ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿ ಹರಿದು ಇಬ್ಬರು ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಕೆ. ಆರ್. ಸರ್ಕಲ್ ಸಮೀಪ ನಡೆದಿದೆ.
ಭಾನುವಾರ ಬಿಬಿಎಂಪಿ ಕಸದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್, ಶಿಲ್ಪಾ ಅವರನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಪ್ರಶಾಂತ್, ಆಂಧ್ರ ಪ್ರದೇಶ ಮೂಲದ ಬಯನ್ನ ಗಾರಿ ಶಿಲ್ಪಾ ಟಿಸಿಎಸ್ ಕಂಪನಿ ಉದ್ಯೋಗಿಗಳಾಗಿದ್ದರು. ಭಾನುವಾರ ಊಟಕ್ಕಾಗಿ ಹೊರಗೆ ಬಂದಿದ್ದರು. ಈ ವೇಳೆ ಕೆ. ಆರ್. ಸರ್ಕಲ್ ಬಳಿ ತೆರಳುವಾಗ ಅಪಘಾತ ಸಂಭವಿಸಿದೆ.
ಇದನ್ನು ಓದಿದ್ದೀರಾ? ಬಿಬಿಎಂಪಿ ಕಸದ ಲಾರಿ ಅವೈಜ್ಞಾನಿಕ ಪಾರ್ಕಿಂಗ್; ಬೈಕ್ ಸವಾರ ಸಾವು
ಇನ್ನು ಅಪಘಾತದ ಬಳಿಕ ಬಿಬಿಎಂಪಿ ಕಸದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಲಾರಿ ಚಾಲಕನ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು ಮೃತ ಟೆಕ್ಕಿ ಪ್ರಶಾಂತ್ ತಂದೆ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ನನ್ನ ಮಗ ಇದೇ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಜನಿಸಿದ್ದ. ಈಗ ಇಲ್ಲೇ ಸಾವನ್ನಪ್ಪಿದ್ದಾನೆ. ಈ ಅಪಘಾತ ಮಾಡಿದ ಲಾರಿ ಚಾಲಕನನ್ನು ಕೂಡಲೇ ಬಂಧಿಸಬೇಕು. ನಮಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
2022ರ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ಬಿಬಿಎಂಪಿ ಲಾರಿ ಹರಿದು ಸಾವು ಸಂಭವಿಸಿದ ನಾಲ್ಕು ಪ್ರಕರಣಗಳು ನಡೆದಿದೆ. 2022ರ ಏಪ್ರಿಲ್ ತಿಂಗಳಿನಲ್ಲಿ ಕಸದ ಲಾರಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.
ಅದಾದ ಬಳಿಕ 2022ರ ಮಾರ್ಚ್ 21ರಂದು ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ 14 ವರ್ಷದ ಬಾಕಿ ಸಾವನ್ನಪ್ಪಿದ್ದಳು. ಅದೇ ತಿಂಗಳ 31ರಂದು ನಡೆದ ಅಪಘಾತದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಬಳಿಕ 2022ರ ಮೇ ತಿಂಗಳಿನಲ್ಲಿ ನಡೆದ ಪ್ರಕರಣದಲ್ಲಿ ಡೆಲಿವರಿ ಬಾಯ್ ಒಬ್ಬರು ಸಾವನ್ನಪ್ಪಿದ್ದರು.