ರಾಜಸ್ಥಾನ ಚುನಾವಣೆ | ಬಿಜೆಪಿ ‘ಪಿಎಂ-ಸಿಎಂ’ ಕದನದಲ್ಲಿ ಕಾಂಗ್ರೆಸ್ ‘ಬಡವ-ಶ್ರೀಮಂತರ’ ಹೋರಾಟ

Date:

ರಾಜಸ್ಥಾನದಲ್ಲಿ ಸ್ಥಳೀಯ ನಾಯಕತ್ವವನ್ನು ಬದಿಗೊತ್ತಿ, ಮೋದಿಯವರ ಹೆಸರಿನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ರಾಜೇ ಅವರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಮೋದಿ ಹೆಸರನ್ನು ಮುಂದಿಟ್ಟು, ಪಿಎಂ-ಸಿಎಂ ಹಣಾಹಣಿ ಎಂಬುದನ್ನು ಅನಿವಾರ್ಯಗೊಳಿಸಿದೆ.

ಈ ವರ್ಷದ ಕೊನೆಯಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತೆ ಮರಳಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಇತ್ತ, 2020ರಲ್ಲಿ ಆಪರೇಷನ್‌ ಕಮಲ ನಡೆಸಲು ಮುಂದಾಗಿದ್ದ ಬಿಜೆಪಿ, ಈ ಚುನಾವಣೆಯಲ್ಲಾದರೂ ಶತಾಯಗತಾಯ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಳ್ಳಲೇಬೇಕೆಂದು ತಂತ್ರ ಹೆಣೆಯುತ್ತಿದೆ. ಅದಕ್ಕಾಗಿ, ಆ ರಾಜ್ಯದಲ್ಲಿ ನಾಲ್ಕು ಪರಿವರ್ತನಾ ಯಾತ್ರೆಗಳನ್ನು ಪ್ರಾರಂಭಿಸಿದೆ. ಆದರೆ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರನ್ನು ರಾಜ್ಯದ ಪ್ರಮುಖ ಮುಖವನ್ನಾಗಿ ತೋರಿಸುವುದನ್ನು ಉದ್ದೇಶಪೂರ್ವಕವಾಗಿ ತಡೆಯುತ್ತಿದೆ. ಮುಂದಿನ ಚುನಾವಣೆಯು ಪ್ರಧಾನಿ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರ ನಡುವಿನ ಕದನವೆಂಬಂತೆ ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ.

ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿಯೂ ಸ್ಥಳೀಯ ನಾಯಕತ್ವವೇ ಇಲ್ಲದೆ ಬಿಜೆಪಿ ಚುನಾವಣೆಯನ್ನು ಎದುರಿಸಿತ್ತು. ಮೋದಿ ಅವರನ್ನೇ ಚುನಾವಣಾ ಪ್ರಚಾರದ ಮುಖವನ್ನಾಗಿ ಮಾಡಿತ್ತು. ಆದರೆ, ಕರ್ನಾಟಕದ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದರು. ಆದರೂ, ಈಗ ರಾಜಸ್ಥಾನದಲ್ಲಿಯೂ ಸ್ಥಳೀಯ ನಾಯಕತ್ವವನ್ನು ಬದಿಗೊತ್ತಿ, ಮೋದಿಯವರ ಹೆಸರಿನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ರಾಜೇ ಅವರನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ಮೋದಿ ಹೆಸರನ್ನು ಮುಂದೆ ಬಿಟ್ಟಿರುವ ಬಿಜೆಪಿ, ಪಿಎಂ-ಸಿಎಂ ಹಣಾಹಣಿ ಎಂಬುದನ್ನು ಅನಿವಾರ್ಯಗೊಳಿಸಿದೆ.

