1198 ದಿನಗಳ ಕಾಲ ನಿರಂತರವಾಗಿ ನಡೆದ ಐತಿಹಾಸಿಕ ದೇವನಹಳ್ಳಿ ಭೂ ಹೋರಾಟ ಯಶಸ್ವಿಯಾಗಿ ಅಂತ್ಯಗೊಂಡು ಒಂದು ವರ್ಷ ಪೂರ್ಣಗೊಂಡಿದೆ. ರೈತ ಹೋರಾಟದ ಯಶಸ್ಸಿನ ಸ್ಮರಣೆಗಾಗಿ ಗುರುವಾರ, ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ ರೈತರು, ರೈತ ಮಹಿಳೆಯರು, ಯುವಜನರು ಹಾಗೂ ವಿವಿಧ ರೈತ-ಜನಪರ ಸಂಘಟನೆಗಳ ಮುಖಂಡರು ವಿಜಯೋತ್ಸವ ಮತ್ತು ಆತ್ಮಾವಲೋಕನ ಸಭೆ ನಡೆಸಿದ್ದಾರೆ. ಭೂ ಹಕ್ಕುಗಳಿಗಾಗಿ ಮುಂದಿನ ದಿನಗಳಲ್ಲಿಯೂ ಹೋರಾಟದ ಮನೋಭಾವವನ್ನು ಮುಂದುವರಿಸುವುದಾಗಿ ಮತ್ತು ಇನ್ನೊಂದಿಗೂ ತಮ್ಮ ಭೂಮಿಯನ್ನು ಮಾರಾಟ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ.
ಸಭೆಯಲ್ಲಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿರುವ ಕ್ರಮವನ್ನು ರೈತರು ಮತ್ತು ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರದ ಈ ನೀತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡ ರೈತ ಕುಟುಂಬಗಳೇ ಹೆಚ್ಚಾಗಿ ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ರೈತರು ಮತ್ತು ದಲಿತ ಸಮುದಾಯದ ವಿರುದ್ಧದ ನೀತಿಯಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರ್ಕಾರದ ಯಾವುದೇ ಆಮಿಷಗಳಿಗೆ ಮಣಿಯುವುದಿಲ್ಲ. ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ. ಭೂಮಿಯೇ ತಮ್ಮ ಬದುಕಿನ ಆಧಾರವಾಗಿದ್ದು, ಅದನ್ನು ಉಳಿಸಿಕೊಳ್ಳಲು ಅಗತ್ಯವಿದ್ದರೆ ಮತ್ತೊಮ್ಮೆ ಹೋರಾಟಕ್ಕೂ ಸಿದ್ಧ” ಎಂದು ರೈತರು ಪ್ರತಿಜ್ಞೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ, ಬಿಡದಿ ಹಾಗೂ ಆನೇಕಲ್ ಭಾಗದಲ್ಲಿ ರೈತರನ್ನು ಬೆದರಿಸಿ ಬಲವಂತದ ಭೂಸ್ವಾಧೀನಕ್ಕೆ ಮುಂದಾಗುತ್ತಿರುವ ಕ್ರಮಗಳನ್ನು ಖಂಡಿಸಿದ ರೈತರು, “ಬಿಡದಿ ಭಾಗದಲ್ಲಿ ಭೂಮಿ ರಕ್ಷಣೆಗೆ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಸರ್ಕಾರ ಕೂಡಲೇ ಬೇಷರತ್ತಾಗಿ ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ರೈತರ ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ದೇವನಹಳ್ಳಿ ಭಾಗದ ರೈತರಿಗಾಗಿ ಶೀಘ್ರದಲ್ಲೇ ಬಲಿಷ್ಠ ಸಹಕಾರಿ ಸಂಘವನ್ನು ಸ್ಥಾಪಿಸುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದಿವೆ.
ಈ ಲೇಖನ ಓದಿದ್ದೀರಾ?: ಬಿಗಡಾಯಿಸಿದೆ ಸೋನಮ್ ಆರೋಗ್ಯ; ಇತಿಹಾಸದಲ್ಲಿ ಮೋದಿಯೇ ಅಪರಾಧಿ – ಸಿಗದು ಕ್ಷಮೆ!
“ದೇವನಹಳ್ಳಿ ಭೂ ಹೋರಾಟದಲ್ಲಿ ಶ್ರಮಿಸಿದ ಹೋರಾಟಗಾರರು ಹಾಗೂ ಜನಸಾಮಾನ್ಯರ ಬೆಂಬಲವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಜಮೀನು ರಕ್ಷಣೆಗಾಗಿ ನಡೆಯುತ್ತಿರುವ ಎಲ್ಲ ನ್ಯಾಯಬದ್ಧ ರೈತ ಹೋರಾಟಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ರೈತರು ಮತ್ತು ಹೋರಾಟಗಾರರು ಒಕ್ಕೊರಲಿನಿಂದ ಸಂಕಲ್ಪ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘದ ಜಿ.ಜಿ. ಹಳ್ಳಿ ನಾರಾಯಣಸ್ವಾಮಿ, ಕೆಪಿಆರ್ಎಸ್ (KPRS) ಮುಖಂಡರಾದ ಚಂದ್ರ ತೇಜಸ್ವಿ ಮತ್ತು ಪ್ರಭಾ ಬೆಳವಂಗಲ, ಪ್ರಮುಖ ಹೋರಾಟಗಾರ ಕಾರಳ್ಳಿ ಶ್ರೀನಿವಾಸ್, ಸಮಿತಿಯ ಮುಖಂಡರಾದ ನಂಜಪ್ಪ, ವೆಂಕಟೇಶ್, ಅಶ್ವಥಪ್ಪ ಸೇರಿದಂತೆ 13 ಹಳ್ಳಿಗಳ ನೂರಾರು ರೈತರು ಹಾಗೂ ಭೂ ಹೋರಾಟದ ಯಶಸ್ಸಿಗೆ ಕಾರಣರಾದ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೋರಾಟಗಾರರು, ಸಂಯುಕ್ತ ಹೋರಾಟ ಕರ್ನಾಟಕ, ಸಮಾನ ಮನಸ್ಕ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಪರಿಸರ ತಜ್ಞರು ಹಾಗೂ ಪ್ರಗತಿಪರ ಚಿಂತಕರು ಭಾಗಿಯಾಗಿದ್ದರು. ಹೋರಾಟದ ಸಮಯದಲ್ಲಿ ಅವರೆಲ್ಲರೂ ನೀಡಿದ್ದ ಕೊಡುಗೆಯನ್ನು ಸ್ಮರಿಸಲಾಗಿದೆ.



