ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಾಷಣ ಮಾಡಿದ ಸ್ಥಳ ಶುದ್ದೀಕರಣದ ಮೂಲಕ ನೇರವಾಗಿ ಅಸ್ಪೃಷ್ಯತೆ ಆಚರಣೆ ಮಾಡಿದವರ ವಿರುದ್ಧ ಧ್ವನಿ ಎತ್ತಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಎಫ್ಐಆರ್ ದಾಖಲಿಸಿರುವುದು ಖಂಡನೀಯ. ಪೊಲೀಸ್ ಬಲದ ಮೂಲಕ ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಎಸ್ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ದುರುದ್ದೇಶಪೂರಿತವಾಗಿ ಸುಳ್ಳು ಎಫ್ಐಆರ್ ದಾಖಲಿಸಿರುವುದು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಮೈದಾನವನ್ನು ಶುದ್ಧೀಕರಿಸಿದ ಘಟನೆ ಖಂಡಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
“ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನ ಮೇಲ್ಮನೆ ಪ್ರತಿಪಕ್ಷ ನಾಯಕರು. ಅವರ ವಿರುದ್ಧ ಅಸ್ಪೃಶ್ಯತೆ ಧೋರಣೆ ಪ್ರದರ್ಶಿಸಿದ್ದರೆ, ಇದನ್ನು ಪ್ರಶ್ನಿಸಿದ ಕೆಳಮನೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ರಣಹೇಡಿತನದ ಕೃತ್ಯವಾಗಿದೆ. ಪರಮೋಚ್ಛ ವಿಪಕ್ಷ ನಾಯಕರ ಹಕ್ಕುಗಳಿಗೆ ಧಕ್ಕೆ ತರಲಾಗಿದೆ. ಈ ರಾಜಕೀಯ ಪ್ರೇರಿತ ಕ್ರಮದ ವಿರುದ್ಧ ದೇಶಾದ್ಯಂತ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಈ ಘಟನೆಗಳ ವಿರುದ್ಧ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಧ್ವನಿ ಎತ್ತಬೇಕು. ಬಿಜೆಪಿ ನಾಯಕರ ಮನುವಾದಿ ಸಿದ್ಧಾಂತ, ಅಸ್ಪೃಶ್ಯತೆ ಧೋರಣೆಯ ಮುಖವಾಡ ಕಳಚಬೇಕು. ಇದು ಮಾತಿನ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗೂ ವಿರೋಧ ಪಕ್ಷದ ಹಕ್ಕುಗಳ ವಿರುದ್ಧ ನಡೆಯುತ್ತಿರುವ ದೊಡ್ಡ ರಾಜಕೀಯ ಸಂಘರ್ಷದ ಹೊಸ ಅಧ್ಯಾಯವಾಗಿದೆ. ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಮಾತನಾಡುವುದು ಅಪರಾಧವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ರಾಹುಲ್ ಗಾಂಧಿ ಹೇಳಿಕೆ ತಪ್ಪಿದ್ದರೆ-ತನಿಖೆ ನಡೆಸಬಹುದಿತ್ತು. ಹೇಳಿಕೆ ತಪ್ಪು ಎಂಬುದನ್ನು ಸಾಬೀತುಪಡಿಸುವ ಬದಲು ಎಫ್ಐಆರ್ ಹಾಕಿ ಅದನ್ನೇ ರಾಜಕೀಯ ಆಯುಧವನ್ನಾಗಿ ಬಳಸಲಾಗುತ್ತಿದೆ. ಉತ್ತರಾಖಂಡದ ಹಲ್ದ್ವಾನಿ ‘ಶುದ್ಧೀಕರಣ’ ವಿವಾದಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿ ಪ್ರಜಾಪ್ರಭುತ್ವದ ಧ್ವನಿ ಅಡಗಿಸುವ ಹುನ್ನಾರ ಕಂಡು ಬಂದಿದ್ದು, ರಾಹುಲ್ ಬಗ್ಗೆ ಬಿಜೆಪಿಗೆ ಭಯ ಆವರಿಸಿದೆ” ಎಂದು ಹೇಳಿದರು.
