- ಸಿಸಿಬಿ ಅಧಿಕಾರಿಗಳ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಆರೋಪಿಗಳಿಂದ ಜಪ್ತಿ ಮಾಡಿದ್ದ ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದ ಎಸ್‌ಐಟಿ
2020ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿದ್ದ ಸಿಸಿಬಿ ಅಧಿಕಾರಿಗಳ ವಿರುದ್ಧವೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸದ್ಯ ಈ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಗೆ ಒಳಪಡಿಸಲಾಗಿದೆ. ಹ್ಯಾಕರ್ ಶ್ರೀಕೃಷ್ಣ ಹಾಗೂ ಇತರರ ವಿರುದ್ಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೀಗ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧವೇ ಆರೋಪ ಕೇಳಿಬಂದಿದೆ.
ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಡಿವೈಎಸ್ಪಿ ಕೆ.ರವಿಶಂಕರ್ ಅವರು ಈ ಬಗ್ಗೆ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ಆಗಸ್ಟ್ 9ರಂದು ದೂರು ನೀಡಿದ್ದಾರೆ.
“ಸಿಸಿಬಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿ ಮಾಡಲಾಗಿದ್ದ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಹಾಗೂ ಪೆನ್‌ಡ್ರೈವ್‌ಗಳಲ್ಲಿರುವ ಮೂಲ ಮಾಹಿತಿಯನ್ನು ತಿರುಚಿದ್ದಾರೆ. ಸಿಸಿಬಿ ಅಧಿಕಾರಿಗಳು ಹಾಗೂ ಇತರರು ಸಾಕ್ಷ್ಯ ನಾಶ ಮಾಡಿ, ಅಪರಾಧ ಮಾಡಿದ್ದಾರೆ” ಎಂದು ಎಸ್‌ಐಟಿ ಡಿವೈಎಸ್ಪಿ ಕೆ. ರವಿಶಂಕರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಚಲಾಯಿಸಿ ನಿಮ್ಮ ಹಕ್ಕನ್ನು, ಬದಲಾಯಿಸಿ ದೇಶದ ದಿಕ್ಕನ್ನು’ ಯುವ ಮತದಾರರಿಗಾಗಿ ಕಾಂಗ್ರೆಸ್ ಅಭಿಯಾನ
“2020ರ ಸೆಪ್ಟೆಂಬರ್ 9ರಿಂದ ಡಿಸೆಂಬರ್ 16ರವರೆಗಿನ ಅವಧಿಯಲ್ಲಿ ಸಿಸಿಬಿ ಕಚೇರಿ ಹಾಗೂ ಇತರೆಡೆ ಅಕ್ರಮ ನಡೆದಿದೆ. ಆರೋಪಿಗಳಿಂದ ಜಪ್ತಿ ಮಾಡಲಾಗಿದ್ದ ಎಲ್ಲ ವಸ್ತುಗಳನ್ನು ಸುಪರ್ದಿಗೆ ಪಡೆದಿದ್ದ ಎಸ್‌ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ವರದಿ ಬಂದಿದೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಹಾಗೂ ಆ್ಯಪ್ ಮ್ಯಾಕ್ ಬುಕ್‌ನಲ್ಲಿ ಮೂಲ ಫೈಲ್‌ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್‌ಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ, ಡಿಜಿಟಲ್ ಉಪಕರಣಗಳಲ್ಲಿ ಹೆಚ್ಚುವರಿಯಾಗಿ ಫೈಲ್ ಸೃಷ್ಟಿಸಿದ್ದಾರೆ” ಎಂದರು.
ಹಿಂದಿನ ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