ಕೆರೆಗಳನ್ನು ನಿರ್ನಾಮ ಮಾಡಿ ಆ ಸ್ಥಳಗಳಲ್ಲಿ ದೊಡ್ಡ ಕಟ್ಟಡ ನಿರ್ಮಿಸಿದರಲ್ಲಿ ಹೆಚ್ಚಿನ ಪಾಲು ಸರ್ಕಾರದ್ದೇ ಇದೆ. ನಗರದ ಕೋರಮಂಗಲ ಬಳಿಯ ಚಲ್ಲಘಟ್ಟದಲ್ಲಿ 16 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಚಲ್ಲಘಟ್ಟ ಕೆರೆಯ ಮೇಲೆ ಇದೀಗ ಹಸಿರು ಹುಲ್ಲು ಹಾಸಿನ ಗಾಲ್ಫ್ ಕೋರ್ಸ್ ನಿರ್ಮಾಣವಾಗಿದೆ.
‘ಕೆರೆಗಳ ನಗರಿ’ ಎಂದೇ ಹೆಸರುವಾಸಿಯಾಗಿದ್ದ ಬೆಂಗಳೂರಿನಲ್ಲಿ ಇದೀಗ ಬೆರಳಣಿಕೆಯ ಕೆರೆಗಳು ಮಾತ್ರ ಉಳಿದಿವೆ. ಅಳಿದುಳಿದಿರುವ ಕೆರೆಗಳಲ್ಲಿ ಹೆಚ್ಚಾಗಿ ಪ್ರಾಣಿ ಪಕ್ಷಿಗಳೂ ಕೂಡ ಕುಡಿಯಲು ಯೋಗ್ಯವಲ್ಲದ ನೀರು ತುಂಬಿದೆ. ಈ ನಗರ ಕಟ್ಟಲು ಬುನಾದಿ ಹಾಕಿದ್ದ ದಿನ ಜನರಿಗೆ ಕುಡಿಯಲು ನೀರು ಅವಶ್ಯ ಎಂದು ಅರಿತಿದ್ದ ನಾಡಪ್ರಭು ಕೆಂಪೇಗೌಡರು, ನಗರದಲ್ಲಿ 200ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಕಾಲಕಳೆದಂತೆ ನಗರೀಕರಣದ ಹಿಂದೆ ಬಿದ್ದ ಸರ್ಕಾರ, ಬಂಡವಾಳಶಾಹಿಗಳು ಕೆರೆಗಳನ್ನು ನಾಶ ಮಾಡಿ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಕೆರೆಗಳನ್ನು ನಿರ್ನಾಮ ಮಾಡಿ ಆ ಸ್ಥಳಗಳಲ್ಲಿ ದೊಡ್ಡ ಕಟ್ಟಡ ನಿರ್ಮಿಸಿದರಲ್ಲಿ ಹೆಚ್ಚಿನ ಪಾಲು ಸರ್ಕಾರದ್ದೇ ಇದೆ. ನಗರದ ಕೋರಮಂಗಲ ಬಳಿಯ ಚಲ್ಲಘಟ್ಟದಲ್ಲಿ 16 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಚಲ್ಲಘಟ್ಟ ಕೆರೆಯ ಮೇಲೆ ಇದೀಗ ಹಸಿರು ಹುಲ್ಲು ಹಾಸಿನ ಗಾಲ್ಫ್ ಕೋರ್ಸ್ ನಿರ್ಮಾಣವಾಗಿದೆ.
ಈ ಹಿಂದೆ ಚಲ್ಲಘಟ್ಟ ಕೆರೆಯ ನೀರು ಜನರ ದಾಹ ತಣಿಸುತ್ತಿತ್ತು. ಕೆರೆಯ ಸುತ್ತಮುತ್ತ ಇದ್ದ ಗಿಡ-ಮರಗಳು ದಣಿದು ಬಂದ ಜನರಿಗೆ ವಿಶ್ರಮಿಸಲು ನೆರಳಾಗಿದ್ದವು. ಆಗಿನ ಕಾಲದಲ್ಲಿ ನೆಲೆಸಿದ್ದ ಸಾವಿರಾರು ಜನ ಈ ಕೆರೆಯ ನೀರನ್ನು ಕುಡಿಯಲು ಬಳಸುತ್ತಿದ್ದರು. ಕಾಲಕಳೆದಂತೆ ಕೆರೆಯ ನೀರು ಬತ್ತತೊಡಗಿತು. ಕೆರೆಯ ನಿರ್ವಹಣೆಗೆ ಕ್ರಮ ಕೈಗೊಳ್ಳದ ಸರ್ಕಾರ ಅಂತರ್ಜಲ ಕುಸಿಯುವಂತೆ ಮಾಡಿತು. ಈ ಸ್ಥಳದಲ್ಲಿ ಮೊದಲಿಗೆ ಬಿಡಿಎ ಬಡಾವಣೆಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡಿತ್ತು.
ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣ ಮಾಡಲು ತಗಲುವ ವೆಚ್ಚ ದುಬಾರಿಯಾದ ಹಿನ್ನೆಲೆ, ಲೇಔಟ್ ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ಆಗಿನ ಬಿಡಿಎ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ, ಈ ನಿರ್ಧಾರವನ್ನು ಕೈಬಿಡಲಾಗಿತ್ತು.
