ಸಹಾಯವಾಣಿ ಹೆಸರಿನಲ್ಲಿ ಬಂದ ಕರೆಯನ್ನು ಸ್ವೀಕರಿಸಿದ ಮಹಿಳೆ, ವಂಚಕರು ಹೇಳಿದ ನಂಬರ್ ಒತ್ತಿ 2 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಂಚಕರು ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು, ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿದ್ದಾರೆ. ಮಹಿಳೆಯ ಕರೆ ಸ್ವೀಕರಿಸಿದಾಗ, ‘ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ವರ್ಗಾವಣೆ ಆಗುತ್ತಿದೆ. ನೀವೇ ಹಣ ವರ್ಗಾವಣೆ ಮಾಡುತ್ತಿದ್ದರೆ 3ನ್ನು ಒತ್ತಿ, ಇಲ್ಲವಾಗಿದ್ದರೆ, 1ನ್ನು ಒತ್ತಿ’ ಎಂದು ವಂಚಕರು ಹೇಳಿದ್ದಾರೆ.
ತಾವು ಹಣ ವರ್ಗಾವಣೆ ಮಾಡುತ್ತಿಲ್ಲವೆಂದ ಮಹಿಳೆಯು ವಂಚಕರು ಹೇಳಿದಂತೆ 1ನ್ನು ಒತ್ತಿದ್ದಾರೆ. ಕೂಡಲೇ ಅವರ ಖಾತೆಯಿಂದ 2 ಲಕ್ಷ ರೂ. ವರ್ಗಾವಣೆಯಾಗಿದೆ.
ಹಣ ಕಡಿತಗೊಂಡ ಮೆಸೇಜ್ ಸ್ವೀಕರಿಸಿದ ಮಹಿಳೆ, ತಕ್ಷಣವೇ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದಾರೆ. ಹಣ ಕಡಿತಗೊಂಡಿರುವುದನ್ನು ಬ್ಯಾಂಕ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಂತರ, ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ (1930)ಗೆ ಮಹಿಳೆ ದೂರು ನೀಡಿದ್ದಾರೆ. ಬಳಿಕ, ಗಿರಿನಗರ ಪೊಲೀಸ್ ಠಾಣೆಗೆ ತೆರಳಿ, ಲಿಖಿತ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.