ಮುಖ್ಯಮಂತ್ರಿ ಗೆಹ್ಲೋಟ್ ಅವರು ತಮ್ಮ ಕಲ್ಯಾಣ ಯೋಜನೆಗಳ ಮೂಲಕ ರಾಜ್ಯದ ಜನರನ್ನು ತಲುಪುತ್ತಿದ್ದಾರೆ. ಅದರೊಂದಿಗೆ ಈ ಹಿಂದಿನ ಸಂಪ್ರದಾಯವನ್ನು ಮುರಿಯಲು ಶ್ರಮಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಧಿಕಾರದಲ್ಲಿದ್ದಾಗ ತಮ್ಮ ವಿರೋಧಿ ಪಡೆಯ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುವಲ್ಲಿ ಮುಖ್ಯಮಂತ್ರಿ ಗೆಹ್ಲೋಟ್‌ ಅಸಮರ್ಥರಾಗಿರುವುದನ್ನು ಇಲ್ಲಿಯವರೆಗಿನ ಚುನಾವಣೆಗಳು ಹೇಳುತ್ತವೆ. ಅವರು ಮುಖ್ಯಮಂತ್ರಿಯಾಗಿದ್ದುಕೊಂಡು ಎದುರಿಸಿದ್ದ 2003 ಮತ್ತು 2013ರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಆ ಚುನಾವಣೆಗಳಲ್ಲಿಯೂ ಅವರು ತಮ್ಮ ಸರ್ಕಾರ ಜಾರಿಗೆ ತಂದಿದ್ದ ಕಲ್ಯಾಣ ಯೋಜನೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುಸಿದ್ದರು. ಆದರೂ, ಜನರು ಸತತ ಎರಡನೇ ಬಾರಿಗೆ ಕಾಂಗ್ರೆಸ್‌ಗೆ ಅಧಿಕಾರ ನೀಡಲಿಲ್ಲ. ಹೀಗಾಗಿ, ಆ ಸಂಪ್ರದಾಯವನ್ನು ಈ ಬಾರಿ ಮುರಿಯಲೇಬೇಕೆಂಬ ಪ್ರಯತ್ನವನ್ನು ಗೆಹ್ಲೋಟ್ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿಯು ಪ್ರಧಾನಿ ಮೋದಿಯವರ ಮುಖವನ್ನು ಅವಲಂಬಿಸಿ ತನ್ನ ಆಂತರಿಕ ಬಿರುಕುಗಳನ್ನು ಮುಚ್ಚಲು ಪ್ರಯತ್ನಿಸುತ್ತಿದೆ. ಹೀಗಾಗಿ, ರಾಜಸ್ಥಾನದ ರಾಜಕೀಯವು ದೇಶದ ಚಿತ್ತವನ್ನು ಸೆಳೆಯುತ್ತಿದೆ.

ಇದೆಲ್ಲದರ ನಡುವೆ ಇತ್ತೀಚೆಗೆ ನಡೆದಿರುವ ಕೆಲವು ಸಮೀಕ್ಷೆಗಳು, ‘ಗೆಹ್ಲೋಟ್‌ ಅವರ ಪ್ರಯತ್ನಗಳು ಬಿಜೆಪಿಗಿಂತ ಮುಂದಿವೆ. ಕಾಂಗ್ರೆಸ್‌ನತ್ತ ಜನರ ಒಲವಿದೆ. ಇದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ನೀಡಬಹುದು’ ಎಂದು ಹೇಳುತ್ತಿವೆ.

ಕಲ್ಯಾಣ ಕಾರ್ಯಕ್ರಮಗಳನ್ನು ಜನರತ್ತ ಕೊಂಡೊಯ್ಯುವುದರ ಹೊರತಾಗಿಯೂ, ಗೆಹ್ಲೋಟ್ ಅವರ ಕಾರ್ಯತಂತ್ರದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಈ ಚುನಾವಣೆಯನ್ನು ಬಿಜೆಪಿ ಪಿಎಂ-ಸಿಎಂ ಕದನವೆಂದು ನಿರೂಪಿಸಿಲು ಯತ್ನಿಸುತ್ತಿದೆ. ಇತ್ತ ಗೆಹ್ಲೋಟ್‌ ಅವರು ಬಡವರು (ತಮ್ಮ ಯೋಜನೆಗಳ ಫಲಾನುಭವಿಗಳು) ಮತ್ತು ಶ್ರೀಮಂತರ (ಪ್ರಧಾನಿ ಮೋದಿ ಮತ್ತು ಬಿಜೆಪಿ ಬೆಂಬಲಿತರು) ನಡುವಿನ ಹೋರಾಟವೆಂದು ಪ್ರಸ್ತುತಪಡಿಸುತ್ತಿದ್ದಾರೆ. ತಮ್ಮ ಸರ್ಕಾರ ಬಡವರು ಮತ್ತು ಹಿಂದುಳಿದವರ ಪರವಾಗಿದೆ ಎಂದು ಒತ್ತಿ ಹೇಳುತ್ತಿದ್ದಾರೆ. ಬಿಜೆಪಿಯನ್ನು ಶ್ರೀಮಂತರ ಮತ್ತು ಉಳ್ಳವರ ಪಕ್ಷವೆಂದು ಟೀಕಿಸುತ್ತಿದ್ದಾರೆ.

