ಕನ್ನಡ ಪತ್ರಿಕಾರಂಗದಲ್ಲಿ ಕ್ರೈಂ ಗಣೇಶ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ಗಣೇಶ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ಜೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕಳೆದ 20 ವರ್ಷಗಳಿಂದ ಕನ್ನಡ ಟಿವಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದ ಗಣೇಶ್ ಅವರು ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ. ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.
ಈ ಸುದ್ದಿ ಓದಿದ್ದೀರಾ? ಅವಿವಾಹಿತರಾಗಿದ್ದ ರತನ್; ಟಾಟಾ ಸಮೂಹಕ್ಕೆ ಉತ್ತರಾಧಿಕಾರಿ ಯಾರು?
ಕಸ್ತೂರಿ ಟಿವಿ ಮೂಲಕ ಗಣೇಶ್ ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದರು. ಕಸ್ತೂರಿ, ನ್ಯೂಸ್ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್ ಅವರು ಪ್ರಸ್ತುತ ಟಿವಿ 5ನಲ್ಲಿ ಇನ್‌ಪುಟ್ ಮುಖ್ಯಸ್ಥರಾಗಿ ಅಗಿ ಸೇವೆ ಸಲ್ಲಿಸುತ್ತಿದ್ದರು.
ಗಣೇಶ್ ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಕಂಬನಿ ಮಿಡಿದಿದೆ. ಅದೇ ರೀತಿ ಹಲವಾರು ಗಣ್ಯರು, ಹಿರಿಯ ಪೊಲೀಸ್ ಅಧಿಕಾರಿಗಳು ಗಣೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
