ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.2.07 ರಷ್ಟಿದ್ದು, ಡಿ.29 ರಂದು 173 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರ ಜತೆಗೆ ರಾಜ್ಯದಲ್ಲಿ ಓಮಿಕ್ರಾನ್ ಉಪತಳಿ ಜೆಎನ್.1 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ದಾಖಲಾಗುತ್ತಿರುವ ಹೊಸ ಕೊರೋನಾ ಪ್ರಕರಣಗಳಲ್ಲಿ ಶೇ.90 ರಷ್ಟು ಜೆಎನ್.1 ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಹಿನ್ನೆಲೆ, 2024ರ ಜನವರಿ 2ರಿಂದ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಆರಂಭ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ವ್ಯಾಕ್ಸಿನ್ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ನಿರ್ಧರಿಸಿದೆ. ಸದ್ಯ 15,800 ಲಸಿಕೆಯನ್ನು ರಾಜ್ಯ ಸರ್ಕಾರ ಈಗಾಗಲೇ ಖರೀದಿ ಮಾಡಿದ್ದು, ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಾಖಲಾಗುತ್ತಿರುವ ಹೊಸ ಕೊರೋನಾ ಪ್ರಕರಣಗಳಲ್ಲಿ ಶೇ.90 ರಷ್ಟು ಒಮಿಕ್ರಾನ್ ರೂಪಾಂತರಿ ಜೆಎನ್.1 ಅಂಶ ಪತ್ತೆಯಾಗುತ್ತಿದ್ದು, ಈಗಾಗಲೇ ಆರೋಗ್ಯ ಇಲಾಖೆ 197 ಸ್ಯಾಂಪಲ್ಸ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಕಳುಹಿಸಿದೆ. 60 ಸ್ಯಾಂಪಲ್ಸ್ಗಳ ವರದಿ ಪ್ರಕಾರ ಶೇ.50 ರಷ್ಟು ರೋಗಿಗಳಲ್ಲಿ ಜೆಎನ್1 ಅಂಶ ಕಂಡು ಬಂದಿದೆ.
ರಾಜ್ಯದಲ್ಲಿ ಈಗಾಗಲೇ ಮೊದಲ ಮತ್ತು ಎರಡನೇ ವ್ಯಾಕ್ಸಿನೇಶನ್ ಡೋಸ್ 100% ಮಾಡಲಾಗಿದೆ. ಆದರೆ, ಮುನ್ನೆಚ್ಚರಿಕಾ ವ್ಯಾಕ್ಸಿನ್(ಮೂರನೇ ಡೋಸ್) ಮಾತ್ರ ಶೇ.27 ಜನರು ಪಡೆದಿದ್ದಾರೆ. ಇನ್ನು ಈ ವ್ಯಾಕ್ಸಿನ್ ಹಾಕಿಸಿಕೊಳ್ಳಲು ರಾಜ್ಯದಲ್ಲಿ 1.5 ಕೋಟಿಗೂ ಹೆಚ್ಚಿನ ಜನ ಅರ್ಹತೆ ಪಡೆದಿದ್ದು, ಆದರೂ, ಮೂರನೇ ಡೋಸ್ ತೆಗೆದುಕೊಂಡಿಲ್ಲ. ಈ ಹಿನ್ನೆಲೆ, ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಸುದ್ದಿ ಓದಿದ್ದೀರಾ? ವೃದ್ಧೆಗೆ ವಂಚನೆ | ರಾಕಲೈನ್ ವೆಂಕಟೇಶ್ ಪುತ್ರ ಅಭಿಲಾಷ್‌ಗೆ ಮತ್ತೆ ನೋಟಿಸ್ ನೀಡಿದ ಸಿಸಿಬಿ
ಇನ್ನು ಕೋಮಾರ್ಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಯಾರು ಮೂರನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ, ಅವರು ಕೂಡಲೇ ವ್ಯಾಕ್ಸಿನ್ ಹಾಕಿಸಿಕ್ಕೊಳ್ಳಲು ಸರ್ಕಾರ ಸೂಚಿಸಿದೆ. ಲಸಿಕೆಗಳನ್ನು ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಮುಂದಾಗಿದೆ.