ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕರಾವಳಿ ಭಾಗದ ಸಾಂಪ್ರದಾಯಿಕ ಆಟ ಕಂಬಳ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.
ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.
ನವೆಂಬರ್ 24, 25 ಹಾಗೂ 26 ಒಟ್ಟು ಮೂರು ದಿನಗಳ ಕಾಲ ಕಂಬಳ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಸಲು ಚಿಂತನೆ ನಡೆಸಲಾಗಿದ್ದು, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಕಂಬಳ ವೀಕ್ಷಣೆಗೆ ಬರಲಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಕಂಬಳ ಮಾಡಲು ತುಳುಕೂಟ ನಿರ್ಧರಿಸಿದೆ. ನಗರದ ಅರಮನೆ ಮೈದಾನದಲ್ಲಿ ಕಂಬಳ ನಡೆಸಲು ಈಗಾಗಲೇ ಜಾಗ ಗುರುತು ಮಾಡಿದ್ದು, ಈ ಬಗ್ಗೆ ಮೈಸೂರು ಒಡೆಯರ್ ಅವರಿಗೆ ತಿಳಿಸಿ, ಅವರ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ರಾಜಧಾನಿಯಲ್ಲಿ ಈ ವರ್ಷ ನಡೆಯುವ ಕಂಬಳಕ್ಕೆ 150 ಜೋಡಿಯ ಕೋಣಗಳು ಬರಲಿವೆ. ಅಂದಾಜು 5 ಲಕ್ಷಕ್ಕೂ ಹೆಚ್ಚು ಜನರು ಕಂಬಳ ವೀಕ್ಷಣೆಗೆ ಬರುವ ಸಾಧ್ಯತೆ ಇದೆ. ಕಂಬಳಕ್ಕೆ ಬರುವ ಕೋಣಗಳಿಗೆ ಸಕಲೇಶಪುರ, ಹಾಸನ ಹಾಗೂ ನೆಲಮಂಗಲದಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದೆ. ಕಂಬಳಕ್ಕೆ ಒಂದು ದಿನ ಮುಂಚಿತವಾಗಿ ಅವು ಬೆಂಗಳೂರಿಗೆ ಬರಲಿವೆ. ಕಂಬಳಕ್ಕೆ ಬೇಕಾದ ಕೆಸರು ಗದ್ದೆಯನ್ನ ಸಿದ್ಧ ಮಾಡಲು ಮಣ್ಣಿನ ಟೆಸ್ಟಿಂಗ್ ಹಾಗೂ ನೀರಿನ ಟೆಸ್ಟಿಂಗ್ ಮುಗಿದಿದೆ. ಕಂಬಳ ವೀಕ್ಷಣೆಗೆ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಬರುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿಯಲ್ಲಿ ಸರ್ಕಾರಿ ಪ್ರಮಾಣೀಕೃತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರ ಶೀಘ್ರದಲ್ಲೇ ಆರಂಭ
ಏನಿದು ಕಂಬಳ?
ಕಂಬಳ ಕರಾವಳಿ ಕರ್ನಾಟಕದ ಒಂದು ಜನಪದ ಕ್ರೀಡೆ. ದಷ್ಟಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ನಡೆಸುತ್ತಾರೆ. ಸಾಮಾನ್ಯವಾಗಿ ಈ ಕಂಬಳವನ್ನ ರೈತಾಪಿ ಜನರು ಭತ್ತದ ಕೊಯಿಲಿನ ನಂತರದಲ್ಲಿ ಮನರಂಜನೆಗೋಸ್ಕರ ಏರ್ಪಡಿಸುತ್ತಾರೆ.
ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ, ವಿಜೇತರಾದವರನ್ನು ಸನ್ಮಾನಿಸಲಾಗುತ್ತದೆ. ಇದರ ಹಿಂದೆ ಕೃಷಿಕರ ಕ್ರೀಡಾ ಮನೋಭಾವಿದೆ.
ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆಪ ಎನ್ನಲಾಗಿದೆ. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಚಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್ನಲ್ಲಿ ಮುಗಿಯುತ್ತದೆ.