ಮೋದಿಗಿಂತ ನಾನೇ ಫಕೀರ’ ಎನ್ನುತ್ತಿರುವ ಗೆಹ್ಲೋಟ್

‘ಶ್ರೀಮಂತರ ವಿರುದ್ಧ ಬಡವರ’ ಸ್ಪರ್ಧೆಯಾಗಿ ಚುನಾವಣೆಯನ್ನು ಬಿಂಬಿಸಲು ಕಾಂಗ್ರೆಸ್‌ ತನ್ನ ಯೋಜನೆಗಳನ್ನು ಮುನ್ನೆಲೆಯಲ್ಲಿಟ್ಟಿದೆ. ತನ್ನ ಮಹತ್ವಾಕಾಂಕ್ಷೆಯ ಚಿರಂಜೀವಿ ಆರೋಗ್ಯ ಯೋಜನೆ, ಕೇವಲ 500 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒದಗಿಸುವುದು ಮತ್ತು ಹಳೆಯ ಪಿಂಚಣಿ ಯೋಜನೆಯ ಪುನರುಜ್ಜೀವನದಂತಹ ಪ್ರಯತ್ನಗಳನ್ನು ಕಾಂಗ್ರೆಸ್‌ ಮಾಡುತ್ತಿದ್ದು, ಅವನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುತ್ತಿದೆ.

ತನ್ನ ಸರ್ಕಾರದ ಪ್ರತಿಷ್ಠೆಯನ್ನು ಹಾಳುಮಾಡುವಂತಹ ಮೋದಿ ವಾಕ್ಚಾತುರ್ಯವನ್ನು ಎದುರಿಸಲು, ಗೆಹ್ಲೋಟ್ ಬಡವರ ಹಕ್ಕುಗಳನ್ನು ಪ್ರತಿಪಾದಿಸುವ ಬಲವಾದ ನಿರೂಪಣೆಯನ್ನು ರೂಪಿಸುತ್ತಿದ್ದಾರೆ; ಸುಮಾರು ಒಂದು ದಶಕದ ಕಾಲ ಕೇಂದ್ರದಲ್ಲಿ ಕೇಸರಿ ಪಡೆಯು ಆಡಳಿತ ನಡೆಸಿದ್ದು, ಈ ಅವಧಿಯಲ್ಲಿ ದೇಶದಲ್ಲಿ ಅಸಮಾನತೆ ಹೆಚ್ಚಾಗಿದೆ ಎಂಬ ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆ.

ರಾಜಕೀಯ ಕ್ಷೇತ್ರಕ್ಕೆ ಶ್ರೀಮಂತ-ಬಡವ ನಿರೂಪಣೆಯನ್ನು ಮುಂದಿಡುವಾಗ ಗೆಹ್ಲೋಟ್ ಅವರು ತನ್ನ ಮತ್ತು ಮೋದಿ ನಡುವಿನ ಗಮನಾರ್ಹ ವ್ಯತ್ಯಾಸವನ್ನು ಪ್ರತಿಬಿಂಬಿಸುವುದನ್ನೂ ಜಾಗರೂಕತೆಯಿಂದ ಮಾಡುತ್ತಿದ್ದಾರೆ. ‘ನಾನು ಮೋದಿಗಿಂತ ದೊಡ್ಡ ಫಕೀರ’ ಎಂಬ ಆಕರ್ಷಕ ಪದಗಳನ್ನು ಅವರು ಬಳಸುತ್ತಿದ್ದಾರೆ.

