ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಪಾರ್ಕ್ ಮಾಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ಲಾರಿಗೆ ಬೈಕ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ರಾತ್ರಿ 12ಕ್ಕೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ರಾಮನಗರ ಜಿಲ್ಲೆ ಕಲ್ಲಿಗೌಡನದೊಡ್ಡಿ ನಿವಾಸಿ ಜಯಲಿಂಗ(26) ಮೃತಪಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಜೆ.ಪಿ.ನಗರ ಏಳನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಜಯನಗರ ಮೆಟ್ರೋ ನಿಲ್ದಾಣದ ಬಳಿ ಅವೈಜ್ಞಾನಿಕವಾಗಿ ಬಿಬಿಎಂಪಿ ಕಸದ ಲಾರಿಯನ್ನು ಪಾರ್ಕ್ ಮಾಡಲಾಗಿತ್ತು. ಜಯಲಿಂಗ ಅವರು ಬನಶಂಕರಿಯಿಂದ ಸೌತ್ ಎಂಡ್ ಸರ್ಕಲ್ ಮೂಲಕ ಬರುತ್ತಿದ್ದರು. ಈ ವೇಳೆ, ಬೈಕ್ ನಿಯಂತ್ರಣಕ್ಕೆ ಸಿಗದೆ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಬೈಕ್ ಮತ್ತು ಮೃತದೇಹ ಲಾರಿಗೆ ಕೆಳಗೆ ಸಿಲುಕಿಕೊಂಡಿತ್ತು. ಪೊಲೀಸರು ಸತತವಾಗಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಮೃತದೇಹವನ್ನು ಹೊರ ತೆಗೆದಿದ್ದಾರೆ. ಜಯಲಿಂಗ ಅವರು ಹೆಂಡತಿ ಮತ್ತು 7 ತಿಂಗಳ ಮಗವನ್ನು ಅಗಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೌರ ಕಾರ್ಮಿಕ ದಿನಾಚರಣೆಯ ಜೊತೆಗೆ ತಾರತಮ್ಯ, ಅವಮಾನ, ಶೋಷಣೆಯೂ ಇದೆ…
ಸದ್ಯ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೆಟ್ರೋ ನಿಲ್ದಾಣದ ಕೆಳಗೆ ಬಿಬಿಎಂಪಿ ಕಸದ ಲಾರಿಯನ್ನು ಅವೈಜ್ಞಾನಿಕ ಪಾರ್ಕಿಂಗ್ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೃತವ್ಯಕ್ತಿ ಜಯಲಿಂಗ ಅವರು ಸಹ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.