“ಹಲ್ದ್ವಾನಿ ʼಶುದ್ಧೀಕರಣʼ ಘಟನೆಯನ್ನು ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯ ಮನೋಭಾವದೊಂದಿಗೆ ಜೋಡಿಸಿ, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಬೇಬೆಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದೇ ತಪ್ಪು ಎನಿಸಿದರೆ. ವಿಪಕ್ಷದ ನಾಯಕನಿಗೆ ಪ್ರಶ್ನಿಸುವ ಹಕ್ಕು ಇದಎಯೇ ಇಲ್ಲವೇ ಎಂಬುದು ನಿಜವಾದ ಅಗ್ನಿ ಪರೀಕ್ಷೆಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಸಂದೇಶ ನೀಡಿದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಅಪರಾಧವಲ್ಲ. ಪ್ರಶ್ನೆಗೆ ಉತ್ತರಿಸುವ ಸಾಮಥ್ರ್ಯವೇ ನಿಜವಾದ ರಾಜಕೀಯ ಶಕ್ತಿ” ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
“ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೌಹಾರ್ದತೆ ಮೂಡಿಸುವ ಕುರಿತು ಆಡಿರುವ ಅಭಿಪ್ರಾಯಗಳಿಗೂ ಉತ್ತರ ಖಂಡ ಪೊಲೀಸರ ವರ್ತನೆಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಭಾಗವತ್ ಅಮೆರಿಕ ನೆಲದಲ್ಲಿ ಹೊಸ ಅವತಾರ ಎತ್ತಿದ್ದಾರೆ. ಆರ್.ಎಸ್.ಎಸ್. ವಿರುದ್ಧ ಅಮೆರಿಕದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಸಂದರ್ಭದಲ್ಲಿ ಸೌಹಾರ್ದದ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಭಾಗವತ್ ಅವರ ಅಮೆರಿಕ ಪ್ರವಾಸವೇ ದೊಡ್ಡ ವಿವಾದದ ಕೇಂದ್ರವಾಗಿದೆ. ನ್ಯೂಯಾರ್ಕ್ ಸೇರಿ ಹಲವೆಡೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಅಮೆರಿಕದ ಸಂಘಟನೆಗಳು ಆರ್.ಎಸ್.ಎಸ್ ಮತ್ತು ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಗಂಭೀರ ಆರೋಪಗಳನ್ನು ಮುಂದಿಟ್ಟಿದೆ. ಭಾಗವತ್ ಅವರ ವೀಸಾ ರದ್ದುಪಡಿಸುವುದು ಸೇರಿದಂತೆ ಹಲವು ಕ್ರಮಗಳಿಗೆ ಶಿಫಾರಸು ಮಾಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಹುಲ್ ಗಾಂಧಿ ವಿರುದ್ಧದ ಎಫ್ಐಆರ್ಗೆ ಕೈ ಪಾಳೆಯ ಖಂಡನೆ: ರಾಜ್ಯಾದ್ಯಂತ ತೀವ್ರ ಹೋರಾಟದ ಎಚ್ಚರಿಕೆ
“ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ನಿಜವಾದ ಹಿಂದೂ ಅಲ್ಲ ಎಂಬ ಜ್ಞಾನೋದಯದ ಮಾತುಗಳನ್ನು ಹೇಳಿದ್ದಾರೆ. ದ್ವೇಷದ ಮನಸ್ಥಿತಿಯನ್ನು ಬಿತ್ತಿ ಇದೀಗ ಸೌಹಾರ್ದತೆಯ ಸೋಗು ಹಾಕುತ್ತಿರುವುದು ನಿಜಕ್ಕೂ ಖಂಡನೀಯ” ಎಂದು ಡಾ. ಆನಂದ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.