ಜೊತೆಗೆ, ಮೋದಿ ನಿಜವಾಗಿಯೂ ‘ವಿಶ್ವಗುರು’, ಜಾಗತಿಕ ನಾಯಕರಾಗಿದ್ದರೆ ರಾಜಸ್ಥಾನ ಪ್ರಚಾರದ ಹಿಡಿತವನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. “ಮೋದಿ ಅವರು ಒಮ್ಮೆ ಧರಿಸಿದ ಉಡುಗೆಗಳನ್ನು ಮತ್ತೊಮ್ಮೆ ಧರಿಸುವುದಿಲ್ಲ. ಅವರು ದಿನಕ್ಕೆ ಎಷ್ಟು ಬಾರಿ ತಮ್ಮ ಬಟ್ಟೆಯನ್ನು ಬದಲಾಯಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ – ದಿನಕ್ಕೆ ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ ಬದಲಿಸಬಹುದು. ಆದರೆ, ನನ್ನ ಉಡುಗೆ ಯಾವಾಗಲೂ ಒಂದೇ ಆಗಿರುತ್ತದೆ” ಎಂದು ಅವರು ಹೇಳಿದ್ದಾರೆ.

“ನಾನು ನನ್ನ ಜೀವನದಲ್ಲಿ ಒಂದು ಫ್ಲಾಟ್ ಅನ್ನೂ ಖರೀದಿಸಿಲ್ಲ ಅಥವಾ ಒಂದು ಗ್ರಾಂ ಚಿನ್ನವನ್ನೂ ಖರೀದಿಸಿಲ್ಲ. ಆದರೆ, ಮೋದಿಯವರ ಕನ್ನಡಕಕ್ಕೆ 2.5 ಲಕ್ಷ ರೂಪಾಯಿ ಬೆಲೆಯಿದೆ. ಅವರು ನನಗಿಂತ ದೊಡ್ಡ ಫಕೀರನಾಗಬಹುದೇ?” ಎಂದು ಗೆಹ್ಲೋಟ್ ಮಾರ್ಮಿಕ ನುಡಿಗಳನ್ನು ಆಡುತ್ತಿದ್ದಾರೆ.

ಈ ನಿರೂಪಣೆಯಲ್ಲಿ ಗೆಹ್ಲೋಟ್ ಅವರು ತಮ್ಮ ಗಾಂಧಿವಾದಿ ಸರಳತೆ ಮತ್ತು ಮೋದಿಯವರ ದುಬಾರಿ ಜೀವನಶೈಲಿಯ ನಡುವಿನ ಸಂಪೂರ್ಣ ವ್ಯತಿರಿಕ್ತತೆಯನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುತ್ತಿದ್ದಾರೆ.

ಮಾತ್ರವಲ್ಲದೆ, ತಾವು ರಾಜಸ್ಥಾನ ಮತ್ತು ಅಲ್ಲಿನ ಜನರ ವಿನಮ್ರ, ನಿಷ್ಠಾವಂತ ಸೇವಕನಾಗಿದ್ದರೆ, ಮೋದಿ ಅವರು ಚುನಾವಣೆಗಳು ಮುಗಿದ ನಂತರ ಕಣ್ಮರೆಯಾಗುವ ಹೊರಗಿನ ವ್ಯಕ್ತಿ ಎಂಬುದನ್ನು ಜನರ ಮನದಲ್ಲಿ ಉಳಿಯುವಂತೆ ಪ್ರಚಾರ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್

ಪರಸ್ಪರ ವಾಗ್ದಾಳಿಗಳು, ಆರೋಪ-ಪ್ರತ್ಯಾರೋಪಗಳ ಹೊರತಾಗಿಯೂ ಮತದಾರರು ತಮ್ಮತ್ತ ನೋಡುವಂತೆ ಮಾಡುವಲ್ಲಿ ಗೆಹ್ಲೋಟ್‌ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಹಿಳೆಯರಿಗೆ ಉಚಿತ ಸ್ಮಾರ್ಟ್‌ ಫೋನ್‌ಗಳನ್ನು ನೀಡುತ್ತಿದ್ದಾರೆ. ಈ ಕಾರ್ಯಕ್ರಮದ ಉದ್ದೇಶ – ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ನೆರವು ನೀಡುವುದು ಮತ್ತು ಫೋನ್‌ಗಳನ್ನು ಬಳಸಲು ಪುರುಷರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು – ಎಂದು ಅವರು ಹೇಳುತ್ತಾರೆ.

