ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಷಿಪ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನೀರಜ್ ಚೋಪ್ರಾ ನೂತನ ಇತಿಹಾಸ ನಿರ್ಮಿಸಿದರು. ಈ ಐತಿಹಾಸಿಕ ಸಾಧನೆಗೆ ಇಡೀ ಭಾರತೀಯರು ಸಲಾಮ್ ಹೊಡೆದಿದ್ದಾರೆ. ಈ ಮಧ್ಯೆ ಕರ್ನಾಟಕದ ಹೆಮ್ಮೆಯ ಕನ್ನಡಿಗ ಡಿ.ಪಿ ಮನು ಕೂಡ ಗಮನ ಸೆಳೆದಿದ್ದು, ಜಾವೆಲಿನ್ ಥ್ರೋ ಫೈನಲ್ನಲ್ಲಿ 84.14 ಮೀ. ದೂರಕ್ಕೆ ಭರ್ಜಿ ಎಸೆದು 6ನೇ ಸ್ಥಾನ ಪಡೆದರು. ಅವರಿಗೆ ಅಗತ್ಯದ ಬೆಂಬಲ ಸಿಕ್ಕರೆ ಮುಂದೊಂದು ದಿನ ಕನ್ನಡಿಗ ಭಾರತಕ್ಕೆ ಐತಿಹಾಸಿಕ ಪದಕ ಗೆದ್ದುಕೊಡುತ್ತಾನೆ. ಅವರಿಗೆ ರಾಜ್ಯ ಸರ್ಕಾರ ನೆರವು ನೀಡಿ ಆ ಇತಿಹಾಸಕ್ಕೆ ಮುನ್ನಡಿ ಬರೆಯುವ ಕೆಲಸ ಆಗಬೇಕಿದೆ ಎಂದು ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಮೋಹನ್ ದಾಸರಿ ಸಿಎಂ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮೋಹನ್ ದಾಸರಿ, “ವಿಶ್ವ ಚಾಂಪಿಯನ್ಶಿಪ್ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಫೈನಲ್ ತಲುಪಿ ಉತ್ತಮ ಪ್ರದರ್ಶನ ನೀಡಿ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಕನ್ನಡಿಗ ಹಾಸನ ಜಿಲ್ಲೆ, ಬೇಲೂರು ತಾಲೂಕು, ಕುಪ್ಪಗೋಡು ಗ್ರಾಮದ ಡಿ.ಪಿ.ಮನು ಅವರಿಗೆ ಅಭಿನಂದನೆಗಳು. ಸಿಎಂ ಸಿದ್ದರಾಮಯ್ಯನವರೇ, ಮುಂದೊಂದು ದಿನ ಪದಕ ಗೆಲ್ಲಲು ನಿಮ್ಮಿಂದ ಡಿಪಿ ಮನುರವರಿಗೆ ಬೇಕಾದ ಎಲ್ಲ ತರಹದ ಸಹಕಾರ ನೀಡಿ” ಎಂದು ಟ್ವೀಟ್ ಮಾಡಿದ್ದಾರೆ.
“ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾರಿಗೆ, ನೀವೆಲ್ಲರೂ ಅಭಿನಂದನೆ ಸಲ್ಲಿಸಿರುತ್ತೀರಿ, ಒಳ್ಳೆಯದು. ನೀರಜ್ ಚೋಪ್ರಾ ಅವರ ಜತೆಗೆ ನಮ್ಮ ರಾಜ್ಯದ ಹಾಸನದ ಹುಡುಗ ಡಿ.ಪಿ ಮನು ರವರೂ ಭಾಗವಹಿಸಿದ್ದರು ಅಂತ ನಿಮಗೆ ಗೊತ್ತಿದೆಯೆ..?” ಎಂದು ಕೇಳಿದ್ದಾರೆ.
“ಅವರು ಭಾಗವಹಿಸುತ್ತಿರುವ ಸಮಯದಲ್ಲಾಗಲಿ, ಫೈನಲ್ ಆಡುವುದಕ್ಕೆ ಅರ್ಹತೆ ಪಡೆದಾಗಲಿ, ಫೈನಲ್ ನಲ್ಲಿ ಗೆದ್ದು ಬನ್ನಿ ಅಂತಾಗಲಿ ಮತ್ತು ಫೈನಲ್ ನಲ್ಲಿ ಪ್ರಪಂಚಕ್ಕೆ 6ನೇ ಸ್ಥಾನಕ್ಕೆ ಗೆದ್ದಾದ ಮೇಲಾಗಲಿ ನೀವುಗಳು ಯಾರೂ ಮನುರವರ ಪರವಾಗಿ ಯಾವುದೇ ರೀತಿಯ ಪ್ರೋತ್ಸಾಹದ ಮಾತುಗಳಾಗಲಿ, ಅಭಿನಂದನೆಗಳಾಗಲಿ ಸಲ್ಲಿಸಿರುವುದಿಲ್ಲ” ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಅಗ್ನಿ ಅವಘಡ | ಮುಖ್ಯ ಎಂಜಿನಿಯರ್ ಪ್ರಹ್ಲಾದ್ಗೆ ಮತ್ತೊಮ್ಮೆ ನೋಟಿಸ್ ಜಾರಿ ಸಾಧ್ಯತೆ
“ಡಿಪಿ ಮನುರವರು ಪ್ರಪಂಚ ಮಟ್ಟದಲ್ಲಿ, ಒಂದು ಕಡೆ ದೇಶವನ್ನು ಪ್ರತಿನಿಧಿಸುತ್ತಿದ್ದರೆ, ಅದೇ ಸಮಯದಲ್ಲಿ 7 ಕೋಟಿ ಕನ್ನಡಿಗರನ್ನೂ ಪ್ರತಿನಿಧಿಸುತ್ತಿದ್ದಾರೆ. ನೀವುಗಳು ಅಷ್ಟೊಂದು ಉನ್ನತ ಮಟ್ಟದಲ್ಲಿರುವವರು ಪ್ರೋತ್ಸಾಹ ನೀಡದಿದ್ದರೆ ಮತ್ತಾರು ನೀಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
“ಕನ್ನಡ, ಕನ್ನಡಿಗ, ಕರ್ನಾಟಕ ಅಂತ ಚುನಾವಣೆಗಾಗಿ ಮಾತ್ರ ಮಾತನಾಡುವುದಲ್ಲ ಕನ್ನಡತನವೆಂದರೆ, ಅದನ್ನು ಪ್ರತಿ ವಿಷಯದಲ್ಲೂ ಮಾಡಿ ತೋರಿಸಬೇಕು. ಇನ್ನೂ ಸಮಯ ಮೀರಿಲ್ಲ, ಡಿಪಿ ಮನುರವರನ್ನು ಪ್ರೊತ್ಸಾಹಿಸಿ, ಅಭಿನಂದಿಸಿ, ಮುಂದಿನ ತರಬೇತಿಗೆ ಎಲ್ಲ ರೀತಿಯ ಸೌಲಭ್ಯ ಸಹಕಾರ ನೀಡಿ, ಮುಂದೊಂದು ದಿನ ಭಾರತಕ್ಕೆ ಪದಕ ಗೆದ್ದು ರಾಜ್ಯದ ಹೆಮ್ಮೆಯ ಮಗನಾಗಲಿ” ಎಂದು ಹಾರೈಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಈ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.