ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.50 ಕಿ.ಮೀ. ವಿಸ್ತಾರದ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇಂದು(ಆಗಸ್ಟ್ 10) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಆದರೆ ಈ ಕಾರ್ಯಕ್ರಮವನ್ನು ಸ್ಥಳದಲ್ಲೇ ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿಲ್ಲ.
ಈ ಬಗ್ಗೆ ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ. “ಆಗಸ್ಟ್ 10ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಮಾಡುವ ಕಾರ್ಯಕ್ರಮಕ್ಕೆ ಎಸ್‌ಪಿಜಿ ನಿಯಮಾವಳಿ ಪ್ರಕಾರ, ಭದ್ರತಾ ಕಾರಣಗಳಿಂದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನೇರವಾಗಿ ಸ್ಥಳದಲ್ಲಿ ಕಾರ್ಯಕ್ರಮವನ್ನು ವರದಿ ಮಾಡಲು ಅವಕಾಶವಿರುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ: ವೇದಿಕೆಯಲ್ಲಿ ವಿಪಕ್ಷ ನಾಯಕ ಅಶೋಕ್‌ಗಿಲ್ಲ ಆಹ್ವಾನ, ಪ್ರಿಯಾಂಕ್ ವ್ಯಂಗ್ಯ
“ಆದರೆ ಉದ್ಘಾಟನೆಯ ನೇರ ಪ್ರಸಾರದ ವಿಡಿಯೋ ಲಿಂಕ್ ಅನ್ನು ಮಾಧ್ಯಮಕ್ಕೆ ದೂರದರ್ಶನದ ಮೂಲಕ ಒದಗಿಸಲಾಗುತ್ತದೆ. ಸಂಬಂಧಿತ ಛಾಯಾಚಿತ್ರಗಳನ್ನು ಸಹ ಮಾಧ್ಯಮಗಳಿಗೆ ಲಭ್ಯವಿರಿಸಲಾಗುತ್ತದೆ. ನಿಮ್ಮ ಸಹಕಾರವನ್ನು ವಿನಂತಿಸುತ್ತೇವೆ” ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.
This video cannot be played in your browser. Open the video directly
ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮಗಳಿಗೆ ಇಷ್ಟೊಂದು ಭಯ ಪಡುತ್ತಾರೆ ಎಂದು ತಿಳಿದಿರಲಿಲ್ಲ ಎಂದು ನೆಟ್ಟಿಗರು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಈಗಾಗಲೇ ಮೂರು ಬಾರಿ ಪ್ರಧಾನಿಯಾದರೂ ಒಂದು ಬಾರಿಯೂ ಪತ್ರಿಕಾಗೋಷ್ಠಿ ನಡೆಸದೆ ಟೀಕೆಗೆ ಗುರಿಯಾಗಿರುವ ಪ್ರಧಾನಿ ಈಗ ಬೆಂಗಳೂರಿನಲ್ಲಿ ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ. “ನಮಗೆ ಪ್ರಶ್ನೆ ಕೇಳಿ ಅಭ್ಯಾಸ. ಅವರಿಗೆ(ಪ್ರಧಾನಿ ನರೇಂದ್ರ ಮೋದಿ) ಪ್ರಶ್ನೆ ಕೇಳಿಸಿಕೊಂಡು ಅಭ್ಯಾಸ ಇಲ್ಲ” ಎಂದಿದ್ದಾರೆ.





