ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡುತ್ತಿರುವುದರಿಂದ ಬೆಂಗಳೂರು ಪೊಲೀಸರು ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ. ಹಾಗೆಯೇ ಬದಲಿ ಮಾರ್ಗದ ಮಾಹಿತಿಯನ್ನೂ ನೀಡಿದ್ದಾರೆ.
“ವಿವಿಐಪಿಗಳು ಬೆಂಗಳೂರಿಗೆ ಭೇಟಿ ನೀಡುತ್ತಿರುವುದರಿಂದ, ಸುಗಮ ಸಂಚಾರಕ್ಕಾಗಿ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 2.30ರವರೆಗೆ ಈ ಕೆಳಗಿನ ಸಂಚಾರ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ನೈಸ್ ಟೋಲ್‌ನಲ್ಲಿ ಬನ್ನೇರುಘಟ್ಟ ರಸ್ತೆ ಕಡೆಗೆ ಸಾಗಬೇಕಾಗುತ್ತದೆ” ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನಾ ಕಾರ್ಯಕ್ರಮ: ಪತ್ರಕರ್ತರಿಗಿಲ್ಲ ವರದಿ ಮಾಡುವ ಅವಕಾಶ!
ಸಂಚಾರ ನಿರ್ಬಂಧಗಳು
ಬನ್ನೇರುಘಟ್ಟ ರಸ್ತೆ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಕನಕಪುರ ರಸ್ತೆ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ನಾಯಂಡಹಳ್ಳಿ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಸೋಂಪುರ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಪಿಇಎಸ್ ಕಾಲೇಜಿನ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಕೆಂಗೇರಿ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಮಾಗಡಿ ರಸ್ತೆ ನೈಸ್ ಟೋಲ್ ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ, ಮಾದವರ ರಸ್ತೆ ನೈಸ್ ಟೋಲ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್‌ಗೆ ಮತ್ತು ಪಾರ್ಲೆ ಬಿಸ್ಕೆಟ್ ಫಾಕ್ಟರಿ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ.
ತಾತ್ಕಾಲಿಕವಾಗಿ ರಸ್ತೆ ಬಂದ್
ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್ ಮತ್ತು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣಗಳು: ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆರ್‌ವಿ ರಸ್ತೆಗಳನ್ನು ಆಗಸ್ಟ್ 10 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಮುಚ್ಚಲಾಗುವುದು. ನಮ್ಮ ಮೆಟ್ರೋ ಪ್ರಯಾಣಿಕರು ತಾತ್ಕಾಲಿಕ ಮುಚ್ಚುವಿಕೆಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು
ನೈಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಸಾಗುವ ವಾಹನಗಳು, ನೆಲಮಂಗಲ ನೈಸ್ ಟೋಲ್-ಮಾಗಡಿ ರಸ್ತೆ ಮತ್ತು ನೈಸ್ ಟೋಲ್-ಕೆಂಗೇರಿ ನೈಸ್ ಟೋಲ್-ಕನಕಪುರ ನೈಸ್ ಟೋಲ್ ಮಾರ್ಗಗಳ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ಟೋಲ್‌ನಿಂದ ಬನ್ನೇರುಘಟ್ಟ ರಸ್ತೆಗೆ ಸಾಗುವಂತೆ ತಿಳಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಚಲಿಸುವ ವಾಹನಗಳು ಬನ್ನೇರುಘಟ್ಟ ರಸ್ತೆ ಮಾರ್ಗ – ನೈಸ್ ರಸ್ತೆ ಜಂಕ್ಷನ್ – ಶೇರ್‌ವುಡ್ ಜಂಕ್ಷನ್ – ಕೋಳಿಫಾರ್ಮ್ ಗೇಟ್ ಜಂಕ್ಷನ್ – ಬನ್ನೇರುಘಟ್ಟ ಗ್ರಾಮ – ಜಿಗಣಿ ಮೂಲಕ ಹೊಸೂರು ರಸ್ತೆ/ ಎಲೆಕ್ಟ್ರಾನಿಕ್ ಸಿಟಿಗೆ ತಲುಪಬಹುದು.
ದಾಬಸ್‌ಪೇಟೆ ಬಳಿ ಎಡ ತಿರುವು ತೆಗೆದುಕೊಳ್ಳುವ ಮೂಲಕ, ವಾಹನಗಳು ದೊಡ್ಡಬಳ್ಳಾಪುರ-ದೇವನಹಳ್ಳಿ-ಸೂಲಿಬೆಲೆ-ಹೊಸಕೋಟೆ ಮಾರ್ಗದಲ್ಲಿ ಸಾಗಿ ಚಂದಾಪುರ-ಅತ್ತಿಬೆಲೆ-ಹೊಸೂರು ರಸ್ತೆಯನ್ನು ತಲುಪಬಹುದು.
