ಖರೀದಿದಾರರಿಗೆ ನಿವೇಶನ ಹಂಚಿಕೆ ಮಾಡದೆ ವಿಳಂಬ ಮಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) 12.5 ಲಕ್ಷ ರೂ. ದಂಡ ವಿಧಿಸಿದೆ. ಆ ಹಣವನ್ನು ಪರಿಹಾರವಾಗಿ ಖರೀದಿದಾರರಿಗೆ ನೀಡುವಂತೆ ಆದೇಶಿಸಿದೆ.
ಬೆಂಗಳೂರಿನ ಅರ್ಕಾವತಿ ಲೇಔಟ್‌ನಲ್ಲಿ ಬಿಡಿಎ ಅಭಿವೃದ್ಧಿ ಪಡಿಸಿದ ನಿವೇಶನವನ್ನು ವಿದ್ಯಾರಣ್ಯಪುರದ ನಿವಾಸಿ, ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಸುತಂತಿರಾಜ್ ಅವರು 2006ರಲ್ಲಿ ಖರೀದಿ ಮಾಡಿದ್ದರು. 60*40 ನಿವೇಶನಕ್ಕೆ 7,50,100 ರೂ. ಪಾವತಿ ಮಾಡಿದ್ದರು. 2017ರ ಜನವರಿಯಲ್ಲಿ ನಿವೇಶನ ಮಾರಾಟ ಪತ್ರವನ್ನೂ ನೋಂದಾಯಿಸಲಾಗಿತ್ತು. ಆದಾಗ್ಯೂ, ಈವರೆಗೆ ಸುತಂತಿರಾಜ್ ಅವರಿಗೆ ಬಿಡಿಎ ನಿವೇಶನ ಹಸ್ತಾತಂರ ಮಾಡಿರಲಿಲ್ಲ.
ನಿವೇಶನ ಹಸ್ತಾಂತರಿಸುವಲ್ಲಿ ಬಿಡಿಎ ಮಾಡುತ್ತಿರುವ ವಿಳಂಬವನ್ನು ಪ್ರಶ್ನಿಸಿ ಸುತಂತಿರಾಜ್ ಅವರು ಕೆ-ರೇರಾಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಕೆ-ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ ರವೀಂದ್ರನಾಥ ರೆಡ್ಡಿ ಅವರು ಬಿಡಿಎಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅರ್ಜಿದಾರ ಸುತಂತಿರಾಜ್ ಅವರಿಗೆ 12,43,792 ರೂ. ಪರಿಹಾರ ನೀಡುವಂತೆ ಬಿಡಿಎಗೆ ಆದೇಶಿಸಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರ ಸುತಂತಿರಾಜ್, “ನಿವೇಶನವನ್ನು ಹಸ್ತಾಂತರಿಸುವಂತೆ ಹಲವು ಬಾರಿ ಬಿಡಿಎಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಭೂಮಿಯ ಮೂಲ ವಾರಸುದಾರನಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ. ಅವರಿಗೆ ಪರಿಹಾರ ನೀಡುವವರೆಗೆ ನಿವೇಶನ ಹಸ್ತಾಂತರ ಸಾಧ್ಯವಿಲ್ಲವೆಂದು ಬಿಡಿಎ ಅಧಿಕಾರಿಗಳು ಸಬೂಬು ಹೇಳುತ್ತಲೇ ಇದ್ದರು. 2024ರ ಮಾರ್ಚ್‌ನಲ್ಲಿ ಸಮಸ್ಯೆಗಳು ಇತ್ಯರ್ಥವಾದರೂ, ನಮಗೆ ಹಸ್ತಾಂತರವಾಗಿಲ್ಲ” ಎಂದು ಹೇಳಿದ್ದಾರೆ.