ಕಳೆದ ಒಂದು ವರ್ಷದಿಂದ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದ ಪ್ಯಾಲೆಸ್ತೀನ್ ಧ್ವಂಸವಾಗಿದೆ. ಈಗ ಇರಾನ್, ಸಿರಿಯಾ, ಯೆಮೆನ್ ಮತ್ತು ಲೆಬನಾನ್ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ನಡೆಸಿದ ಕ್ರೂರ ದಾಳಿಯಲ್ಲಿ ಕನಿಷ್ಟ 16,500 ಮಕ್ಕಳೂ ಸೇರಿ ಸುಮಾರು 1,86,000 ಜನ ಸಾವನ್ನಪ್ಪಿದ್ದಾರೆ. ಇದನ್ನು ಖಂಡಿಸಿ ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಪ್ರತಿಭಟನೆಯನ್ನು ಆಯೋಜಿಸಿತ್ತು.
ಪ್ರತಿಭಟನೆಯಲ್ಲಿ ನಾಗರಿಕರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು, ಮಹಿಳಾ ಹಕ್ಕುಗಳ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಸೇರಿದಂತೆ ನಜನರು ಭಾಗಿಯಾಗಿ ಪ್ಯಾಲೇಸ್ತೀನ್ ಪರ ನಾವಿದ್ದೇವೆ ಎಂಬ ನಿಲುವು ಸೂಚಿಸಿದರು.
ಪ್ಯಾಲೆಸ್ತೀನಿಯರನ್ನ ಕೊಲ್ಲುವುದು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸುವುದು, ಬಂಧಿತರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರಿಗೆ ಚಿತ್ರಹಿಂಸೆ ನೀಡುವುದು ಸೇರಿದಂತೆ ಪ್ಯಾಲೇಸ್ಟಿನಿಯನರ ಜೀವನವನ್ನು ನಾಶಪಡಿಸಲು ಇಸ್ರೇಲ್ ಮುಂದಾಗಿದೆ. ಇಸ್ರೇಲ್‌ನ ಈ ನಡೆ ಖಂಡನೀಯ. ಹಾಗಾಗಿ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಕ್ಷಣವೇ ಇಸ್ರೇಲ್ ಆಡಳಿತದೊಂದಿಗಿನ ಸಂಬಂಧವನ್ನು ಕಡಿತಗೊಳಿಸಬೇಕು. ಪ್ಯಾಲೆಸ್ತೀನಿಯರ ನರಮೇಧದಲ್ಲಿ ಭಾಗಿಯಾಗುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ನಡುವೆ ಯುದ್ಧ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಕನಿಷ್ಠ 16,500 ಮಕ್ಕಳನ್ನು ಒಳಗೊಂಡಂತೆ ಸುಮಾರು 1,86,000 ಪ್ಯಾಲೆಸ್ತೀನಿಯರನ್ನು ಕೊಂದಿರುವ ಬಗ್ಗೆ ವರದಿಯಾಗಿದೆ. ಪ್ಯಾಲೆಸ್ತೀನ್‌ನಲ್ಲಿ 2.3 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಈ ಯುದ್ಧದಲ್ಲಿ 20,000 ಪ್ಯಾಲೇಸ್ತೀನರು ಕಾಣೆಯಾಗಿದ್ದಾರೆ. 902 ಗಾಝಾ ಕಟುಂಬಗಳನ್ನು ನಾಶ ಮಾಡಿದ್ದಾರೆ. 1,364 ಕುಟುಂಬಗಳಲ್ಲಿ ಕೇವಲ ಒಬ್ಬರು ಬದುಕಿ ಉಳಿದಿದ್ದಾರೆ.
ಪ್ರತಿಭಟನೆಯಲ್ಲಿದ್ದ ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹಮದ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಗಾಝಾ, ಲೆಬನಾನ್, ಸಿರಿಯಾ ಮೇಲೆ ಇಸ್ರೇಲ್ ತನ್ನ ನರಮೇಧ ಮುಂದುವರೆಸಿದೆ. ಅದರ ವಿರುದ್ಧವಾಗಿ ಈಗ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡನೀಯ. ಇದರ ವಿರುದ್ಧವಾಗಿ ನಾವು ನಿಲ್ಲುತ್ತಿದ್ದೇವೆ. ಇಸ್ರೇಲ್ ಜತೆಗೆ ಅಮೆರಿಕಾ ಮತ್ತು ಭಾರತ ಕೈಜೋಡಿಸುತ್ತಿರುವುದನ್ನ ಖಂಡಿಸುತ್ತೇವೆ. ವಿಶ್ವದ ರಾಜ್ಯಗಳು ಇಸ್ರೇಲ್ ಜತೆಗೆ ಯಾವುದೇ ರೀತಿಯ ವ್ಯವಹಾರ ಒಪ್ಪಂದಗಳನ್ನ ಇಟ್ಟುಕೊಳ್ಳಬಾರದು. ಒಳಒಪ್ಪಂದಗಳನ್ನ ಕೈ ಬಿಡಬೇಕು. ಇಸ್ರೇಲ್ ಕಡೆಗೆ ದುಡ್ಡು ಇರಬಹುದು, ಆದರೆ, ನ್ಯಾಯ ಅಂತೂ ಇಲ್ಲ. ಪ್ಯಾಲೇಸ್ತೀನ ಜತೆಗೆ ನಾವಿದ್ದೇವೆ. ಒಂದು ಮಗುವಿನ ಮೇಲೆ ಬಾಂಬ್ ಹಾಕಿ ಮಗುವನ್ನ ಕೊಲೆ ಮಾಡುವುದು ನಿಮಗೆ ಸರಿ ಅನಿಸಬಹುದು. ಆದರೆ, ಅಂತಹ ಅಮಾನವೀಯ ಕೃತ್ಯವನ್ನ ನಾವು ಖಂಡಿಸುತ್ತೇವೆ” ಎಂದಿದ್ದಾರೆ.
ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮಧು ಮಾತನಾಡಿ, “ಈ ಇಸ್ರೇಲ್ – ಪ್ಯಾಲೇಸ್ತೀನ್ ಚರಿತ್ರೆ ಕಳೆದ ಒಂದು ವರ್ಷದಲ್ಲ. ಇದರ ಇತಿಹಾಸ ಬಹಳ ಹಳೆಯದು. ಎರಡನೇ ಮಹಾಯುದ್ಧದ ಸಮಯದಲ್ಲಿ ಈ ಯುದ್ದ ಎಂಬುದು ಆರಂಭವಾಗಿದೆ. ಇದಕ್ಕೆ ಕಾರಣ ನಾಜಿ ಜರ್ಮನಿ. ಅಮೆರಿಕಾ ಸೇರಿದಂತೆ ವಿಶ್ವದ ಜನರು ಇಸ್ರೇಲ್ ಈ ನರಮೇಧವನ್ನ ತೀವ್ರವಾಗಿ ಖಂಡಿಸುತ್ತಿದ್ದಾರೆ. ಪ್ಯಾಲೆಸ್ತೀನ್ ಪರ ತಮ್ಮ ನಿಲುವನ್ನು ಸೂಚಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಆಟೋ ಚಾಲಕ ಸಾಬೀರ್ ಅಲಿ ಮಾತನಾಡಿ, “ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ ಎಲ್ಲರಿಗೂ ತಿಳಿದೆ ಇದೆ. ಆ ಕಾಲದಲ್ಲಿ ಹಿಟ್ಲರ್ ಇಸ್ರೇಲ್ ಎಲ್ಲ ಜನರನ್ನ ಸಾಯಿಸಿ ಒಂದು 600 ಜನರನ್ನ ಅಷ್ಟೇ ಉಳಿಸಿದ್ರು, ಇವರು ಇದ್ದಿದ್ದೆ ಸ್ವಲ್ಪ ಜನ ಇವರಿಗೆ ಆಶ್ರಯ ಕೊಟ್ಟಿದ್ದು, ಪ್ಯಾಲೇಸ್ತೀನಿಯರು, ಅವರಿಗೆ ಅನ್ನ ಕೊಟ್ಟ ಪ್ಯಾಲೇಸ್ತೀನಿಯರ ಮೇಲೆ ಇಸ್ರೇಲ್ ನವರು ದೌರ್ಜನ್ಯ ಮಾಡುತ್ತಿದ್ದಾರೆ. ಅವರ ಮನೆಯ ಅನ್ನ ತಂದು ಅವರನ್ನೇ ಅವರ ಮನೆಯಿಂದ ಒದ್ದು ಓಡಿಸುತ್ತಿದ್ದಾರೆ. ನಮಗೆ ಯಾರಾದರೂ ಆಶ್ರಯ ಕೊಟ್ಟರೇ, ಅವರಿಗೆ ನಾವು ಆದಷ್ಟು ಸಹಾಯ ಮಾಡಬೇಕು. ಆದರೆ, ಇಸ್ರೇಲ್ ಈ ರೀತಿ ಕೃತ್ಯ ನಡೆಸುತ್ತಿದೆ. ಎಲ್ಲರಿಗೂ ಬದುಕುವ ಹಕ್ಕಿದೆ. ಅದು ಅವರ ಮನೆಯಲ್ಲಿ ಅವರನ್ನ ಬದೋದೋಕೆ ಬಿಡದೇ ಇರೋದು ನಿಜಕ್ಕೂ ಇದು ಟೆರೆರಿಸಮ್” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲೆನಾಡಿನ ಪ್ರಮುಖ ಬಿಕ್ಕಟ್ಟು, ಪರಿಹಾರ ಮಾರ್ಗ ಕುರಿತು ಶಾಸಕರ ಭವನ-2ರಲ್ಲಿ ದುಂಡು ಮೇಜಿನ ಸಭೆ
ಜೈ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಮಾತನಾಡಿ, “ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ದೌರ್ಜನ್ಯವನ್ನ ಖಂಡಿಸಿ, ಪ್ಯಾಲೆಸ್ತೀನ್ ಪರ ಬೆಂಬಲ ಸೂಚಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಅವರ ಜಾಗದಲ್ಲಿ ಬಂದು ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ. ಅನ್ಯಾಯದ ವಿರುದ್ಧ ನಾವಿದ್ದೇವೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಎಲ್ಲಿ ಅನ್ಯಾಯ ಆಗುತ್ತದೆ. ಎಲ್ಲಿ ಜನರ ಮೇಲೆ ಅನ್ಯಾಯ ಆಗುತ್ತದೆ ಅದನ್ನು ತಡೆಯಬೇಕು” ಎಂದು ಹೇಳಿದರು.
ಈ ವೇಳೆ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸನ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

