ಪದ್ಮಶ್ರೀ ಪುರಸ್ಕೃತ ಕವಿ ಮತ್ತು ಮಾಜಿ ಎಂಎಲ್‌ಸಿ ದೊಡ್ಡರಂಗೇಗೌಡ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದರು. ಭಾನುವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಮಾತನಾಡುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜಿಎಸ್ ಆಸ್ಪತ್ರೆಗೆ ‘ಈ ದಿನ.ಕಾಂ‘ ಕರೆ ಮಾಡಿ ವಿಚಾರಿಸಿದಾಗ, “ದೊಡ್ಡರಂಗೇಗೌಡರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ತಜ್ಞ ವೈದ್ಯರೇ ಉತ್ತರಿಸಬೇಕು” ಎಂದಷ್ಟೇ ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.
ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದಿರುವ ದೊಡ್ಡರಂಗೇಗೌಡರು ಸುಮಾರು 56ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇದುವರೆಗೂ 500ಕ್ಕೂ ಕನ್ನಡ ಚಲನಚಿತ್ರ ಗೀತೆಗಳನ್ನು ಬರೆದು ಖ್ಯಾತಿ ಗಳಿಸಿದ್ದಾರೆ.
1997ರಲ್ಲಿ ‘ಜನುಮದ ಜೋಡಿ’ ಚಿತ್ರಕ್ಕೆ ಬರೆದ ಜಾನಪದೀಯ ಗೀತೆಗೆ ‘ವರ್ಷದ ಶ್ರೇಷ್ಠ’ ಗೀತೆ ಎಂದು ಬೆಳ್ಳಿ ಪದಕದೊಂದಿಗೆ ಪುರಸ್ಕಾರ ದೊರೆತಿದೆ. 2021ರಲ್ಲಿ ನಡೆದ 86ನೇ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ ದೊಡ್ಡರಂಗೇಗೌಡರಿಗೆ ಒಲಿದಿದೆ.
1972ರಿಂದ 2004ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. 2008ರಿಂದ 2014ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು. 2018ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.