ಇದಲ್ಲದೆ, ಸಂಚಾರ ಪೊಲೀಸರು ಕೆಎಸ್ಆರ್ ರೈಲ್ವೆ ಪ್ಲಾಟ್‌ಫಾರ್ಮ್ 7 ಮತ್ತು 8ರಿಂದ ಖೋಡೆ ಅಂಡರ್‌ಪಾಸ್ ಮೂಲಕ ಮತ್ತು ಖೋಡೆ ವೃತ್ತದಿಂದ ಮಹಾರಾಣಿ ಸೇತುವೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಪರ್ಯಾಯವಾಗಿ, ಪ್ರಯಾಣಿಕರು ಎಲ್‌ಟಿಪಿ ರಸ್ತೆ, ಕಾಟನ್‌ಪೇಟೆ ಮುಖ್ಯ ರಸ್ತೆ, ಮೈಸೂರು ರಸ್ತೆ ಮತ್ತು ಮಾಗಡಿ ಮುಖ್ಯ ರಸ್ತೆ ಬಳಸುವಂತೆ ಕೋರಲಾಗಿದೆ.
ಶಾಂತಲ ಜಂಕ್ಷನ್‌ನಿಂದ ಖೋಡೆ ಜಂಕ್ಷನ್‌ಗೆ ಬರುವ ಎಲ್ಲಾ ವಾಹನಗಳು ಎಲ್‌ಟಿಪಿ ರಸ್ತೆ ಮತ್ತು ಕಾಟನ್‌ಪೇಟೆ ಮುಖ್ಯ ರಸ್ತೆ ಮೂಲಕ ಚಲಿಸಬೇಕು. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿರ್ಗಮನದಿಂದ ಖೋಡೆ ಜಂಕ್ಷನ್‌ಗೆ ಹೋಗುವ ಎಲ್ಲಾ ವಾಹನಗಳು ಎಲ್‌ಟಿಪಿ ರಸ್ತೆ ಮತ್ತು ಕಾಟನ್‌ಪೇಟೆ ಮುಖ್ಯ ರಸ್ತೆ ಮೂಲಕ ಚಲಿಸಬೇಕು. ಮೈಸೂರು ಬ್ಯಾಂಕ್‌ನಿಂದ ಚಾಲುಕ್ಯ ವೃತ್ತದ ಕಡೆಗೆ ಬರುವ ಎಲ್ಲಾ ವಾಹನಗಳು ಕೆಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆಜಿ ಜಂಕ್ಷನ್, ಎಲೈಟ್, ಟಿಬಿ ರಸ್ತೆ ಮತ್ತು ರಾಜೀವ್ ಗಾಂಧಿ ವೃತ್ತದ ಮೂಲಕ ಚಲಿಸಬೇಕು.
ಕಾಳಿದಾಸ ರಸ್ತೆಯಲ್ಲಿರುವ ಕನಕದಾಸ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ ಕಡೆಗೆ ಬರುವ ಎಲ್ಲಾ ವಾಹನಗಳು ಕನಕದಾಸ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಚಲಿಸಬಹುದು. ಮೌರ್ಯ/ಸುಬ್ಬಣ್ಣ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ ಕಡೆಗೆ ಬರುವ ಎಲ್ಲಾ ವಾಹನಗಳು ಸುಬ್ಬಣ್ಣ ಜಂಕ್ಷನ್‌ನಿಂದ ಬಲ ತಿರುವು ಪಡೆದು ಆನಂದ್ ರಾವ್ ವೃತ್ತದ ಕಡೆಗೆ ಚಲಿಸಬಹುದು. ಲಾಲ್‌ಬಾಗ್ ಮುಖ್ಯ ದ್ವಾರದಿಂದ ಲಾಲ್‌ಬಾಗ್ ಪಶ್ಚಿಮ ದ್ವಾರದ ಕಡೆಗೆ ಬರುವ ಎಲ್ಲಾ ವಾಹನಗಳು ಲಾಲ್‌ಬಾಗ್ ಮುಖ್ಯ ದ್ವಾರದ ಮುಂದೆ ಎಡ ತಿರುವು ಪಡೆದು ಅಥವಾ ಜೆಸಿ ರಸ್ತೆ ಮೂಲಕ ಬಲ ತಿರುವು ಪಡೆದು ಮುಂದುವರಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