ಅದೇ ರೀತಿಯಲ್ಲಿ, ಮಹಿಳಾ ಮತದಾರರನ್ನು ಸೆಳೆಯುವ ಯೋಜನೆಯಾಗಿ – ಕೇವಲ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ನೀಡುವ ನಿರ್ಧಾರವನ್ನೂ ಕಾಂಗ್ರೆಸ್‌ ಸರ್ಕಾರ ಮಾಡಿದೆ. ಇತ್ತೀಚೆಗಷ್ಟೇ, ಕೇವಲ 8 ರೂ.ಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ‘ಇಂದಿರಾ ರಸೋಯಿ ಯೋಜನೆ ಗ್ರಾಮೀಣ್’ ಅನ್ನು ಪ್ರಾರಂಭಿಸಿದೆ. ಇದನ್ನು ರಾಜಸ್ಥಾನದಾದ್ಯಂತ ಅನುಷ್ಠಾನಕ್ಕೆ ತರಲಾಗಿದೆ.

‘ತಮ್ಮ ಸರ್ಕಾರವು ಬಡವರ ಪರವಾದ ಆಡಳಿತ ಮಾದರಿಯನ್ನು ಹೊಂದಿದೆ. ಕೊರೊನಾ ಸಂದರ್ಭದ ಯಶಸ್ವೀ ನಿರ್ವಹಣೆ, ಆನಂತರದಲ್ಲಿ 25 ಲಕ್ಷ ಆರೋಗ್ಯ ವಿಮೆ, ರೈತರಿಗೆ 200 ಯೂನಿಟ್ ಉಚಿತ ವಿದ್ಯುತ್, 100 ಯೂನಿಟ್ ಉಚಿತ ಗೃಹ ವಿದ್ಯುತ್, ಜಾನುವಾರು ಮತ್ತು ಅಪಘಾತ ವಿಮೆ, ನಗರ ಬಡವರಿಗೆ ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿಗೊಳಿಸಿದ್ದು ಸೇರಿದಂತೆ ಅನೇಕ ಯೋಜನೆಗಳು ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಿವೆ’ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ.

ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿಯ ತಂತ್ರ

ಗೆಹ್ಲೋಟ್ ಅವರ ನಿರೂಪಣೆ ಮತ್ತು ಕಲ್ಯಾಣ ಯೋಜನೆಗಳನ್ನು ಮರೆಮಾಚಲು ಬಿಜೆಪಿಯು ಭ್ರಷ್ಟಾಚಾರದ ಆರೋಪಗಳನ್ನು ಮುನ್ನೆಲೆಗೆ ತರುತ್ತಿದೆ. ಅದರಲ್ಲೂ ವಿಶೇಷವಾಗಿ ವಿವಾದಾತ್ಮಕ ‘ರೆಡ್ ಡೈರಿ’ ಗೆಹ್ಲೋಟ್ ಆಡಳಿತದ ಭ್ರಷ್ಟ ವ್ಯವಹಾರಗಳ ವಿವರಗಳನ್ನು ಹೊಂದಿದೆ ಎಂದು ಬಿಜೆಪಿ ಸೇರಿದ ಕಾಂಗ್ರೆಸ್‌ನ ಮಾಜಿ ಸಚಿವರೊಬ್ಬರು ಹೇಳಿಕೊಂಡಿದ್ದಾರೆ.

ಪರಿವರ್ತನಾ ಯಾತ್ರೆಗಳ ಸಂದರ್ಭದಲ್ಲಿ ಕೇಸರಿ ಪಡೆಯು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ವಿಷಯಗಳ ಮೇಲೆ ನಿರಂತರವಾಗಿ ಮಾತನಾಡುತ್ತಿದ್ದು, ಗೆಹ್ಲೋಟ್ ಅವರ ಆಡಳಿತವು ದೌರ್ಬಲ್ಯದಿಂದ ಕೂಡಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ?: ಭಾರತದಲ್ಲಿ ಭೂ ಸವಕಳಿ ತಡೆಯಲು ಬೇಕು ಹಲವು ಕ್ರಮ

ಅತ್ತ ಗೆಹ್ಲೋಟ್ ಅವರು ಮಹಿಳೆಯರಿಗೆ ಸ್ಮಾರ್ಟ್‌ ಫೋನ್‌ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ, ಮೋದಿ ಅವರು ಎಲ್‌ಪಿಜಿ ಮೇಲೆ 200 ರೂ. ಕಡಿತ ಮಾಡಿದ್ದೂ ರಾಜಸ್ಥಾನದಲ್ಲಿ ಗಮನಾರ್ಹ ವಿಷಯವಾಗಿದೆ.

