ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವಲ್ಲಿ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಎಲೆ ಮರೆ ಕಾಯಿಯಂತೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸಿದ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಕೆಲಸ ಇದೀಗ ಬೆಳಕಿಗೆ ಬಂದಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಆರಂಭವಾದ ಈ ಶಿಬಿರ ನಡೆಸುವ ಕಾರ್ಯಕ್ರಮ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡಿದೆ. ಮಾತ್ರವಲ್ಲದೆ, ಅಪರಾಧ ತಡೆಗೂ ನೆರವಾಗಿದೆ ಎಂದು ಠಾಣೆಯ ಮೂಲಗಳು ತಿಳಿಸಿವೆ.
2023ರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಶಿಬಿರವನ್ನು 23 ದಿನಗಳ ಕಾಲ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ಎಲ್.ವೈ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸುಮಾರು 83 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿದ್ದರು.
ಸಬ್ ಇನ್ಸ್ ಪೆಕ್ಟರ್‌ಗಳಾದ ದುರ್ಗಾ ಭವಾನಿ, ಮುಜಾಮಿಲ್, ಈರಣ್ಣ ನಾನಾಜಗಿ ಸೇರಿದಂತೆ ಪೊಲೀಸ್ ತಂಡ ಗಾರ್ವೆಭಾವಿಪಾಳ್ಯದ ಖಾಸಗಿ ಶಾಲೆಯೊಂದರಲ್ಲಿ ಶಿಬಿರವನ್ನು ನಡೆಸಿದೆ. ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 3.30ರವರೆಗೆ ನಾನಾ ಖಾಸಗಿ ಶಾಲೆಗಳ ಎಂಟು ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಜೊತೆಗೆ, ಠಾಣೆಯೇ ಮಕ್ಕಳಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಿತ್ತು ಎಂದು ತಿಳಿದುಬಂದಿದೆ.
ತಂಡದ ಸದಸ್ಯರು ತಮ್ಮ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ ಹಾಗೂ ಇತರ ವಸ್ತುಗಳನ್ನು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ಕಾಮಗಾರಿ ವೇಳೆ ನೆಲಕ್ಕುರುಳಿದ ಕ್ರೇನ್; ತಪ್ಪಿದ ಭಾರಿ ಅನಾಹುತ
“ಸುಮಾರು 40 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಇನ್ನುಳಿದ 40 ವಿದ್ಯಾರ್ಥಿಗಳು ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಗಣಿತದಲ್ಲಿ ಅನುತ್ತೀರ್ಣರಾಗಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
“ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾದ ಕಾರಣ ಹೆಚ್ಚಿನ ಶಿಕ್ಷಕರನ್ನು ಸಂಪರ್ಕಿಸಿದ್ದೇವೆ. ಶಿಬಿರಕ್ಕೆ ಸೇರಲು ಶಿಕ್ಷಕರು ತಕ್ಷಣ ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ತರಗತಿಗಳನ್ನು ತೆಗೆದುಕೊಂಡ 81 ವಿದ್ಯಾರ್ಥಿಗಳಲ್ಲಿ ಸುಮಾರು 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರು ಅಧ್ಯಯನವನ್ನು ಮುಂದುವರೆಸುತ್ತಿದ್ದಾರೆ” ಎಂದು ರಾಜೇಶ್ ಹೇಳಿದರು.