ಯುವತಿಗೆ ಅಶ್ಲೀಲ ಸಂದೇಶ ಕಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಮೇಲೆ ಪುಂಡರ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಕುಶಾಲ್ ಹಲ್ಲೆಗೊಳಗಾದ ಯುವಕ. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಲೇಜಿನ ದಿನಗಳಲ್ಲಿ ಕುಶಾಲ್ ಮತ್ತು ಯುವತಿ ಸ್ನೇಹಿತರಾಗಿದ್ದು, ನಂತರ ಪರಸ್ಪರ ದೂರವಾಗಿದ್ದರು. ಈ ವೇಳೆ ಯುವತಿಗೆ ಬೇರೊಬ್ಬ ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸದ ಕುಶಾಲ್ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ನಂತರದಲ್ಲಿ ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿಕೊಂಡು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಅಂತ ಕುಶಾಲ್ನನ್ನು ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡು ಅಪಹರಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ
ಬಳಿಕ, ಆರೋಪಿಗಳು ಕುಶಾಲ್ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಶಾಲ್ನ ಬಟ್ಟೆ ಬಿಚ್ಚಿ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ. ಕುಶಾಲ್ನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿರುವುದನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಆರೋಪಿಗಳು, ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ ಇದೂ ಆಗುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಬಳಿಕ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಕುಶಾಲ್ಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಈ ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಬಂಧಿತರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