ಎಲ್‌ಪಿಜಿ ಬೆಲೆ ಕಡಿತವನ್ನು ‘ಮಹಿಳೆಯರಿಗೆ ರಾಖಿ ಉಡುಗೊರೆ’ ಎಂದು ಪ್ರಚಾರ ಮಾಡುವುದು ಮಹಿಳಾ ಮತದಾರರನ್ನು ಬಿಜಿಪಿಯತ್ತ ಆಕರ್ಷಿಸುತ್ತದೆ ಎಂಬ ಉತ್ಸುಕತೆ ಕೇಸರಿ ಪಡೆಯಲ್ಲಿದೆ. ವಿಶೇಷವಾಗಿ, ರಾಜೇ ಅವರನ್ನು ಬದಿಗೆ ಸರಿಸಿದ ಬಳಿಕ ‘ರಾಖಿ ಉಡುಗೊರೆ’ ಪ್ರತಿಪಾದನೆಯು ರಾಜಸ್ಥಾನದಲ್ಲಿ ಹೆಚ್ಚು ಮುನ್ನೆಲೆಗೆ ಬಂದಿದೆ.

ಕರ್ನಾಟಕದಲ್ಲಿ ಯಡಿಯೂರಪ್ಪರನ್ನು ಹೊರಗಿಟ್ಟ ಬಿಜೆಪಿ ಭಾರೀ ಹೊಡೆತ ತಿಂದಿತ್ತು. ಆದರೂ, ರಾಜಸ್ಥಾನದಲ್ಲಿ ರಾಜೇ ಅವರನ್ನೂ ಪ್ರಚಾರದಿಂದ ಹೊರಗಿಟ್ಟಿದೆ. ಅಲ್ಲಿಯೂ ಕರ್ನಾಟಕದಂತೆಯೇ ಹೊಡೆತ ತಿನ್ನುವ ಸಾಧ್ಯತೆಗಳನ್ನು ಮೋದಿ-ಶಾ ಜೋಡಿ ಅರಿಯದೇ ಇರಲು ಸಾಧ್ಯವಿಲ್ಲ. ಆದರೂ, ರಾಜೇ ಅವರನ್ನು ಕಡೆಗಣಿಸಿ, ಬೇರೆಯದ್ದೇ ರೀತಿಯಲ್ಲಿ ಚುನಾವಣೆಯನ್ನು ಈ ಜೋಡಿ ಎದುರಿಸಲು ತಂತ್ರ ಹೆಣೆಯುತ್ತಿದೆ.

ಭಾರತದ ಅತಿ ದೊಡ್ಡ ರಾಜ್ಯವು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಲೋಕಸಭಾ ಚುನಾವಣೆಯನ್ನೂ ಎದುರಿಸಲಿದೆ. ಎರಡೂ ಚುನಾವಣೆಗಳು ಆಜು-ಬಾಜಿನಲ್ಲೇ ಎದುರಾಗಲಿದ್ದು, ವಿಧಾನಸಭಾ ಚುನಾವಣೆಯು ಮಹತ್ವ ಪಡೆದುಕೊಂಡಿದೆ.

ಮಾಹಿತಿ ಮೂಲ: ದಿ ಕ್ವಿಂಟ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೋಲಿಯೊ ನಿರ್ಮೂಲನೆ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದನ್ನ ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ....

ಚಿಕ್ಕಬಳ್ಳಾಪುರ | ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ

ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು...

ಗದಗ | ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಹೊಸ ಕಾನೂನು ಜಾರಿ: ಸಚಿವ ಎಚ್‌.ಕೆ ಪಾಟೀಲ್

ಬಡವರ, ಸಣ್ಣ ರೈತರ ಪ್ರಕರಣಗಳ ಪರಿಹಾರಕ್ಕಾಗಿ ಮಾರ್ಚ್ 4ರಂದು ರಾಜ್ಯಾದ್ಯಂತ ನೂತನ...

ಟಿಎಂಸಿಗೆ ಈಗಲೂ ಮೈತ್ರಿ ಬಾಗಿಲು ತೆರೆದಿದೆ: ಕಾಂಗ್ರೆಸ್ ಮುಖಂಡ

ಇಂಡಿಯಾ ಒಕ್ಕೂಟಕ್ಕೆ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಲ್ಲ 42...