ವಿಶ್ವದಲ್ಲಿ ವಾಹನ ಸಂಚಾರ ದಟ್ಟಣೆಗೆ ರಾಜಧಾನಿ ಬೆಂಗಳೂರು ಕುಖ್ಯಾತಿ ಗಳಿಸಿದೆ. ಸದ್ಯ ನಗರದಲ್ಲಿ ಉಂಟಾಗುವ ವಾಹನ ಸಂಚಾರ ದಟ್ಟಣೆಯನ್ನು ನಿಭಾಯಿಸುವಲ್ಲಿ ‘ನಮ್ಮ ಮೆಟ್ರೋ’ ಪಾತ್ರ ಬಹುದೊಡ್ಡದಾಗಿದೆ. ನಿತ್ಯ ಮೆಟ್ರೋದಲ್ಲಿ 7 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಹೆಚ್ಚು ಜನಸಂದಣಿ ಇರುವ ನಮ್ಮ ಮೆಟ್ರೋದಲ್ಲಿ ಟಿಕೆಟ್ ಖರೀದಿಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದ್ದು, ಟೋಕನ್ ದರಕ್ಕಿಂತ ಶೇ.5 ರಿಯಾಯಿತಿಯಲ್ಲಿ ನವೆಂಬರ್ 16 ರಿಂದ ಮೊಬೈಲ್ ಕ್ಯೂಆರ್ ಗ್ರೂಪ್ ಟಿಕೆಟ್‌ಗಳ ಪರಿಚಯ ಮಾಡಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, “ಪ್ರಸ್ತುತ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ (ನಮ್ಮ ಮೆಟ್ರೋ, ಪೇಟಿಎಂ, ವಾಟ್ಸ್‌ಆಪ್ ಮತ್ತು ಯಾತ್ರಾ) ಒಬ್ಬ ಪ್ರಯಾಣಿಕನಿಗೆ ಒಂದು ಪ್ರಯಾಣಕ್ಕೆ ನೀಡಲಾಗುತ್ತಿದೆ” ಎಂದು ಹೇಳಿದೆ.
“ಆದರೆ, ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ನ.16 ರಿಂದ ಜಾರಿಗೆ ಬರುವಂತೆ ಒಮ್ಮೆ ಆರು ಜನರ ಕುಟುಂಬ/ಗುಂಪು ಪ್ರಯಾಣಿಸಲು ಅನುಕೂಲವಾಗುವಂತೆ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ಟೋಕನ್ ದರಕ್ಕಿಂತ ಶೇ.5 ರಿಯಾಯಿತಿಯನ್ನು ಹೊಂದಿರುತ್ತವೆ” ಎಂದು ತಿಳಿಸಿದೆ.
“ಈ ಸೌಲಭ್ಯವನ್ನು ಬಳಸುವ ಪ್ರಯಾಣಿಕರು ಪ್ರಯಾಣಿಕರ ಸಂಖ್ಯೆ, ಎನ್‌ಕ್ರಿಪ್ಟ್ ಮಾಡಿದ ಒಂದು ಕ್ಯೂಆರ್ ಟಿಕೆಟ್ ಅನ್ನು ಸ್ವೀಕರಿಸುತ್ತಾರೆ. ಬಳಕೆಗಾಗಿ, ಈ ಕ್ಯೂಆರ್ ಟಿಕೆಟ್ ಅನ್ನು ಗುಂಪಿನ ಪ್ರತಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಎಫ್ ಸಿ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಬೇಕು” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಎರಡು ಬೈಕ್ ಮುಖಾಮುಖಿ ಢಿಕ್ಕಿ; ಇಬ್ಬರು ಸಾವು
“ಟಿಕೆಟ್ ಕೌಂಟರ್‌ಗಳಲ್ಲಿ ಟೋಕನ್‌ಗಳನ್ನು ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು, ಪಯಾಣಿಕರು ತಮ್ಮ ಅನೂಕೂಲಕ್ಕೆ ತಕ್ಕಂತೆ ಮನೆ/ಕಚೇರಿಯಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಪಡೆಯಬಹುದು” ಎಂದು ತಿಳಿಸಿದೆ.