ಇದೇ ಸಮಯದಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣದ ಬಗ್ಗೆ ಪದೇಪದೇ ಕೂಗು ಕೇಳಿ ಬರುತ್ತಿತ್ತು. ಗಾಲ್ಫ್ ಕೋರ್ಸ್ ನಿರ್ಮಿಸಲು ಸೂಕ್ತ ಜಮೀನು ಮಂಜೂರು ಮಾಡುವಂತೆ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆ, ರಾಜ್ಯ ಸರ್ಕಾರ ಬಿಡಿಎ, ವಿಭಾಗೀಯ ಆಯುಕ್ತರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿ ಸ್ಥಳ ಸಮೀಕ್ಷೆಗೆ ನಿಯೋಜಿಸಿತು. ಸಮಿತಿಯೂ ಚಲ್ಲಘಟ್ಟ ಕೆರೆಯಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣ ಮಾಡಬಹುದು ಎಂದು ವರದಿ ನೀಡಿತು.
ಬಳಿಕ, 1979ರ ಆಗಸ್ಟ್ 17ರಂದು ಮುಖ್ಯ ಕಾರ್ಯದರ್ಶಿ ನರಸಿಂಹರಾವ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಕರ್ನಾಟಕ ಗಾಲ್ಫ್ ಅಸೋಸಿಯೇಶನ್ ಪ್ರತಿನಿಧಿಗಳ ಸಭೆ ನಡೆಯಿತು. ಸಭೆಯಲ್ಲಿ ಗಾಲ್ಫ್ ಮೈದಾನ ನಿರ್ಮಾಣದ ಪ್ರಸ್ತಾವನೆ ಕುರಿತು ಸುದೀರ್ಘವಾಗಿ ಚರ್ಚಿಸಿದ ಬಳಿಕ, ಚಲ್ಲಘಟ್ಟ ಕೆರೆಯಲ್ಲಿ ಗಾಲ್ಫ್ ಕೋರ್ಸ್ ನಿರ್ಮಾಣ ಮಾಡಬಹುದು ಎಂದು ನಿರ್ಧರಿಸಿ, ಮಂಜೂರು ಮಾಡಲಾಯಿತು.
ಮೇ 1980ರಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಚಲ್ಲಘಟ್ಟದಲ್ಲಿ 125 ಎಕರೆ ಭೂಮಿಯನ್ನು ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ಗೆ ಗುತ್ತಿಗೆ ನೀಡಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
16 ಎಕರೆ ಚಲ್ಲಘಟ್ಟ ಕೆರೆ ಜತೆಗೆ ಸುತ್ತಮುತ್ತಲಿನ ಪ್ರದೇಶ ಸೇರಿ ಒಟ್ಟು 125 ಎಕರೆಯಲ್ಲಿ ಕೆಜಿಎ ಗಾಲ್ಫ್ ಕೋರ್ಸ್ ನಿರ್ಮಾಣ ಮಾಡಿದೆ. 1986ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಗಾಲ್ಫ್ ಕೋರ್ಸ್‌ಗೆ ₹25 ಲಕ್ಷ ಮಂಜೂರು ಮಾಡಿದರು. ಮೊದಲಿಗೆ ಒಂಬತ್ತು ರಂಧ್ರಗಳನ್ನು ಉದ್ಘಾಟಿಸಿದ್ದರು.
ಗಾಲ್ಫ್ ಕೋರ್ಸ್ ನಿರ್ಮಾಣದ ವೇಳೆ ದಕ್ಷಿಣ ಭಾಗದ ಕಡೆ ಬೇಲಿ ಹಾಕುವ ವೇಳೆ ಜಮೀನು ಮಾಲೀಕರು ಪ್ರತಿಭಟನೆ ನಡೆಸಿದ್ದರು. ಚಲ್ಲಘಟ್ಟದಿಂದ ಹಲಸೂರಿಗೆ ಹೋಗಲು ಇದರಿಂದ ಸಮಸ್ಯೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 4 | ಸಿಹಿ ನೀರಿನ ಕಣಜ ಅಕ್ಕಿತಿಮ್ಮನಹಳ್ಳಿ ಕೆರೆ ಮೇಲಿದೆ ‘ಹಾಕಿ ಕ್ರೀಡಾಂಗಣ’
ಕೆಜಿಎ ಇರುವ ಭೂಮಿ ಸರ್ಕಾರಕ್ಕೆ ಸೇರಿದ್ದು, ಪ್ರಸ್ತುತ ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಗುತ್ತಿಗೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಕ್ಲಬ್ ನಡೆಸಲು ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ಗೆ ಗುತ್ತಿಗೆ ನೀಡಿದೆ.
ಒಟ್ಟಾರೆಯಾಗಿ ಸುಂದರವಾಗಿ ಹರಡಿಕೊಂಡಿದ್ದ ಚಲ್ಲಘಟ್ಟ ಕೆರೆಯನ್ನು ನಿರ್ನಾಮ ಮಾಡಿ ಅಭಿವೃದ್ಧಿ, ನಗರೀಕರಣ, ಪ್ರವಾಸೋದ್ಯಮವನ್ನು ಬಲಗೊಳಿಸಲು ನಗರದ ಜೀವವಾಗಿರುವ ಕೆರೆಗಳನ್ನು ಅಕ್ಷರಶಃ ನಾಶ ಮಾಡಿ ಅದರ ಮೇಲೆ ಬೃಹದಾಕಾರದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ.