬೆಂಗಳೂರು ಪೊಲೀಸರು
ಈ ಹಿಂದೆ ಹಳದಿ ಫಲಕದ ಎಲ್ಜಿವಿ, ಎಂಜಿವಿ ವಾಹನಗಳ ಮಾಲೀಕರು ಮೂರು ತಿಂಗಳಿಗೊಮ್ಮೆ ₹2,000 ಟ್ಯಾಕ್ಸ್ ಕಟ್ಟುತಿದ್ದರು. ಈ ಕಾಯ್ದೆಯನ್ನು ಸರ್ಕಾರ ಬದಲಾವಣೆ ಮಾಡಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು.
ಎರಡು ಮೂರು ಲಾರಿ ಹೊಂದಿರುವ ಮಾಲೀಕರಿಗೆ ಏಕಕಾಲಕ್ಕೆ ಭಾರೀ ಮೊತ್ತದ ತೆರಿಗೆ ಕಟ್ಟುವುದು ಕಷ್ಟವಾಗಿದೆ. ಈ ನೂತನ ಕಾಯ್ದೆಯಿಂದ ಗೂಡ್ಸ್ ವಾಹನ ಮಾಲೀಕರು ಕಂಗಾಲಾಗಿದ್ದಾರೆ.
Byare government